ಮೈಸೂರಿನಲ್ಲಿ ಇಹಲೋಕ ತ್ಯಜಿಸಿದ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ
x

ಎಸ್ ಜಾನಕಿ ನಿಧನ

ಮೈಸೂರಿನಲ್ಲಿ ಇಹಲೋಕ ತ್ಯಜಿಸಿದ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ

ಸುಮಾರು 6 ದಶಕಗಳ ಕಾಲ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಹೆಗ್ಗಳಿಕೆ ಎಸ್. ಜಾನಕಿ ಅವರದ್ದು.


ಭಾರತೀಯ ಚಿತ್ರ ರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ದಕ್ಷಿಣ ಭಾರತದ ಕೋಗಿಲೆ ಎಂದು ಪ್ರಸಿದ್ಧರಾಗಿದ್ದ ಜಾನಕಿ ಅವರು 1957ರಲ್ಲಿ ಗಾಯನ ಆರಂಭಿಸಿದ್ದರು.

ಸುಮಾರು 6 ದಶಕಗಳ ಕಾಲ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಹೆಗ್ಗಳಿಕೆ ಇವರದ್ದು. ಜಾನಕಿ ಅವರ ನಿಧನದಿಂದ ಇಡೀ ಸಂಗೀತ ಲೋಕವೇ ಶೋಕಸಾಗರದಲ್ಲಿ ಮುಳುಗಿದೆ.

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆಯಲ್ಲಿ ಜನಿಸಿದ್ದ ಎಸ್. ಜಾನಕಿ ಅವರು, ಬಾಲ್ಯದಿಂದಲೇ ಸಂಗೀತದ ಕಡೆಗೆ ಒಲವು ಹೊಂದಿದ್ದರು.

ನಾದಸ್ವರ ವಿದ್ವಾನ್ ಪೈದಿಸ್ವಾಮಿ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದರು. ಆಕಾಶವಾಣಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾಗಿ, ನಂತರದ ದಿನಗಳಲ್ಲಿ ಚೆನ್ನೈಗೆ ಬಂದು ಚಿತ್ರರಂಗ ಪ್ರವೇಶಿಸಿದ್ದರು.

ಜಾನಕಿ ಅವರಿಗೆ 4 ರಾಷ್ಟ್ರೀಯ ಪ್ರಶಸ್ತಿಗಳು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸರ್ಕಾರಗಳಿಂದ 30ಕ್ಕೂ ಹೆಚ್ಚು ಬಾರಿ ಅತ್ಯುತ್ತಮ ಗಾಯಕಿ ರಾಜ್ಯ ಪ್ರಶಸ್ತಿಗಳು ಸಂದಿವೆ.

ಕನ್ನಡದ "ಬೆಳ್ಳಿ ಮೋಡದ", "ಕಣ್ಣು ತುಂಬಿ", "ಇವಳೇ ವೀಣಾಪಾಣಿ", "ಸಾವಿರಾರು ನದಿಗಳು" ಮುಂತಾದ ಹಲವಾರು ಮಧುರ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ.

ಪ್ರತಿಯೊಂದು ಭಾಷೆಯನ್ನೂ ಸ್ಪಷ್ಟವಾಗಿ ಉಚ್ಚರಿಸಿ, ಭಾವನೆಗಳಿಗೆ ತಕ್ಕಂತೆ ಹಾಡುವ ಅದ್ಭುತ ಕೌಶಲ್ಯ ಇವರದಾಗಿತ್ತು. ದಕ್ಷಿಣ ಭಾರತದ ಎಲ್ಲಾ ದಿಗ್ಗಜ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಜಾನಕಿಯವರು, 2016ರಲ್ಲಿ ತಮ್ಮ ಸುದೀರ್ಘ ಸಂಗೀತ ಪಯಣಕ್ಕೆ ನಿವೃತ್ತಿ ಘೋಷಿಸಿದ್ದರು.

Read More
Next Story