ಎಸ್‌ಐಆರ್‌ ಗೊಂದಲಕ್ಕೆ ಆಯೋಗ ಸ್ಪಷ್ಟನೆ, ಅತಿಕ್ರಮಣ ತೆರವಿಗೆ ಬೀದಿಗಿಳಿದ ವ್ಯಾಪಾರಿಗಳು, ಕಲಬುರಗಿಯಲ್ಲಿ ಕಾನ್ಸ್‌ಟೇಬಲ್‌ ಆತ್ಮಹತ್ಯೆ

ಎಸ್‌ಐಆರ್ ಪ್ರಕ್ರಿಯೆ ಸಂಬಂಧ ನಿಯಮಬಾಹಿರವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಆರೋಪಗಳಿಗೆ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಪಾದಚಾರಿಗಳ ಸುರಕ್ಷತೆಗಾಗಿ ಸರ್ಕಾರದ ಕಾರ್ಯಾಚರಣೆಯು ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿ ಧರಣಿ ನಡೆಸಿದ್ದಾರೆ. ಇನ್ನು, ಕಲಬುರಗಿಯಲ್ಲಿ ಸಿಎಆರ್‌ ಕಾನ್ಸ್‌ಟೇಬಲ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಈ ಕುರಿತ ಸಂಪೂರ್ಣ ವರದಿ


Click the Play button to hear this message in audio format

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯು ರಾಜಕೀಯ ಕೆಸರೆರೆಚಾಟಕ್ಕೆ ವೇದಿಕೆಯಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತಿದೆ ಮತ್ತು ನಿಯಮಬಾಹಿರವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯು ಗುಂಪು ಗುಂಪಾಗಿ, ನಿಯಮಬಾಹಿರವಾಗಿ ನಡೆಯುತ್ತಿದೆ ಎಂಬ ಆರೋಪವನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಬಲವಾಗಿ ಮಾಡಿದೆ. ಮತದಾರರ ಪಟ್ಟಿಯಲ್ಲಿ ಆಡಳಿತ ಪಕ್ಷದ ಪರವಾಗಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪಗಳನ್ನು ಮಾಡಿವೆ. ಈ ಗೊಂದಲದ ನಡುವೆ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದೆಲ್ಲೆಡೆ ನಿಯಮಬಾಹಿರವಾಗಿ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಸುಳ್ಳು. ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆಯೇ ಎಸ್‌ಐಆರ್ ಪ್ರಕ್ರಿಯೆ ನಡೆಯಬೇಕು ಎಂಬುದು ಸ್ಪಷ್ಟ ಆದೇಶವಾಗಿದೆ. ಕೆಲವೊಂದು ಕಡೆಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ, ನಿಯಮಬಾಹಿರವಾಗಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಮತ್ತು ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ 35 ಬಿಎಲ್‌ಒಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಮತದಾರರ ಪಟ್ಟಿಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಪ್ರತಿದಿನದ ವರದಿಯನ್ನು ತರಿಸಿಕೊಳ್ಳಲಾಗುತ್ತಿದ್ದು, ಈ ಪ್ರಕ್ರಿಯೆಯು ಅಕ್ಟೋಬರ್ 29ರವರೆಗೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಬಿಜೆಪಿ ಮತ್ತು ಜೆಡಿಎಸ್ ನಿಯೋಗವು ದೆಹಲಿಗೆ ತೆರಳಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಜ್ಯದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತನ್ನ ಲಾಭಕ್ಕಾಗಿ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಿನ ಮೇಲೆ ಪ್ರಭಾವ ಬೀರುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ನಾನು ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಚರ್ಚಿಸಲು ಮತ್ತು ವಾಸ್ತವ ಸಂಗತಿಗಳನ್ನು ಹಂಚಿಕೊಳ್ಳಲು ಪ್ರತಿಪಕ್ಷಗಳಿಗಿಂತ ಮುಂಚಿತವಾಗಿಯೇ ದೆಹಲಿಗೆ ತೆರಳಿ ಸಮಯ ಕೇಳಿದ್ದೆ. ಆದರೆ, ಚುನಾವಣಾ ಆಯೋಗ ನನಗೆ ಸಮಯ ನೀಡಲಿಲ್ಲ. ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನವರು ದೆಹಲಿಗೆ ಹೋದ ಕೂಡಲೇ ಅವರಿಗೆ ಸಮಯ ನೀಡಲಾಯಿತು. ಇದು ಚುನಾವಣಾ ಆಯೋಗದಲ್ಲಿನ ತಾರತಮ್ಯವನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಇನ್ನು, ಕೆಲಸದ ಒತ್ತಡಕ್ಕೆ ಬಿಎಲ್‌ಒಗಳು ಸಿಲುಕಿ ಸಾವನ್ನಪ್ಪಿದ್ದಾರೆ ಘಟನೆಗಳು ನಡೆದಿವೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಲ್ಲಾಪುರ ಸಮೀಪದ ಕೋಡಿ ಹೊಸೂರು ಗ್ರಾಮದಲ್ಲಿ ಎಸ್‌ಐಆರ್ ಕರ್ತವ್ಯ ನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬೀದರ್‌ನಲ್ಲಿ ಅಮಲಾಪುರ ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದ ಸುನೀಲ್ ಎಂಬ ಬಿಎಲ್‌ಒ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರಲ್ಲದೆ, ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭುವನಾ ಎಂಬ ಗ್ರಾಮ ಆಡಳಿತ ಅಧಿಕಾರಿ ಕೂಡ ಮೃತಪಟ್ಟಿದ್ದಾರೆ.

