ರಾಜ್ಯದ ರೈತರಿಗೆ ಗುಡ್ ನ್ಯೂಸ್: ಖಾರಿಫ್ ಬೆಳೆ ವಿಮೆ ನೋಂದಣಿಗೆ ಗಡುವು ವಿಸ್ತರಣೆ
x

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಖಾರಿಫ್ ಬೆಳೆ ವಿಮೆ ನೋಂದಣಿಗೆ ಗಡುವು ವಿಸ್ತರಣೆ

ರಾಜ್ಯದ ಕೃಷಿ ಇಲಾಖೆಯ ಆಯುಕ್ತರು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆ.31ರವರೆಗೆ ವಿಸ್ತರಿಸಲಾಗಿದೆ.


Click the Play button to hear this message in audio format

ರಾಜ್ಯದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಖಾರಿಫ್ 2026ನೇ ಸಾಲಿನ ಬೆಳೆ ವಿಮೆ ನೋಂದಣಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಮತ್ತು ತಾಂತ್ರಿಕ ಕಾರಣಗಳಿಂದಾಗಿ ವಿಮೆ ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ವಿಳಂಬವನ್ನು ಗಮನಿಸಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ನೋಂದಣಿ ಹಾಗೂ ಪ್ರೀಮಿಯಂ ಕಡಿತದ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದಾಗಿ ನೂರಾರು ರೈತರು ವಿಮೆಯ ಸುರಕ್ಷಾ ಕವಚದಿಂದ ವಂಚಿತರಾಗುವುದು ತಪ್ಪಿದಂತಾಗಿದೆ.

ರಾಜ್ಯದ ಕೃಷಿ ಇಲಾಖೆಯ ಆಯುಕ್ತರು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ಮನವಿ ಸಲ್ಲಿಸಿದ್ದರು. ಖಾರಿಫ್ 2026ನೇ ಹಂಗಾಮಿಗೆ ಸಂಬಂಧಿಸಿದಂತೆ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗಲು ಪ್ರಮುಖವಾಗಿ ಮೂರು ಕಾರಣಗಳನ್ನು ಉಲ್ಲೇಖಿಸಲಾಗಿತ್ತು.

ಅಧಿಸೂಚನೆ ಹೊರಡಿಸುವಲ್ಲಿ ಉಂಟಾದ ವಿಳಂಬ, ರಾಜ್ಯದಲ್ಲಿ ಕಂಡುಬಂದ ಅಸಹಜ ಹವಾಮಾನ ವೈಪರೀತ್ಯ ಮತ್ತು ತಳಮಟ್ಟದಲ್ಲಿ ಎದುರಾದ ಕಾರ್ಯಾಚರಣೆಯ ಸವಾಲುಗಳು. ಈ ಅಂಶಗಳಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಸಕಾಲದಲ್ಲಿ ನೋಂದಾಯಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಕೃಷಿ ಸಚಿವಾಲಯ, ರೈತರ ಹಿತದೃಷ್ಟಿಯಿಂದ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಲು ಒಪ್ಪಿಗೆ ನೀಡಿದೆ.


ವಿಮಾ ಕಂಪನಿಗಳ ಒಪ್ಪಿಗೆ

ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ವಿಮಾ ಕಂಪನಿಗಳಾದ ಎಸ್‌ಬಿಐ ಜನರಲ್ ಇನ್ಶೂರೆನ್ಸ್, ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್, ಐಎಫ್‌ಎಫ್‌ಸಿಒ ಟೊಕಿಯೊ ಜನರಲ್ ಇನ್ಶೂರೆನ್ಸ್ ಮತ್ತು ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್‌ಗಳು ಈ ವಿಸ್ತರಣೆಗೆ ತಮ್ಮ ಸಮ್ಮತಿಯನ್ನು ನೀಡಿವೆ. ಈ ಆದೇಶದ ಅನ್ವಯ, ಸಾಲ ಪಡೆದ ರೈತರಿಗೆ ಮಾತ್ರ ಈ ಹೆಚ್ಚುವರಿ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರ್ದಿಷ್ಟ ಬೆಳೆಗಳಿಗೆ ಮಾತ್ರ ಈ ವಿಸ್ತರಣೆಯನ್ನು ಅನ್ವಯಿಸಿದೆ. ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಮಗಳೂರು, ಧಾರವಾಡ, ಮೈಸೂರು, ರಾಯಚೂರು, ಬೆಂಗಳೂರು ನಗರ, ಕೋಲಾರ, ಚಿತ್ರದುರ್ಗ, ಹಾಸನ, ಮಂಡ್ಯ, ತುಮಕೂರು, ಉತ್ತರ ಕನ್ನಡ, ವಿಜಯನಗರ, ಯಾದಗಿರಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಈ ವಿಸ್ತರಣೆಯ ವ್ಯಾಪ್ತಿಗೆ ತರಲಾಗಿದೆ.

ಬೆಳೆಗಳಿಗೆ ವಿನಾಯಿತಿ

ಭತ್ತ, ರಾಗಿ, ಜೋಳ, ಸಜ್ಜೆ, ನವಣೆ ಮತ್ತು ವಾಣಿಜ್ಯ ಹಾಗೂ ಇತರೆ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಶೇಂಗಾ, ಸೂರ್ಯಕಾಂತಿ, ಹುರಳಿ ಬೆಳೆಗಳಿಗೆ ವಿನಾಯಿತಿ ನೀಡಲಾಗುತ್ತಿದೆ. ಗಡುವು ವಿಸ್ತರಣೆಯ ಜತೆಗೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ವಿಮಾ ಯೋಜನೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅಂದರೆ, ಈಗಾಗಲೇ ಬೆಳೆಗಳಿಗೆ ಹಾನಿಯಾಗಿದೆಯೆಂದು ತಿಳಿದ ನಂತರವೇ ವಿಮೆ ಮಾಡಿಸುವಂತಹ ಅಕ್ರಮಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೆಚ್ಚಿನ ನಿಗಾ ವಹಿಸಬೇಕು. ಆಪರೇಟಿವ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಗರಿಷ್ಠ ಸಂಖ್ಯೆಯ ಅರ್ಹ ರೈತರಿಗೆ ವಿಮೆ ತಲುಪುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ರೈತರಿಗೆ ಆಗಲಿರುವ ಲಾಭ

ಈ ಆದೇಶವು ರೈತ ಸಮುದಾಯಕ್ಕೆ ಬಲುದೊಡ್ಡ ನೆಮ್ಮದಿಯನ್ನು ತಂದಿದೆ. ಸಾಲ ಪಡೆದ ರೈತರ ಪಾಲಿಗೆ ವಿಮೆ ಕಡ್ಡಾಯವಾಗಿದ್ದು, ತಾಂತ್ರಿಕ ಕಾರಣಗಳಿಂದಾಗಿ ಪ್ರೀಮಿಯಂ ಕಡಿತವಾಗದಿದ್ದರೆ, ಬೆಳೆ ನಷ್ಟ ಸಂಭವಿಸಿದಾಗ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಈಗ ಆಗಸ್ಟ್ 31ರವರೆಗೆ ಕಾಲಾವಕಾಶ ಸಿಕ್ಕಿರುವುದರಿಂದ, ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಬಾಕಿ ಇರುವ ರೈತರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ರೈತರ ಬೆಳೆಗಳಿಗೆ ಸೂಕ್ತ ರಕ್ಷಣಾ ಭದ್ರತೆ ಸಿಗಲಿದೆ.

Read More
Next Story