x

ನನ್ನಿಂದ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಪಡೆದ ರೀತಿ ಆಘಾತ ತಂದಿದೆ: ಬಸವರಾಜ ಹೊರಟ್ಟಿ


Click the Play button to hear this message in audio format

ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ತಮ್ಮನ್ನು ಬಲವಂತವಾಗಿ ಕೆಳಗಿಳಿಸಿದ ಕಾಂಗ್ರೆಸ್ ನಾಯಕರ ನಡೆಯ ಬಗ್ಗೆ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1956ರಿಂದ ಈವರೆಗಿನ ವಿಧಾನ ಪರಿಷತ್ ಇತಿಹಾಸದಲ್ಲಿ ಯಾವೊಬ್ಬ ಸಭಾಪತಿಗೂ ಈ ರೀತಿಯ ಅವಮಾನವಾಗಿರಲಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.

'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಅವರು, ರಾಜೀನಾಮೆ ಪಡೆದ ರೀತಿ, ಸದನದ ಸಾರ್ವಭೌಮತ್ವಕ್ಕೆ ಆಗಿರುವ ಧಕ್ಕೆ ಹಾಗೂ ತಮ್ಮ ಮೇಲಿನ ನೇಮಕಾತಿ ಭ್ರಷ್ಟಾಚಾರದ ಆರೋಪಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಆಸ್ಪತ್ರೆಯಲ್ಲಿದ್ದಾಗಲೇ ಬಂದಿತ್ತು ದಿಢೀರ್ ಕರೆ

ಸಭಾಪತಿಯಾಗಿ ತಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಸ್ವಜನ ಪಕ್ಷಪಾತ ಮಾಡಿಲ್ಲ ಹಾಗೂ ಸರ್ಕಾರಕ್ಕಾಗಲಿ, ವಿರೋಧ ಪಕ್ಷಕ್ಕಾಗಲಿ ಮುಜುಗರ ತರುವಂತಹ ಯಾವುದೇ ಕೆಲಸ ಮಾಡಿಲ್ಲ. ಆದರೂ ಏಕಾಏಕಿ ರಾಜೀನಾಮೆ ನೀಡುವಂತೆ ಸೂಚಿಸಿದ್ದು ತಮಗೆ ತೀವ್ರ ಆಘಾತ ತಂದಿತು ಎಂದು ಹೊರಟ್ಟಿ ವಿವರಿಸಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ, ಕೈಗೆ ಡ್ರಿಪ್ ಹಾಕಿಸಿಕೊಂಡಿದ್ದ ರಾತ್ರಿ ವೇಳೆ ಮುಖ್ಯಮಂತ್ರಿಗಳಿಂದ ಕರೆ ಬಂದಿತ್ತು. ಆರೋಗ್ಯ ವಿಚಾರಿಸಲು ಕರೆ ಮಾಡಿದ್ದಾರೆ ಎಂದು ಭಾವಿಸಿದ್ದ ತಮಗೆ, ಮರುದಿನವೇ ರಾಜೀನಾಮೆ ನೀಡುವಂತೆ ಸೂಚಿಸಿದ್ದು ಅಚ್ಚರಿ ಮೂಡಿಸಿತ್ತು ಎಂದು ಅವರು ಆ ದಿನದ ಘಟನೆಯನ್ನು ಮೆಲುಕು ಹಾಕಿದರು.