ಬೀದಿಗಿಳಿದ ವ್ಯಾಪಾರಿಗಳು - ಸರ್ಕಾರ ವಿರುದ್ಧ ಆಕ್ರೋಶ

ಸಾರ್ವಜನಿಕ ಸುರಕ್ಷತೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಗರದಲ್ಲಿ ಸುರಕ್ಷಿತ ಪಾದಚಾರಿ ಅಭಿಯಾನ ಮುಂದುವರಿದಿದೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿರುವ ಸ್ಥಳವನ್ನು ತೆರವುಗೊಳಿಸಲಾಗುತ್ತಿದೆ. ಐದು ಪ್ರಾಧಿಕಾರ ವ್ಯಾಪ್ತಿಯ ಅಧಿಕಾರಿಗಳು ನಗರದಾದ್ಯಂತ ಅತಿಕ್ರಮಣಕ್ಕೊಳಗಾಗಿದ್ದ 202.7 ಕಿಲೋ ಮೀಟರ್ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿದ್ದಾರೆ. ಗ್ರೇಟರ್‌ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಚಿವರು ಪ್ರತಿ ನಿತ್ಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಪಾದಚಾರಿ ಮಾರ್ಗಗಳ ಸಂರಕ್ಷಣೆಗಾಗಿ ಹಾಗೂ ಪಾದಚಾರಿಗಳಿಗೆ ಮಾತ್ರ ಎಂದು ಮೀಸಲಿಡಲು, ಗಾಂಧಿ ಬಜಾರ್‌ನಲ್ಲಿ ವ್ಯಾಪಾರಿಗಳನ್ನು ತೆರವುಗೊಳಿಸುವ ದೊಡ್ಡ ಅಭಿಯಾನ ನಡೆಸಲಾಗಿತ್ತು. ಆದರೆ ನಿರಂತರ ಮೇಲ್ವಿಚಾರಣೆ ಕೊರತೆಯಿಂದ ಕೆಲವು ಪ್ರದೇಶಗಳಲ್ಲಿ ಮತ್ತೆ ಒತ್ತುವರಿಯಾಗಿರುವುದು ವಿಪರ್ಯಾಸ. ಅಲ್ಲದೇ, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಹಲವು ಪ್ರಮುಖ ರಸ್ತೆಗಳಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಿ, ಹೊಸದಾಗಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ ಕಂಬಿಗಳನ್ನು ಅಳವಡಿಸಲಾಗಿದೆ

2022-2023ರ ಅವಧಿಯಲ್ಲಿ ರಾಜ್ಯ ಹೈಕೋರ್ಟ್‌ನ ಕಠಿಣ ನಿರ್ದೇಶನಗಳ ನಂತರ, ಬೆಂಗಳೂರಿನಲ್ಲಿ ಬಿಬಿಎಂಪಿಯು ಪಾದಚಾರಿ ಮಾರ್ಗ ಮುಕ್ತ ಅಭಿಯಾನವನ್ನು ತೀವ್ರಗೊಳಿಸಿತ್ತು. ಮುಖ್ಯವಾಗಿ ಎಂ.ಜಿ. ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಮತ್ತು ಜಯನಗರದಂತಹ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಅತಿಕ್ರಮಣಗಳನ್ನು ತೆರವುಗೊಳಿಸಲಾಗಿತ್ತು. 2024ರ ಆರಂಭದಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪಾದಚಾರಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲು ಟ್ರಾಫಿಕ್ ಪೊಲೀಸ್ ಮತ್ತು ಬಿಬಿಎಂಪಿ ಜಂಟಿಯಾಗಿ 'ಫುಟ್‌ಪಾತ್ ತೆರವು ಕಾರ್ಯಾಚರಣೆ'ಯನ್ನು ನಡೆಸಲಾಗಿತ್ತು. ಇದೀಗ ಮತ್ತೆ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಈ ನಡುವೆ, ತೆರವು ಕಾರ್ಯಾಚರಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವತ್ತು ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಏಕಾಏಕಿ ತೆರವುಗೊಳಿಸುತ್ತಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅಲ್ಲದೇ, ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಕಾನೂನುಬದ್ಧವಾಗಿ ವ್ಯಾಪಾರಿಗಳಿಗೆ ಈಗಾಗಲೇ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಹೀಗಿದ್ದರೂ ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ನಮ್ಮನ್ನು ಎತ್ತಂಗಡಿ ಮಾಡುತ್ತಿರುವುದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

