ಇಂಧನ ವೆಚ್ಚ ತಗ್ಗಿಸಲು ಸರ್ಕಾರಿ ಕಚೇರಿಗಳಲ್ಲಿ ಸೌರಶಕ್ತಿ: ಇಂಧನ ಇಲಾಖೆ ತೀರ್ಮಾನ
x

ಇಂಧನ ವೆಚ್ಚ ತಗ್ಗಿಸಲು ಸರ್ಕಾರಿ ಕಚೇರಿಗಳಲ್ಲಿ ಸೌರಶಕ್ತಿ: ಇಂಧನ ಇಲಾಖೆ ತೀರ್ಮಾನ

ರಾಜ್ಯದ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿ ಸಾಮರ್ಥ್ಯ, ಸೌರ ಫಲಕ ಅಳವಡಿಕೆಗೆ ಸೂಕ್ತ ಸ್ಥಳಗಳ ಸಮೀಕ್ಷೆ ನಡೆಸುವುದು ಮತ್ತು ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.


Click the Play button to hear this message in audio format

ದೇಶದ ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ (ಉಚಿತ ವಿದ್ಯುತ್ ಯೋಜನೆ) ಯೋಜನೆಯಡಿ, ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ರೂಫ್‌ಟಾಪ್ ಫೋಟೋವೋಲ್ಟಾಯಿಕ್ ವ್ಯವಸ್ಥೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಬೆಸ್ಕಾಂನ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಯೋಜನೆ ಅನುಷ್ಠಾನದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗಿದೆ.

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದಲ್ಲಿ ನಡೆದ ಈ ಸಭೆಯು, ಸರ್ಕಾರಿ ಕಟ್ಟಡಗಳ ಸೌರೀಕರಣ ಮತ್ತು ಪಾವತಿ ವ್ಯವಸ್ಥೆಯ ಕುರಿತು ಸಮಗ್ರ ಚರ್ಚೆ ನಡೆಸಿತು. ಯೋಜನೆಯ ಸುಗಮ ನಿರ್ವಹಣೆಗಾಗಿ ಸರ್ಕಾರವು ಎರಡು ಪ್ರಮುಖ ಸಂಸ್ಥೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ. ರಾಜ್ಯಾದ್ಯಂತ ಇರುವ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಯ ಸಾಮರ್ಥ್ಯ ಮತ್ತು ಸೌರ ಫಲಕ ಅಳವಡಿಕೆಗೆ ಸೂಕ್ತವಾದ ಸ್ಥಳಗಳ ಸಮೀಕ್ಷೆ ನಡೆಸಲಿದೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅನುಷ್ಠಾನಗೊಳಿಸಲು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ. ಜಿಲ್ಲಾಧಿಕಾರಿಗಳ ಕಚೇರಿಗಳು ಸೇರಿದಂತೆ ಸೂರ್ಯನ ಬೆಳಕು ಹೆಚ್ಚಾಗಿ ಲಭ್ಯವಿರುವ ಸರ್ಕಾರಿ ಕಟ್ಟಡಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.

ಎರಡು ಮಾದರಿಗಳಲ್ಲಿ ಯೋಜನೆ ಅನುಷ್ಠಾನ

ಸರ್ಕಾರವು ಈ ಯೋಜನೆಯನ್ನು ಎರಡು ವಿಭಿನ್ನ ಆರ್ಥಿಕ ಮಾದರಿಗಳಲ್ಲಿ ಜಾರಿಗೆ ತರಲಿದೆ. ರೆಸ್ಕೋ ಮಾದರಿ - ಈ ಮಾದರಿಯ ವಿಶೇಷತೆಯೆಂದರೆ, ಸರ್ಕಾರಿ ಇಲಾಖೆಗಳು ಯಾವುದೇ ಆರಂಭಿಕ ಬಂಡವಾಳ ಹೂಡಿಕೆ ಮಾಡುವ ಅಗತ್ಯವಿಲ್ಲ. ಯೋಜನೆಯ ಸಂಪೂರ್ಣ ವೆಚ್ಚ, ಉಪಕರಣಗಳ ಖರೀದಿ, ಅಳವಡಿಕೆ ಮತ್ತು ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಖಾಸಗಿ ಡೆವಲಪರ್‌ಗಳೇ ಹೊರುತ್ತಾರೆ. ಒಪ್ಪಂದದ ಅವಧಿಯಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸರ್ಕಾರಿ ಕಚೇರಿಗಳು ಬಳಸಿಕೊಳ್ಳಬಹುದು. ಇದರಿಂದ ವಿದ್ಯುತ್ ಬಿಲ್ ಕಡಿಮೆಯಾಗುವುದಲ್ಲದೆ, ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸಲೂ ಅವಕಾಶವಿರುತ್ತದೆ.

