
ರಾಜೀನಾಮೆಗೆ ಒಪ್ಪದ ಹೊರಟ್ಟಿ, ಮಧ್ಯರಾತ್ರಿ ಭೇಟಿಯಾದ ಡಿಕೆ ಶಿವಕುಮಾರ್
ಬುಧವಾರ ತಡರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿರುವ ಬೆನ್ನಲ್ಲೇ, ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರೂ ಹೊರಟ್ಟಿ ತಮ್ಮ ನಿಲುವಿನಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ, ಸಿಎಂ ನಿವಾಸಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದರು.
ಹೊರಟ್ಟಿ ನಿವಾಸದಲ್ಲಿ ಸಿಎಂ ಸಭೆ
ಬುಧವಾರ ತಡರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಯು.ಟಿ. ಖಾದರ್, ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಮತ್ತು ಶಾಸಕರು ಉಪಸ್ಥಿತರಿದ್ದರು.
ರಾಜೀನಾಮೆಗೆ ಕಾಂಗ್ರೆಸ್ ಮನವಿ
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಲೀಂ ಅಹ್ಮದ್ ಅವರ ಹೆಸರನ್ನು ಅಂತಿಮಗೊಳಿಸಿದ ಹಿನ್ನೆಲೆಯಲ್ಲಿ, ಹೊರಟ್ಟಿ ಅವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ನೀಡುವುದರ ಜೊತೆಗೆ, ಸ್ವತಃ ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕವೂ ಸಂಪರ್ಕಿಸಿ ರಾಜೀನಾಮೆ ಸಲ್ಲಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.
ಆದರೆ, ಹೊರಟ್ಟಿ ಅವರು ರಾಜೀನಾಮೆ ನೀಡಲು ನಿರಾಕರಿಸಿ, "ನನ್ನನ್ನು ತೆರವುಗೊಳಿಸಬೇಕಾದರೆ ಅವಿಶ್ವಾಸ ನಿರ್ಣಯ ಮಂಡಿಸಿ" ಎಂದು ಸವಾಲು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನವೊಲಿಕೆ ಯತ್ನ
ಈ ಬೆಳವಣಿಗೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ನೇರವಾಗಿ ಹೊರಟ್ಟಿ ನಿವಾಸಕ್ಕೆ ತೆರಳಿ ಪಕ್ಷದ ನಿಲುವು ವಿವರಿಸಿ, ರಾಜೀನಾಮೆ ನೀಡುವಂತೆ ಮತ್ತೊಮ್ಮೆ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಸಭೆಯ ಬಳಿಕ ಹೊರಟ್ಟಿ ತಮ್ಮ ಅಂತಿಮ ನಿರ್ಧಾರವನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಸಭಾಪತಿ ಸ್ಥಾನ ಕುರಿತ ರಾಜಕೀಯ ಬೆಳವಣಿಗೆಗಳು ಇನ್ನಷ್ಟು ಕುತೂಹಲ ಮೂಡಿಸಿವೆ.
'ಇತಿಹಾಸದಲ್ಲೇ ಇದೇ ಮೊದಲು'
ಈ ವಿಚಾರವಾಗಿ ಈ ಹಿಂದೆ ಪ್ರತಿಕ್ರಿಯಿಸಿದ್ದ ಬಸವರಾಜ ಹೊರಟ್ಟಿ, ಸಭಾಪತಿ ಹಾಗೂ ಉಪಸಭಾಪತಿ ಆಯ್ಕೆಗೆ ಒಂದು ಸಂಪ್ರದಾಯ ಮತ್ತು ಗೌರವವಿದೆ ಎಂದು ಹೇಳಿದ್ದರು. "ಒಂದು ಪಕ್ಷದ ಹೈಕಮಾಂಡ್ ತನ್ನ ಲೆಟರ್‌ಹೆಡ್‌ನಲ್ಲಿ ಸಭಾಪತಿ ಮತ್ತು ಉಪಸಭಾಪತಿ ಅಭ್ಯರ್ಥಿಗಳ ಹೆಸರನ್ನು ಕಳುಹಿಸಿರುವುದು ಇತಿಹಾಸದಲ್ಲೇ ಇದೇ ಮೊದಲು. ಹಿಂದೆ ನೈತಿಕತೆ ಆಧಾರಿತ ರಾಜಕಾರಣ ಇತ್ತು. ಈಗ ಹಣ ಮತ್ತು ರಾಜಕೀಯ ಬಲದ ಆಧಾರದಲ್ಲಿ ನಿರ್ಧಾರಗಳು ನಡೆಯುತ್ತಿವೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
ಸದನದ ಸಾರ್ವಭೌಮತ್ವಕ್ಕೆ ಧಕ್ಕೆ
ಸಭಾಪತಿ ಹಾಗೂ ಸ್ಪೀಕರ್ ಆಯ್ಕೆ ಮಾಡುವ ಅಧಿಕಾರ ಸದನಕ್ಕೇ ಸೇರಿದ್ದು, ಹೊರಗಿನಿಂದ ಅಭ್ಯರ್ಥಿಗಳನ್ನು ನಿರ್ಧರಿಸುವುದು ಸದನದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕ್ರಮ ಎಂದು ಹೊರಟ್ಟಿ ಟೀಕಿಸಿದ್ದರು. ಇದಲ್ಲದೆ, ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸದೇ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಿಸಿರುವುದು ಸರಿಯಾದ ಕ್ರಮವಲ್ಲ. ತಮ್ಮನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ನೋವು ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