ಪೊಲೀಸ್‌ ಕಾನ್ಸ್‌ಟೇಬಲ್‌ ಆತ್ಮಹತ್ಯೆ

ಕಲಬುರಗಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಇಡೀ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಅಲ್ಲಿನ ಜಗತ್ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್‌ಟೇಬಲ್ ಒಬ್ಬರು ತಮ್ಮ ಸೇವಾ ರೈಫಲ್‌ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ಪೊಲೀಸ್ ಕಾನ್ಸ್‌ಟೇಬಲ್ 32 ವರ್ಷದ ಶಿವಕುಮಾರ ನರಿಬೋಳ ಎಂದು ಗುರುತಿಸಲಾಗಿದೆ. ಇವರು ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದವರಾಗಿದ್ದು, ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಸಶಸ್ತ್ರ ಮೀಸಲು ಪಡೆಗೆ ನಿಯೋಜನೆಗೊಂಡಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಜಗತ್ ವೃತ್ತದಲ್ಲಿರುವ ಪೊಲೀಸ್ ವಾಹನದಲ್ಲಿ ಅವರು ಕರ್ತವ್ಯದಲ್ಲಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ತಮ್ಮ ಬಳಿಯಿದ್ದ ಸರ್ಕಾರಿ ಇನ್ಸಾಸ್ ರೈಫಲ್‌ನಿಂದ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿ ಸ್ಥಳದಲ್ಲಿದ್ದ ಇತರ ಸಿಬ್ಬಂದಿಗಳು ದೌಡಾಯಿಸಿ ನೋಡಿದಾಗ, ಶಿವಕುಮಾರ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಷ್ಟೊತ್ತಿಗಾಗಲೇ ಅವರು ಪ್ರಾಣ ಬಿಟ್ಟಿದ್ದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿವಕುಮಾರ ನರಿಬೋಳ ಅವರು 2016ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಜಿಲ್ಲಾ ವರ್ಗಾವಣೆಯ ಪ್ರಕ್ರಿಯೆಯ ಅಡಿಯಲ್ಲಿ, 2024ರ ಫೆಬ್ರವರಿಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯಕ್ಕೆ ವರ್ಗಾವಣೆಯಾಗಿ ಬಂದಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., “ಶಿವಕುಮಾರ ಕಳೆದ ಕೆಲವು ದಿನಗಳಿಂದ ತೀವ್ರ ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾನಸಿಕವಾಗಿ ಅವರು ನೊಂದಿದ್ದರು ಎಂಬುದು ತಿಳಿದುಬಂದಿದೆ. ಆದರೆ, ನಿಖರವಾದ ಕಾರಣವೇನು ಎಂಬುದನ್ನು ತನಿಖೆಯ ನಂತರವೇ ಹೇಳಲು ಸಾಧ್ಯ” ಎಂದರು. ಪೊಲೀಸ್‌ಕಾನ್ಸಟೇಬಲ್‌ಆತ್ಮಹತ್ಯೆಯಿಂದಾಗಿ ಪೊಲೀಸ್ ಸಿಬ್ಬಂದಿ ಎದುರಿಸುತ್ತಿರುವ ಮಾನಸಿಕ ಒತ್ತಡದ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕರ್ತವ್ಯದ ಒತ್ತಡ, ಕೌಟುಂಬಿಕ ಸಮಸ್ಯೆಗಳು, ರಜೆಯ ಕೊರತೆ ಮತ್ತು ವೃತ್ತಿಜೀವನದ ಅನಿಶ್ಚಿತತೆಯಂತಹ ಅಂಶಗಳು ಹಲವು ಬಾರಿ ಪೊಲೀಸ್ ಸಿಬ್ಬಂದಿಗಳನ್ನು ಖಿನ್ನತೆಗೆ ದೂಡುತ್ತವೆ ಎಂದು ಹೇಳಲಾಗಿದೆ.

2013ರ ಜನವರಿ 27ರಂದು ಬೆಂಗಳೂರು ಗ್ರಾಮಾಂತರದ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಜೆ ನಿರಾಕರಿಸಿದ ಕಾರಣಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪಿಎಸ್‌ಐ ವಿಜಯ್‌ಕುಮಾರ್‌ನನ್ನು ಪೊಲೀಸ್‌ಕಾನ್‌ಸ್ಟೆಬಲ್ ಆನಂದ್‌ಕುಮಾರ್ ಎಂಬಾತ ಹತ್ಯೆ ಮಾಡಿದ್ದರು. ಪೊಲೀಸರ ಒತ್ತಡ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿತ್ತು. ಆದರೆ ಈವರೆಗೆ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ.

Read More
Next Story