x

ಸ್ವಾತಂತ್ರ್ಯ ದಿನಾಚರಣೆ| ಯುವಜನತೆ, AI ಶಿಕ್ಷಣಕ್ಕೆ ಮೋದಿ, ಡಿ.ಕೆ.ಶಿವಕುಮಾರ್‌ ಭರ್ಜರಿ ಘೋಷಣೆ

80ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ 1 ಕೋಟಿ ಯುವಕರಿಗೆ AI ತರಬೇತಿ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ 72,000 ಸರ್ಕಾರಿ ಹುದ್ದೆ ಭರ್ತಿ ಸೇರಿ ದೇಶದ ಮೊದಲ AI ವಿವಿ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದಾರೆ.


Click the Play button to hear this message in audio format

80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಡಿಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಇಬ್ಬರೂ ನಾಯಕರ ಭಾಷಣದ ಪ್ರಮುಖ ಕೇಂದ್ರಬಿಂದು ಯುವಜನತೆ, ಉದ್ಯೋಗ ಹಾಗೂ ತಂತ್ರಜ್ಞಾನ ಕ್ಷೇತ್ರವೇ ಆಗಿತ್ತು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಮುಖ್ಯವಾಗಿ ಜಿನ್‌-ಜಿ (GenZ) ಮತ್ತು ಯುವಶಕ್ತಿಯನ್ನು ಉಲ್ಲೇಖಿಸಿ, 'ಆತ್ಮನಿರ್ಭರ ಭಾರತ'ದ ಪರಿಕಲ್ಪನೆಯನ್ನು ಮುನ್ನಡೆಸಲು ಯುವಜನತೆಯಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು. ದೇಶದ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ಕೌಶಲ್ಯ ತರಬೇತಿ ನೀಡುವುದಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ಕೋಚಿಂಗ್ ಒದಗಿಸುವುದಾಗಿ ಘೋಷಿಸಿದರು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕೋಚಿಂಗ್ ವೆಚ್ಚದ ಹೊರೆಯನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದೇ ವೇಳೆ ಭಾರತದ ಅಭಿವೃದ್ಧಿಗಾಗಿ ಉತ್ಪಾದನೆ, ಕೃಷಿ, ತಂತ್ರಜ್ಞಾನ, ಸೆಮಿಕಂಡಕ್ಟರ್, ರಕ್ಷಣೆ, ಇಂಧನ ಮತ್ತು ಸಾಫ್ಟ್ ಪವರ್ ಒಳಗೊಂಡ 'ಸಪ್ತಧಾರಾ' ಯೋಜನೆಯನ್ನು ಪ್ರಕಟಿಸಿದರು. ಜೊತೆಗೆ ದೇಶದಲ್ಲಿ 'ದಿಮಾಗಿ ನಕ್ಸಲ್' ಅಂದರೆ ನಕ್ಸಲ್ ಮನಸ್ಥಿತಿ ಹೊಂದಿರುವವರನ್ನು ಗುರುತಿಸುವ ಅಗತ್ಯವಿದೆ ಎಂದು ಎಚ್ಚರಿಸಿದರು. ದೇಶದಲ್ಲಿ 2030ರ ಕಾಮನ್ ವೆಲ್ತ್ ಕ್ರೀಡಾಕೂಟ ಆಯೋಜನೆ ಹಾಗೂ 2033ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ ಪ್ರಧಾನಿ, 'ವಂದೇ ಮಾತರಂ' ಗೀತೆಗೆ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿಯ ಧ್ವಜಾರೋಹಣ ಐತಿಹಾಸಿಕ ಕ್ಷಣವಾಗಿದೆ ಎಂದರು.

ಬೆಂಗಳೂರಿನಲ್ಲಿ ಸಿಎಂ ಡಿಕೆಶಿ ಮಹತ್ವದ ಘೋಷಣೆ

ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಖಾಲಿ ಇರುವ 72,000 ಸರ್ಕಾರಿ ಹುದ್ದೆಗಳನ್ನು ಮುಂದಿನ 6 ತಿಂಗಳಲ್ಲಿ ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಪ್ರಮುಖ ಘೋಷಣೆ ಮಾಡಿದರು. ಯುವಜನತೆಗೆ ಉದ್ಯೋಗದಾತರೊಂದಿಗೆ ನೇರ ಸಂಪರ್ಕ ಕಲ್ಪಿಸಲು 'ಉದ್ಯೋಗ ಸೇತು' ಯೋಜನೆ ಜಾರಿಗೆ ತರಲಾಗುವುದು ಹಾಗೂ ಹೊಸ ಉದ್ಯೋಗ ಸೃಷ್ಟಿಗೆ ತಿಂಗಳಿಗೆ 2,500 ರೂ. ಪ್ರೋತ್ಸಾಹಧನ ನೀಡಿ ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತರಲು ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ 6ನೇ ತರಗತಿಯಿಂದಲೇ ಶಾಲಾ ಮಕ್ಕಳಿಗೆ AI ಮತ್ತು ಉಚಿತ ಕೋಡಿಂಗ್ ತರಗತಿಗಳನ್ನು ಆರಂಭಿಸುವುದಾಗಿ ಪ್ರಕಟಿಸಿದರು. ರೈತರಿಗಾಗಿ ಡ್ರೋನ್ ಹಾಗೂ ಉಪಗ್ರಹ ತಂತ್ರಜ್ಞಾನ ಆಧಾರಿತ 'ಮುಖ್ಯಮಂತ್ರಿ ರೈತ ಚೈತನ್ಯ' ಡಿಜಿಟಲ್ ಕೃಷಿ ಯೋಜನೆ, 26,000 ಕೋಟಿ ರೂ. ವೆಚ್ಚದ 117 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಹಾಗೂ ಕಾನೂನು ಸುವ್ಯವಸ್ಥೆಗಾಗಿ 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್ ಸ್ಥಾಪನೆಯ ಯೋಜನೆಯನ್ನು ಪ್ರಸ್ತಾಪಿಸಿದರು. ಕಲ್ಬುರ್ಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳಿಗೂ ಟೆಕ್ ಹಬ್ ವಿಸ್ತರಿಸುವ ಮೂಲಕ 2047ರ ವೇಳೆಗೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಹಂಚಿಕೊಂಡರು

Read More
Next Story