Exclusive Interview| ವಿಜಯೇಂದ್ರ ಪಾದಯಾತ್ರೆಗೆ ಡಿಕೆಶಿ ಮಾರ್ಗದರ್ಶನ: ಯತ್ನಾಳ್ ಸ್ಫೋಟಕ ಆರೋಪ
ಡಿಕೆಶಿ ಸೂಚನೆಯಿಂದ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಶೀಘ್ರದಲ್ಲಿ ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.
ಬಿಜೆಪಿಯಿಂದ ಉಚ್ಚಾಟಿತ ಆಗಿರುವ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದ "ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿರುವ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗು ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗು ಸಿಎಂ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು. ಸದನದಲ್ಲಿ ಬಿಡದಿ ಯೋಜನೆ, ಕೆಪಿಎಸ್ ಸಿ ಹಗರಣ ಹಾಗು ನೈಸ್ ಯೋಜನೆ ಬಗ್ಗೆ ಮಾತನಾಡಿ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು ಎಂದು ಹೇಳಿದರು. ಆದರೆ ಸದನದಲ್ಲಿ ನಾಗೇಂದ್ರ ವಿಚಾರ ಪ್ರಸ್ತಾಪಿಸಿ ಧರಣಿ ನಡೆಸಲಾಯಿತು, ವಿಜಯೇಂದ್ರ ಮತ್ತು ಡಿ.ಕೆ.ಶಿವಕುಮಾರ್ ಅಡ್ಡೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪಾದಯಾತ್ರೆ ಹಿಂದೆ ಡಿ.ಕೆ.ಶಿವಕುಮಾರ್ ಸೂಚನೆಯಿದೆ
ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿಜಯೇಂದ್ರ ಸಂಬಂಧಿ ಹಾಗಾಗಿ ಈ ವಿಚಾರ ಹೊರಬರಲಿದೆ ಎಂದು ಡಿಕೆಶಿ ರಕ್ಷಣೆಗೆ ವಿಜಯೇಂದ್ರ ಹಾಗು ವಿಜಯೇಂದ್ರ ರಕ್ಷಣೆಗೆ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ ಎಂದು ಹೇಳಿದರು.ಬಿಜೆಪಿಯಲ್ಲಿ ಭ್ರಷ್ಟಾಚಾರದ ಪಿತಾಮಹ ಯಡಿಯೂರಪ್ಪ ಈಗ ವಿಜಯೇಂದ್ರ ಪಾದಯಾತ್ರೆ ನಡೆಸುತ್ತಿದ್ದಾರೆ ಮಾನ ಮರ್ಯಾದೆಯಿಲ್ಲ ಎಂದು ವಾಗ್ದಾಳಿ ನಡೆಸಿದರು. ಪಾದಯಾತ್ರೆಗೆ ಬಾಡಿಗೆ ಜನರನ್ನು ಕರೆಸುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಜಯೇಂದ್ರ ಕೈ ತಪ್ಪಲಿದೆ ಅದಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆ ಹಿಂದೆ ಡಿ.ಕೆ.ಶಿವಕುಮಾರ್ ಸೂಚನೆಯಿದೆ ಎಂದು ಆರೋಪಿಸಿದರು. ಇಬ್ಬರ ಹೊಂದಾಣಿಕೆ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಗೊತ್ತಿದೆ ಯಾಕೆ ಸುಮ್ಮನಿದೆ ಎಂಬುದು ಚಿದಂಬರ ರಹಸ್ಯ ಎಂದು ಹೇಳಿದರು.
ಎಚ್ಡಿಕೆ ಬಿಡುಗಡೆ ಮಾಡಬೇಕು
ಎಚ್.ಡಿ.ಕುಮಾರಸ್ವಾಮಿ ಅವರು ದಾಖಲೆ ಸಂಗ್ರಹಿಸುವ ಶಕ್ತಿಯಿದೆ ಅವರು ದೇಶದಲ್ಲಿ ಅಲ್ಲೋಲ ಕಲ್ಲೋಲವಾಗುವ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ ಅವರು ದಾಖಲೆ ಬಿಡುಗಡೆ ಮಾಡಬೇಕು ಎಂದು ಹೇಳಿದರು. ಕುಮಾರಸ್ವಾಮಿ ದಾಖಲೆಯಿಲ್ಲದೆ ಮಾತನಾಡುವುದಿಲ್ಲ ಆದರೆ ದಾಖಲೆ ಬಿಡುಗಡೆ ಮಾಡದೆ ಇರಬಾರದು ಎಂದು ಆಗ್ರಹಿಸಿದರು.ನಾನು ಕವಲುದಾರಿಯಲ್ಲಿದ್ದೇನೆ. ಮುಂದಿನ ರಾಜಕೀಯ ತಿರ್ಮಾನವನ್ನು ವಿಜಯದಶಮಿ ದಿನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಮುಂದೆ ಬಿಜೆಪಿಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ ಎಂದು ಸೂಚ್ಯವಾಗಿ ಹೇಳಿದರು.

