
ಪ್ರಧಾನಿ ಪ್ರವಾಸದ ಹಾದಿಯಲ್ಲಿ ಸ್ಫೋಟಕ ಪತ್ತೆ: ಭದ್ರತಾ ವೈಫಲ್ಯದ ತನಿಖೆಗೆ ಎನ್‌ಐಎ ಪ್ರವೇಶ
ಜಿಲೆಟಿನ್ ಪತ್ತೆ ಪ್ರಕರಣದ ಹಿಂದೆ ಭಯೋತ್ಪಾದಕ ಸಂಘಟನೆಗಳ ಅಥವಾ ದೇಶವಿರೋಧಿ ಶಕ್ತಿಗಳ ಕೈವಾಡವಿರುವ ಸಾಧ್ಯತೆಯನ್ನು ಎನ್‌ಐಎ ತನಿಖಾ ಸಂಸ್ಥೆ ತನಿಖೆಗೊಂಡಿವೆ ಎಂದು ಮೂಲಗಳು ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಸಂದರ್ಭದಲ್ಲಿ ಬೆಂಗಳೂರಿನ ಕನಕಪುರ ರಸ್ತೆಯ ತಾತಗುಣಿ ಬಳಿ ಪ್ರಧಾನಿಯವರ ಪ್ರವಾಸದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಘಟನೆಯು ಕೇವಲ ಒಂದು ಆಕಸ್ಮಿಕವೇ ಅಥವಾ ವ್ಯವಸ್ಥಿತ ಭದ್ರತಾ ವೈಫಲ್ಯವೇ ಎಂಬ ಬಗ್ಗೆ ಇದೀಗ ಎನ್‌ಐಎ, ಎನ್‌ಎಸ್‌ಜಿ ಮತ್ತು ಆರ್‌ಎಡಬ್ಲ್ಯೂ ತಂಡಗಳು ತನಿಖೆಯನ್ನು ಆರಂಭಿಸಿವೆ.
ಒಡೆಯರಹಳ್ಳಿ ಗೇಟ್ ಬಳಿ ಜಿಲೆಟಿನ್ ಕಡ್ಡಿಗಳು ಮತ್ತು ಬೆಂಕಿಪೊಟ್ಟಣ ಪತ್ತೆಯಾದದ್ದು ಪ್ರಧಾನಿಯವರ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಘಟನೆಯ ಹಿಂದೆ ಭಯೋತ್ಪಾದಕ ಸಂಘಟನೆಗಳ ಅಥವಾ ದೇಶವಿರೋಧಿ ಶಕ್ತಿಗಳ ಕೈವಾಡವಿರುವ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ತನಿಖೆಗೊಂಡಿವೆ ಎಂದು ಮೂಲಗಳು ಹೇಳಿವೆ.
ಪ್ರಧಾನಿಯವರ ಪ್ರವಾಸದ ಸಂದರ್ಭದಲ್ಲಿ ಅನುಸರಿಸುವ ಶಿಷ್ಟಾಚಾರಗಳು ಅತ್ಯಂತ ಬಿಗಿಯಾಗಿರುತ್ತವೆ. ಪ್ರವಾಸದ ಒಂದು ವಾರ ಮುಂಚಿತವಾಗಿಯೇ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಪ್ರಧಾನಿಯವರು ಹಾದುಹೋಗುವ ಪ್ರತಿ ಅಡಿ ಜಾಗವನ್ನೂ ಆಂಟಿ-ಸಬೋಟೇಜ್ ಚೆಕ್ (ಎಎಸ್‌ಸಿ) ಮೂಲಕ ಪರಿಶೀಲಿಸಲಾಗುತ್ತದೆ. ಹೀಗಿದ್ದರೂ, ಸ್ಫೋಟಕ ಪತ್ತೆಯಾಗಿರುವುದು ವ್ಯವಸ್ಥೆಯಲ್ಲಾದ ಲೋಪವನ್ನು ಎತ್ತಿ ತೋರಿಸುತ್ತದೆ. ವಿಶೇಷ ರಕ್ಷಣಾ ದಳ (ಎಸ್‌ಪಿಜಿ) ನೇರ ಹೊಣೆಗಾರಿಕೆಯನ್ನು ಹೊಂದಿದ್ದು, ಸ್ಥಳೀಯ ಪೊಲೀಸರು ಎಸ್‌ಪಿಜಿಯ ಸೂಚನೆಯಂತೆ ಕಾರ್ಯನಿರ್ವಹಿಸಲಿದ್ದಾರೆ.
