x

ಪ್ರಧಾನಿ ಭದ್ರತೆ ನೆಪದಲ್ಲಿ ಮಾಂಸದಂಗಡಿಗಳಿಗೆ ಬೀಗ: ಜಿಲ್ಲಾಡಳಿತದ ಆದೇಶದ ಹಿಂದಿನ ತರ್ಕವೇನು?

ಪ್ರಧಾನಿಯವರ ಭದ್ರತಾ ಪ್ರೊಟೊಕಾಲ್‌ನಲ್ಲಿ ಮಾಂಸದಂಗಡಿಗಳನ್ನು ಮುಚ್ಚಿಸಬೇಕು ಎಂಬ ಯಾವುದೇ ಕಡ್ಡಾಯ ನಿಯಮಗಳಿಲ್ಲ. ಹೀಗಿದ್ದರೂ, ಕಿಡಿಗೇಡಿಗಳಿಂದ ಅಹಿತಕರ ಘಟನೆ ನಡೆಯಬಹುದು ಎಂಬ ಆತಂಕಕ್ಕೂ, ಮಾಂಸದಂಗಡಿಗಳಿಗೂ ಯಾವ ರೀತಿಯ ಸಂಬಂಧವಿದೆ ಎಂಬುದು ಯಾರಿಗೂ ಅರ್ಥವಾಗದ ಒಗಟಾಗಿದೆ.


Click the Play button to hear this message in audio format

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸುವುದು ಮತ್ತು ಪೊಲೀಸ್ ಕಣ್ಗಾವಲು ಹೆಚ್ಚಿಸುವುದು ಸಹಜ ಪ್ರಕ್ರಿಯೆ. ಆದರೆ, ಪ್ರಧಾನಿಯವರ ಕಾರ್ಯಕ್ರಮವೊಂದರ ಭದ್ರತೆಯ ನೆಪವೊಡ್ಡಿ ಸ್ಥಳೀಯ ಮಾಂಸದಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 13ರಂದು ಆನೇಕಲ್ ತಾಲೂಕಿನ ಜಿಗಣಿ ಬಳಿಯ ಎಸ್‌-ವ್ಯಾಸ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮಾಡಿದ ಮನವಿಯ ಮೇರೆಗೆ ಜಿಲ್ಲಾಧಿಕಾರಿ ಪಿ.ಎನ್. ಕಾಂತರಾಜು ಅವರು ನವೆಂಬರ್ 10ರಂದು ವಿಶೇಷ ಆದೇಶವೊಂದನ್ನು ಹೊರಡಿಸಿದ್ದಾರೆ.

ಈ ಆದೇಶದ ಪ್ರಕಾರ, ಜಿಗಣಿ ಹೋಬಳಿ, ಜಿಗಣಿ ಪಟ್ಟಣ ಮುನ್ಸಿಪಲ್ ವ್ಯಾಪ್ತಿ ಹಾಗೂ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಾಂಸದಂಗಡಿಗಳನ್ನು ನವೆಂಬರ್ 12ರ ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 13ರ ಸಂಜೆ 4 ಗಂಟೆಯವರೆಗೆ ಕಡ್ಡಾಯವಾಗಿ ಮುಚ್ಚುವಂತೆ ಸೂಚಿಸಲಾಗಿದೆ. ಇದಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಸೆಕ್ಷನ್ 163(1) ಅನ್ನು ಅಸ್ತ್ರವಾಗಿ ಬಳಸಲಾಗಿದೆ.

ಮದ್ಯ ನಿಷೇಧ ಸರಿ, ಆದರೆ ಮಾಂಸ ನಿಷೇಧ ಏಕೆ?

ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಚುನಾವಣೆ ಅಥವಾ ವಿಐಪಿ ಭೇಟಿ ವೇಳೆ, ಗಲಭೆಗಳು ಆಗದಂತೆ ತಡೆಯಲು ಮದ್ಯ ಮಾರಾಟವನ್ನು ನಿಷೇಧಿಸುವುದು ಸಾಮಾನ್ಯ. ಆದರೆ, ಮಾಂಸದಂಗಡಿಗಳು ತೆರೆದಿದ್ದರೆ ಪ್ರಧಾನಿಯವರ ಭದ್ರತೆಗೆ ಯಾವ ರೀತಿಯ ಅಪಾಯ ಎದುರಾಗುತ್ತದೆ ಎಂಬುದನ್ನು ಜಿಲ್ಲಾಡಳಿತ ಎಲ್ಲೂ ಸ್ಪಷ್ಟಪಡಿಸಿಲ್ಲ. ಗಾಂಧಿ ಜಯಂತಿ, ರಾಮನವಮಿ, ಮಹಾಶಿವರಾತ್ರಿಯಂತಹ ನಿರ್ದಿಷ್ಟ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳು ಮಾಂಸ ಮಾರಾಟವನ್ನು ನಿಷೇಧಿಸುವ ವಾಡಿಕೆ ಇದೆ. ಆದರೆ ಈ ನಿರ್ಬಂಧಗಳ ಹಿಂದೆ ಒಂದು ನಿರ್ದಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಉದ್ದೇಶವಿರುತ್ತದೆ. ಆದರೆ, ಪ್ರಧಾನಿಯವರ ಭದ್ರತಾ ಪ್ರೊಟೊಕಾಲ್‌ನಲ್ಲಿ ಮಾಂಸದಂಗಡಿಗಳನ್ನು ಮುಚ್ಚಿಸಬೇಕು ಎಂಬ ಯಾವುದೇ ಕಡ್ಡಾಯ ನಿಯಮಗಳಿಲ್ಲ. ಹೀಗಿದ್ದರೂ, ಕಿಡಿಗೇಡಿಗಳಿಂದ ಅಹಿತಕರ ಘಟನೆ ನಡೆಯಬಹುದು ಎಂಬ ಆತಂಕಕ್ಕೂ, ಮಾಂಸದಂಗಡಿಗಳಿಗೂ ಯಾವ ರೀತಿಯ ಸಂಬಂಧವಿದೆ ಎಂಬುದು ಯಾರಿಗೂ ಅರ್ಥವಾಗದ ಒಗಟಾಗಿದೆ.

ಕಾನೂನಿನ ಬಳಕೆ ಮತ್ತು ಸಣ್ಣ ವ್ಯಾಪಾರಿಗಳ ಸಂಕಷ್ಟ

ಹಳೆಯ ಸಿಆರ್‌ಪಿಸಿ ಸೆಕ್ಷನ್ 144ಕ್ಕೆ ಸಮಾನವಾದ ಸೆಕ್ಷನ್ 163 ಅನ್ನು ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕ ಶಾಂತಿ ಕಾಪಾಡಲು ಬಳಸಲಾಗುತ್ತದೆ. ಈ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಬಳಸುವಾಗ ಅದಕ್ಕೆ ಸಾಕಷ್ಟು ಬಲವಾದ ಆಧಾರಗಳಿರಬೇಕು. ಆದರೆ ಮಾಂಸ ಖರೀದಿಸುವ ಅಥವಾ ಮಾರುವ ವ್ಯಕ್ತಿಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂಬ ತರ್ಕವೇ ಹಾಸ್ಯಾಸ್ಪದವಾಗಿದೆ. ದಿನವಹಿ ವ್ಯಾಪಾರವನ್ನೇ ನಂಬಿಕೊಂಡಿರುವ ಸಣ್ಣ ವ್ಯಾಪಾರಿಗಳು ಈ ಆದೇಶದಿಂದ ನೇರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಚಿತವಾಗಿ ತಂದುಕೊಂಡಿರುವ ಮಾಂಸ ಹಾಳಾದರೆ, ಆ ನಷ್ಟವನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.

ಒಂದು ವೇಳೆ ಕಿಡಿಗೇಡಿಗಳಿಂದ ಭದ್ರತೆಗೆ ಅಪಾಯವಿದ್ದರೆ ಅವರನ್ನು ಗುರುತಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು, ವಾಹನಗಳ ತಪಾಸಣೆ ನಡೆಸುವುದು ಹಾಗೂ ಜನಸಂದಣಿ ನಿಯಂತ್ರಿಸುವುದು ಪೊಲೀಸರ ಮೂಲ ಜವಾಬ್ದಾರಿ. ಅದನ್ನು ಬಿಟ್ಟು, ಭದ್ರತೆಯ ನೆಪದಲ್ಲಿ ಯಾವುದೇ ಆಧಾರವಿಲ್ಲದೆ ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳನ್ನೆಲ್ಲ ಸ್ಥಗಿತಗೊಳಿಸುವುದು ಆಡಳಿತದ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಪ್ರಧಾನಿ ಭದ್ರತೆಯಲ್ಲಿ ಯಾವುದೇ ರಾಜಿ ಇರಬಾರದು ಎಂಬುದು ಎಷ್ಟು ಸತ್ಯವೋ, ಈ ರೀತಿಯ ಅವೈಜ್ಞಾನಿಕ ಆದೇಶಗಳಿಂದ ಸಾಮಾನ್ಯ ನಾಗರಿಕರ ಬದುಕು ಹಾಗೂ ವ್ಯಾಪಾರ ಮಾಡುವ ಹಕ್ಕನ್ನು ಕಸಿದುಕೊಳ್ಳಬಾರದು ಎಂಬುದೂ ಅಷ್ಟೇ ಸತ್ಯ. ಜಿಲ್ಲಾಡಳಿತ ಈ ಆದೇಶದ ಹಿಂದಿನ ನೈಜ ಭದ್ರತಾ ಕಾರಣವನ್ನು ಸಾರ್ವಜನಿಕವಾಗಿ ವಿವರಿಸಬೇಕಿದೆ.

Read More
Next Story