
ಕರ್ನಾಟಕಕ್ಕೆ ಅಮಿತ್ ಶಾ ಭೇಟಿ: ಹುಬ್ಬಳ್ಳಿ, ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮ
ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಎಲ್‌ಇ ಆಸ್ಪತ್ರೆ ಲೋಕಾರ್ಪಣೆ ಹಾಗೂ ಯಕ್ಸಂಬಾದಲ್ಲಿ ಬೀರೇಶ್ವರ ಸಹಕಾರಿ ಸಂಸ್ಥೆಯ ನೂತನ ಕಚೇರಿ ಉದ್ಘಾಟಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಯ ಯಕ್ಸಂಬಾದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಲ್ಲಿ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹಾಗೂ 1,200 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಅಮಿತ್ ಶಾ ಲೋಕಾರ್ಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ಗಬ್ಬೂರು ವೃತ್ತದಲ್ಲಿರುವ ಕೆಎಲ್‌ಇ ವೈದ್ಯಕೀಯ ಕಾಲೇಜು ಕಟ್ಟಡದ ಎದುರು ಬೃಹತ್ ಪೆಂಡಲ್ ನಿರ್ಮಿಸಲಾಗಿದ್ದು, ಸುಮಾರು 10 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11.30ರ ಸುಮಾರಿಗೆ ಅಮಿತ್ ಶಾ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದು, ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಜಗದೀಶ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಅಮಿತ್ ಶಾ ಅವರಿಗೆ ಸಾಥ್ ನೀಡಲಿದ್ದಾರೆ.
ಯಕ್ಸಂಬಾದಲ್ಲಿ ಸಹಕಾರಿ ಸಂಸ್ಥೆಯ ಕಚೇರಿ ಉದ್ಘಾಟನೆ
ಹುಬ್ಬಳ್ಳಿ ಕಾರ್ಯಕ್ರಮದ ಬಳಿಕ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ ಯಕ್ಸಂಬಾಕ್ಕೆ ತೆರಳಲಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಮುಖ್ಯ ಆಡಳಿತ ಕಚೇರಿಯನ್ನು ಅವರು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಹಾಗೂ ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾದ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಗಣ್ಯರ ಭಾಗಿ
ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಹಕಾರ ರಾಜ್ಯ ಸಚಿವ ಮುರಳೀಧರರಾವ್ ಮೋಹೋಳ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಅಮಿತ್ ಶಾ ಅವರು ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದು, ಬಿಜೆಪಿ ನಾಯಕರು ಅವರನ್ನು ಸ್ವಾಗತಿಸಿದರು. ಬಳಿಕ ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