ಒಪ್ಪಂದ ಮುರಿದು ಕಚೇರಿಯಲ್ಲೇ ಒತ್ತಡದ ಹೇರಿಕೆ

ಆರಂಭದಲ್ಲಿ ಮುಖಂಡರ ನಡುವೆ ಒಂದು ಒಪ್ಪಂದವಾಗಿತ್ತು. ಅದರಂತೆ ೧೩ನೇ ತಾರೀಕು ಸದನ ನಡೆಸಿ, ೧೪ನೇ ತಾರೀಕು ಉಪಸಭಾಪತಿ ಚುನಾವಣೆ ಪೂರ್ಣಗೊಳಿಸಿ, ಬಳಿಕ ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡಲು ತೀರ್ಮಾನಿಸಲಾಗಿತ್ತು. ಈ ಪ್ರಕ್ರಿಯೆಗೆ ತಾವು ಮಾನಸಿಕವಾಗಿ ಸಿದ್ಧರಾಗಿದ್ದಾಗಿ ಹೊರಟ್ಟಿ ತಿಳಿಸಿದ್ದಾರೆ. ಆದರೆ, ೭ನೇ ತಾರೀಕಿನಂದು ನೂತನ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಪ್ರಮಾಣ ವಚನ ಬೋಧಿಸಲು ಕಚೇರಿಯಲ್ಲಿ ಕುಳಿತಿದ್ದಾಗ, ಏಕಾಏಕಿ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ನಾಯಕರು ಒಳಬಂದು ಇಂದೇ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು. ಕೇವಲ ಎರಡು ಸಾಲಿನ ರಾಜೀನಾಮೆ ಪತ್ರವನ್ನು ಅವರೇ ಟೈಪ್ ಮಾಡಿಸಿಕೊಂಡು ತಂದು, ಸುಮಾರು ಒಂದೂವರೆ ಗಂಟೆಗಳ ಕಾಲ ಕಚೇರಿಯಲ್ಲಿಯೇ ಕುಳಿತು ಬಲವಂತವಾಗಿ ಸಹಿ ಹಾಕಿಸಿಕೊಂಡರು. ಆ ಕ್ಷಣದಲ್ಲಿ ತಮ್ಮ ಮನಸ್ಥಿತಿ ಸಂಪೂರ್ಣ ಶೂನ್ಯವಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ್ದು ತಪ್ಪೆಂದ ಒಪ್ಪಿಕೊಂಡ ಹೊರಟ್ಟಿ

ರಾಜೀನಾಮೆ ಪ್ರಹಸನದ ನಡುವೆಯೇ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ ವಿಚಾರದ ಕುರಿತೂ ಅವರು ಸ್ಪಷ್ಟನೆ ನೀಡಿದ್ದಾರೆ. ಸಭಾಪತಿ ಸ್ಥಾನದಲ್ಲಿರುವವರು ರಾಜಕೀಯ ಕಾರಣಗಳಿಗಾಗಿ ಮುಖ್ಯಮಂತ್ರಿಗಳ ಮನೆಗೆ ಹೋಗಬಾರದು ಎಂಬ ಅರಿವು ತಮಗಿತ್ತು. ಆದರೆ, ಕರೆ ಬಂದಾಗ ಕೇವಲ ಸೌಜನ್ಯದ ದೃಷ್ಟಿಯಿಂದ ಹಾಗೂ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಹೋಗಿದ್ದೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಯಲಿಲ್ಲ. ಆದರೂ ಆ ಸಂದರ್ಭದಲ್ಲಿ ಅಲ್ಲಿಗೆ ಹೋಗಬಾರದಾಗಿತ್ತು ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ.