ಕ್ಯಾಪೆಕ್ಸ್‌ ಮಾದರಿ - ಈ ಮಾದರಿಯಲ್ಲಿ ಆಯಾ ಇಲಾಖೆಯು ತನ್ನ ಸ್ವಂತ ನಿಧಿಯಿಂದ ಅಥವಾ ಸಾಲದ ಮೂಲಕ ಹಣ ಹೂಡಿಕೆ ಮಾಡಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸುತ್ತದೆ. ಇಪಿಸಿ ಡೆವಲಪರ್‌ಗಳ ಮೂಲಕ ನಿರ್ಮಾಣ ಮತ್ತು ನಿರ್ವಹಣೆ ಮಾಡಿಸಲಾಗುತ್ತದೆ. ನಿಗದಿತ ಅವಧಿಯ ನಂತರ ಆಸ್ತಿಯ ಸಂಪೂರ್ಣ ಮಾಲೀಕತ್ವ ಆಯಾ ಇಲಾಖೆಗೆ ಸೇರುತ್ತದೆ.

ವಿದ್ಯುತ್ ಉತ್ಪಾದನೆ ಹಾಗೂ ಗ್ರಿಡ್‌ ಸಂಪರ್ಕ

ಈ ಸೌರ ವ್ಯವಸ್ಥೆಯಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಮೊದಲು ಆ ಕಟ್ಟಡದ ಅಗತ್ಯತೆಗಳಿಗೆ ಬಳಸಲಾಗುತ್ತದೆ. ಹೆಚ್ಚುವರಿಯಾಗಿ ಉಳಿಯುವ ವಿದ್ಯುತ್‌ನ್ನು ಎಸ್ಕಾಂಗಳ ಗ್ರಿಡ್‌ಗೆ ರವಾನಿಸಲಾಗುತ್ತದೆ. ಬೆಸ್ಕಾಂ ಮತ್ತು ಇತರೆ ಎಸ್ಕಾಂಗಳು ಇದಕ್ಕೆ ಪ್ರೋತ್ಸಾಹಧನವನ್ನೂ ನೀಡಲಿವೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರು ಮಾತನಾಡಿ, "ಸೌರ ವ್ಯವಸ್ಥೆಯನ್ನು ವಿದ್ಯುತ್ ಗ್ರಿಡ್‌ನೊಂದಿಗೆ ಸುಗಮವಾಗಿ ಸಂಯೋಜಿಸಲು ನಾವು ಅಗತ್ಯವಿರುವ ಮೀಟರಿಂಗ್ ಮತ್ತು ತಾಂತ್ರಿಕ ಸಹಕಾರವನ್ನು ಒದಗಿಸುತ್ತೇವೆ" ಎಂದು ಭರವಸೆ ನೀಡಿದರು.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, "ರಾಜ್ಯವು ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಸರ್ಕಾರಿ ಕಟ್ಟಡಗಳ ಸೌರೀಕರಣವು ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ. ಇದು ಕೇವಲ ಹಣ ಉಳಿತಾಯದ ವಿಷಯವಲ್ಲ, ಬದಲಾಗಿ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ಮೂಲಕ ಪರಿಸರ ರಕ್ಷಣೆ ಮತ್ತು ಇಂಧನ ಭದ್ರತೆಯನ್ನು ಖಾತ್ರಿಪಡಿಸುವ ಕೆಲಸ" ಎಂದು ಹೇಳಿದ್ದಾರೆ.

ಸರ್ಕಾರಿ ಇಲಾಖೆಗಳು ಪ್ರತಿ ತಿಂಗಳು ಪಾವತಿಸುವ ವಿದ್ಯುತ್ ಬಿಲ್‌ನಲ್ಲಿ ಭಾರೀ ಕಡಿತವಾಗಲಿದೆ. ಹಸಿರು ಇಂಧನ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ಸರ್ಕಾರಿ ಕಚೇರಿಗಳು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಲಿದ್ದು, ವಿದ್ಯುತ್ ವ್ಯತ್ಯಯದಂತಹ ಸಮಸ್ಯೆಗಳಿಗೆ ಇದು ಶಾಶ್ವತ ಪರಿಹಾರವಾಗಲಿದೆ.

Read More
Next Story