ಕುಟುಂಬದ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌
x

"ಕುಟುಂಬದ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ": ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

ಸಚಿವ ರಾಮಲಿಂಗಾರೆಡ್ಡಿ ಪಕ್ಷದ ಹಿರಿಯ ನಾಯಕರು. ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಜೀವಂತವಾಗಿ ಇರಿಸುವಲ್ಲಿ ಮತ್ತು ಸಂಘಟಿಸುವಲ್ಲಿ ಅವರ ಪಾತ್ರ ಅಪಾರ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿರುವ ಆಂತರಿಕ ಅಸಮಾಧಾನಗಳು, ಅದರಲ್ಲೂ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಮುನಿಸು ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಪಕ್ಷದ ಹಿರಿಯ ನಾಯಕ ಮತ್ತು ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಖಾತೆಯ ವಿಚಾರವಾಗಿ ಕೆಲವು ಬೆಳವಣಿಗೆಗಳ ಕುರಿತು ಅಸಮಾಧಾನಗೊಂಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿ ನಡೆಸಿದ ಮಾತುಕತೆ ರಾಜಕೀಯ ಸಂಚಲನ ಮೂಡಿಸಿದೆ.

ಶುಕ್ರವಾರ ತಡರಾತ್ರಿ ಖಾಸಗಿ ಹೊಟೇಲ್‌ವೊಂದರಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಡಿ.ಕೆ. ಶಿವಕುಮಾರ್ ಸುದೀರ್ಘ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಎಲ್ಲವೂ ಸರಿಯಿದೆ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದರು. ನಮ್ಮ ಕುಟುಂಬದ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿ, ಅವರು ಸಚಿವರು. ಆದರೆ, ಅದಕ್ಕೂ ಮಿಗಿಲಾಗಿ ನಾವು ಉತ್ತಮ ಸ್ನೇಹಿತರು ಎಂದು ಹೇಳುವ ಮೂಲಕ ಭಿನ್ನಮತವನ್ನು ಕುಟುಂಬದ ಆಂತರಿಕ ವಿಷಯ ಎಂದರು.

ರಾಮಲಿಂಗಾರೆಡ್ಡಿ ಪಕ್ಷದ ಶಕ್ತಿ

ರಾಮಲಿಂಗಾರೆಡ್ಡಿ ಅವರ ಬದ್ಧತೆಯನ್ನು ಕೊಂಡಾಡಿದ ಶಿವಕುಮಾರ್, ಅವರು ಪಕ್ಷದ ಹಿರಿಯ ನಾಯಕರು. ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಜೀವಂತವಾಗಿ ಇರಿಸುವಲ್ಲಿ ಮತ್ತು ಸಂಘಟಿಸುವಲ್ಲಿ ಅವರ ಪಾತ್ರ ಅಪಾರ. ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅಂತಹ ಹಿರಿಯ ನಾಯಕರ ಮನಸ್ಸಿನಲ್ಲಿ ನೋವುಂಟಾದಾಗ ಅದನ್ನು ಆಲಿಸುವುದು ಮತ್ತು ಸರಿಪಡಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ರಾಜಕೀಯದಲ್ಲಿ ಅಸಮಾಧಾನಗಳು ಸಹಜ. ಇದೆಲ್ಲಾ ಆಗುತ್ತಾ ಇರಬೇಕು. ಮಳೆ ಬರುತ್ತದೆ, ಗುಡುಗು ಸಿಡಿಲು ಬರುತ್ತದೆ, ಸೂರ್ಯ ಮುಳುಗುತ್ತಾನೆ, ಉದಯಿಸುತ್ತಾನೆ. ಇದು ಪ್ರಕೃತಿಯ ಸಹಜ ಕ್ರಿಯೆ. ಹಾಗೆಯೇ ರಾಜಕೀಯದಲ್ಲೂ ಇಂತಹ ಸಣ್ಣಪುಟ್ಟ ಘಟನೆಗಳು ಸಹಜ. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಖಾತೆಯ ವಿಚಾರವಾಗಿ ಮಾತನಾಡಿದ್ದೇವೋ ಅಥವಾ ಬೇರೆ ವಿಷಯಗಳ ಬಗ್ಗೆ ಚರ್ಚಿಸಿದ್ದೇವೋ ಎಂಬುದನ್ನು ಸಾರ್ವಜನಿಕವಾಗಿ, ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವೇ? ಪಕ್ಷದ ಆಂತರಿಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ, ಅಷ್ಟೇ ಎಂದರು.

'ತಪ್ಪು ಸಂವಹನ'ವೇ ಕಾರಣವೇ?

ರಾಮಲಿಂಗಾರೆಡ್ಡಿ ಅವರು ಪಕ್ಷ ಬಿಡುವ ಅಥವಾ ಸಿಟ್ಟಿನಿಂದ ಹೊರಹೋಗುವ ಮಾತನಾಡಿಲ್ಲ. ಅವರು ಕೇವಲ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಅಥವಾ ವಿಷಯಗಳ ರವಾನೆಯಲ್ಲಿ ತಪ್ಪು ಸಂವಹನ ಆಗಿರಬಹುದು. ಅದನ್ನು ನಾವು ಸರಿಪಡಿಸುತ್ತೇವೆ. ರಾಮಲಿಂಗಾರೆಡ್ಡಿ ಅವರ ಅಸಮಾಧಾನದ ಹಿಂದೆ ಯಾವುದೇ ದೊಡ್ಡ ಬಂಡಾಯವಿಲ್ಲ, ಬದಲಾಗಿ ಸರ್ಕಾರದ ಆಡಳಿತಾತ್ಮಕ ಬದಲಾವಣೆಗಳ ಕುರಿತಾದ ಕೆಲವು ಅಭಿಪ್ರಾಯಗಳಿವೆ ಎಂದು ಹೇಳಿದರು.

Read More
Next Story