ಸದನದ ಸಾರ್ವಭೌಮತ್ವಕ್ಕೆ ಧಕ್ಕೆ

ವಿಧಾನ ಪರಿಷತ್ತಿನ ಸಭಾಪತಿ ಅಥವಾ ಉಪಸಭಾಪತಿಯನ್ನು ಆಯ್ಕೆ ಮಾಡುವುದು ಹಾಗೂ ಕೆಳಗಿಳಿಸುವುದು ಆಯಾ ಸದನದ ಪರಮಾಧಿಕಾರ. ಆದರೆ, ದೆಹಲಿಯ ಹೈಕಮಾಂಡ್ ಕಚೇರಿಯಿಂದ ಪಕ್ಷದ ಲೆಟರ್ ಹೆಡ್ ಮೂಲಕ ಇಂಥವರನ್ನೇ ಸಭಾಪತಿ, ಉಪಸಭಾಪತಿ ಮಾಡಬೇಕು ಎಂದು ಸೂಚನೆ ಬರುವುದು ತಪ್ಪು ಸಂಪ್ರದಾಯ. ಇದು ನೇರವಾಗಿ ಸದನದ ಸಾರ್ವಭೌಮತ್ವವನ್ನು ಕಿತ್ತುಕೊಂಡಂತೆ ಎಂದು ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಸಭಾಪತಿ ಸ್ಥಾನ ಎನ್ನುವುದು ಪಕ್ಷಾತೀತವಾದ ಸಾಂವಿಧಾನಿಕ ಹುದ್ದೆಯಾಗಿದ್ದು, ಇಂತಹ ನಡೆಗಳು ವ್ಯವಸ್ಥೆಗೆ ಮಾರಕ ಎಂದು ಅವರು ಎಚ್ಚರಿಸಿದ್ದಾರೆ.

ಭ್ರಷ್ಟಾಚಾರ ಸಾಬೀತಾದರೆ ಗಲ್ಲಿಗೇರಿಸಲಿ: ಬಹಿರಂಗ ಸವಾಲು

ಸಭಾಪತಿಯಾಗಿದ್ದ ಅವಧಿಯಲ್ಲಿ ನಡೆದ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ಅವರು ಕಟುವಾಗಿ ತಳ್ಳಿಹಾಕಿದ್ದಾರೆ. ಕಚೇರಿಯಲ್ಲಿ ದಿನಗೂಲಿ ಆಧಾರದ ಮೇಲೆ, ಪೇಪರ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ ಅತ್ಯಂತ ಬಡ ಹಿನ್ನೆಲೆಯ ಆರು ಯುವಕರಿಗೆ ಕಾನೂನುಬದ್ಧವಾಗಿ ಉದ್ಯೋಗ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ತಾವು ಒಂದು ನಯಾಪೈಸೆ ಹಣ ಪಡೆದಿರುವುದನ್ನು ಯಾರಾದರೂ ಸಾಬೀತುಪಡಿಸಿದರೆ, ಇಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ, ಬೇಕಾದರೆ ನನ್ನನ್ನು ಗಲ್ಲಿಗೇರಿಸಲಿ ಎಂದು ನೇರ ಸವಾಲು ಎಸೆದಿದ್ದಾರೆ. ಆಧಾರರಹಿತ ಆರೋಪ ಮಾಡುವವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.

ಹಿಂಬದಿ ಆಸನವೇ ಸಾಕು

ಸಭಾಪತಿ ಹುದ್ದೆಯಿಂದ ಕೆಳಗಿಳಿದ ಬಳಿಕ ಸಾಮಾನ್ಯ ಸದಸ್ಯನಾಗಿ ಸದನದಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ಮಾತನಾಡಿದ ಅವರು, ಕರ್ತವ್ಯ ನಿರ್ವಹಣೆ ತಮ್ಮ ಜವಾಬ್ದಾರಿ ಎಂದಿದ್ದಾರೆ. ತಮಗೆ ಮುಂದಿನ ಸಾಲಿನಲ್ಲಿ ಆಸನ ಬೇಡ, ಬದಲಾಗಿ 65ನೇ ಕ್ರಮಾಂಕದ ಹಿಂಬದಿಯ ಆಸನವನ್ನೇ ನೀಡುವಂತೆ ಅಧಿಕೃತವಾಗಿ ಪತ್ರ ಬರೆದು ಕೇಳಿರುವುದಾಗಿ ಅವರು ತಿಳಿಸಿದ್ದಾರೆ. ತಮ್ಮನ್ನು ಬಲವಂತವಾಗಿ ಕೆಳಗಿಳಿಸಿದ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹೇಳುವ ಮೂಲಕ ಬಸವರಾಜ ಹೊರಟ್ಟಿ ಮಾತು ಮುಗಿಸಿದ್ದಾರೆ.

Read More
Next Story