ಭದ್ರತಾ ವೈಫಲ್ಯದ ವಿವಿಧ ಆಯಾಮಗಳು
ಪ್ರಕರಣದಲ್ಲಿ ಪ್ರಧಾನಿಯವರ ಭದ್ರತೆಗೆ ಸವಾಲು ಹಾಕುವ ಉದ್ದೇಶದಿಂದ, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲು ಅಥವಾ ಭದ್ರತಾ ಏಜೆನ್ಸಿಗಳನ್ನು ಪರೀಕ್ಷಿಸಲು ನಡೆಸಿದ ಸಂಚು ಇರಬಹುದೇ ಎಂಬ ಅನುಮಾನಗಳು ಎನ್‌ಐಎನಲ್ಲಿ ಮೂಡಿವೆ. ಅಲ್ಲದೇ, ಕಲ್ಲುಗಣಿಗಾರಿಕೆ ಅಥವಾ ನಿರ್ಮಾಣ ಕಾಮಗಾರಿಗಳಿಗೆ ಬಳಸುವ ಜಿಲೆಟಿನ್ ಕಡ್ಡಿಗಳನ್ನು ಯಾರೋ ಮರೆತು ಬಿಟ್ಟು ಹೋಗಿರುವ ಸಾಧ್ಯತೆ. ಆದರೆ, ವಿವಿಐಪಿ ಭೇಟಿ ನೀಡುವ ಮಾರ್ಗದಲ್ಲಿ ಇಂತಹ ವಸ್ತುಗಳ ಉಪಸ್ಥಿತಿಯನ್ನು ಪತ್ತೆಹಚ್ಚುವಲ್ಲಿ ಗುಪ್ತಚರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಮೂಲಗಳು ಹೇಳಿವೆ.
ಘಟನಾ ಸ್ಥಳದಲ್ಲಿ ಪತ್ತೆಯಾದ ಸ್ಫೋಟಕಗಳ ಮಾದರಿಯನ್ನು ಪೊಲೀಸರು ವಿಧಿವಿಜ್ಞಾನ ಸಂಗ್ರಹಾಲಯಕ್ಕೆ ಕಳುಹಿಸಿಕೊಡಲಾಗಿದೆ. ಜಿಲೆಟಿನ್ ಕಡ್ಡಿಗಳನ್ನು ತಯಾರಿಸಿದ ಕಂಪನಿ, ಅದನ್ನು ಖರೀದಿಸಿದವರು ಯಾರು, ಅದರ ಸರಣಿ ಸಂಖ್ಯೆ ಏನು ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಪತ್ತೆಯಾದ ಬೆಂಕಿಪೊಟ್ಟಣ ಮತ್ತು ಸ್ಫೋಟಕದ ಮೇಲೆ ಸಿಗುವ ಬೆರಳಚ್ಚುಗಳು ಅಥವಾ ಇತರೆ ಸಾಕ್ಷ್ಯಗಳು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲು ನೆರವಾಗುತ್ತವೆ ಎನ್ನಲಾಗಿದೆ.
ಒಡೆಯರಹಳ್ಳಿ ಘಟನೆಯು ದೇಶದ ಭದ್ರತಾ ವ್ಯವಸ್ಥೆಗೆ ಒಂದು ದೊಡ್ಡ ಸವಾಲಾಗಿದೆ. ಎನ್‌ಐಎ, ಎನ್‌ಎಸ್‌ಜಿ ಮತ್ತು ಆರ್‌ಎಡಬ್ಲ್ಯೂ ಸಂಸ್ಥೆಗಳು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ, ಬದಲಾಗಿ ರಾಷ್ಟ್ರೀಯ ಗೌರವ ಮತ್ತು ನಾಯಕನ ಭದ್ರತೆಯ ಪ್ರಶ್ನೆಯಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಶಂಕಿತ ವ್ಯಕ್ತಿಯ ವಿಚಾರಣೆಯನ್ನು ಮುಂದುವರಿಸಲಾಗಿದೆ. ಈ ವೇಳೆ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.

