ಪಿಲಿಕುಳ ನಿಸರ್ಗಧಾಮವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅಜಯ್ ಧರ್ಮಸಿಂಗ್ ಸೂಚನೆ
x

ಪಿಲಿಕುಳ ನಿಸರ್ಗಧಾಮವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅಜಯ್ ಧರ್ಮಸಿಂಗ್ ಸೂಚನೆ

ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಅಜಯ್‌ ಧರ್ಮಸಿಂಗ್‌, ಪಿಲಿಕುಳವನ್ನು ಮುಂದಿನ 15 ವರ್ಷದಲ್ಲಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.


Click the Play button to hear this message in audio format

ರಾಜ್ಯದ ಪ್ರಮುಖ ಪ್ರವಾಸೋದ್ಯಮ ಮತ್ತು ಜೈವಿಕ ವೈವಿಧ್ಯದ ಕೇಂದ್ರವಾದ ಮಂಗಳೂರಿನ ಪಿಲಿಕುಳ ನಿಸರ್ಗಧಾಮವು ಇನ್ನು ಮುಂದೆ ಜಾಗತಿಕ ಗುಣಮಟ್ಟದ ವಿಜ್ಞಾನ ಮತ್ತು ಪ್ರವಾಸೋದ್ಯಮ ತಾಣವಾಗಿ ರೂಪುಗೊಳ್ಳಲಿದೆ. ಈ ಸಂಬಂಧ ರಾಜ್ಯದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪಿಲಿಕುಳವನ್ನು ಮುಂದಿನ 15 ವರ್ಷಗಳ ದೂರದೃಷ್ಟಿಯಿಂದ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.

ಪಿಲಿಕುಳವು ಈಗಾಗಲೇ ತನ್ನ ಜೈವಿಕ ಉದ್ಯಾನವನ, ತಾರಾಲಯ ಮತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರದ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಆದರೆ, ಸಚಿವರು ಇದರ ಅಭಿವೃದ್ಧಿಯನ್ನು ತುಂಡು-ತುಂಡಾಗಿ ಮಾಡುವ ಬದಲು, ಸುಸ್ಥಿರ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಒತ್ತು ನೀಡಿದ್ದಾರೆ. ಕೇವಲ ಪ್ರವಾಸೋದ್ಯಮಕ್ಕೆ ಸೀಮಿತವಾಗದೆ, ವಿಜ್ಞಾನ ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯನ್ನು ಒಂದೇ ಸೂರಿನಡಿ ತರುವುದು ಇದರ ಮುಖ್ಯ ಉದ್ದೇಶವಾಗಿದೆ. ಮುಂದಿನ 10 ರಿಂದ 15 ವರ್ಷಗಳ ಪ್ರವಾಸಿಗರ ಅಗತ್ಯತೆಗಳು, ತಂತ್ರಜ್ಞಾನದ ಬದಲಾವಣೆ ಮತ್ತು ವಿಜ್ಞಾನದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುವುದು. ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೆ ತರಲು ಶೀಘ್ರವೇ ಟೆಂಡರ್ ಕರೆಯುವಂತೆ ಆದೇಶಿಸಿದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ

ಪಿಲಿಕುಳದ ಅಭಿವೃದ್ಧಿಯಲ್ಲಿ ಸರ್ಕಾರಿ ಅನುದಾನವನ್ನೇ ಅವಲಂಬಿಸುವುದಕ್ಕಿಂತ, ಆರ್ಥಿಕವಾಗಿ ಸ್ವಾವಲಂಬಿಯಾಗುವುದು ಹೇಗೆ ಎಂಬುದರ ಬಗ್ಗೆ ಸಚಿವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಯಾವ ಸೌಲಭ್ಯಗಳನ್ನು ನಿರ್ವಹಿಸಬಹುದು ಎಂಬುದನ್ನು ಪರಿಶೀಲಿಸಬೇಕು. ಪ್ರವಾಸಿಗರಿಗೆ ನೀಡುವ ವಿಶಿಷ್ಟ ಅನುಭವಗಳು ಮತ್ತು ಆಕರ್ಷಕ ವಿಜ್ಞಾನ ಚಟುವಟಿಕೆಗಳ ಮೂಲಕ ಆದಾಯವನ್ನು ಹೆಚ್ಚಿಸಿ, ನಿಸರ್ಗಧಾಮವನ್ನು ಆರ್ಥಿಕವಾಗಿ ಸದೃಢಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಹೊಸ ವಿಜ್ಞಾನ ಗ್ಯಾಲರಿ

ಸಚಿವರ ಮತ್ತೊಂದು ಮಹತ್ವದ ಪ್ರಸ್ತಾವನೆಯೆಂದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ಸೈನ್ಸ್ ಗ್ಯಾಲರಿ’ ಸ್ಥಾಪನೆಯಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ‘ಸೈನ್ಸ್ ಗ್ಯಾಲರಿ ನೆಟ್‌ವರ್ಕ್’ ಮಾದರಿಯನ್ನು ರಾಜ್ಯದ ಹಿಂದುಳಿದ ಭಾಗಕ್ಕೂ ವಿಸ್ತರಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ವಿಜ್ಞಾನವನ್ನು ಕೇವಲ ಪುಸ್ತಕದ ಪಾಠವಾಗಿಸದೆ, ಕಲೆ ಮತ್ತು ಸಾರ್ವಜನಿಕ ಸಂವಾದಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವುದು ಇದರ ವಿಶೇಷತೆಯಾಗಿದೆ. ಈ ಗ್ಯಾಲರಿಯು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ವೈಜ್ಞಾನಿಕ ಅರಿವನ್ನು ಮೂಡಿಸುವ ತಾಣವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ರಾಜ್ಯದಲ್ಲಿರುವ ವಿವಿಧ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಮತ್ತು ತಾರಾಲಯಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದರಿಂದ ಸಂಪನ್ಮೂಲಗಳ ವ್ಯರ್ಥವಾಗುತ್ತಿದೆ ಎಂಬುದನ್ನು ಗಮನಿಸಿದ ಸಚಿವರು, ಅವೆಲ್ಲವನ್ನೂ ಒಂದು ‘ನೆಟ್‌ವರ್ಕ್’ ಅಡಿಯಲ್ಲಿ ತರಲು ಸೂಚಿಸಿದರು. ಒಂದು ಕೇಂದ್ರದಲ್ಲಿರುವ ಪ್ರದರ್ಶನಗಳು ಅಥವಾ ವಿಜ್ಞಾನ ವಿಷಯಗಳನ್ನು ಇನ್ನೊಂದು ಕೇಂದ್ರದೊಂದಿಗೆ ಹಂಚಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಅನುಭವಗಳು ಸಿಗುವುದಲ್ಲದೆ, ವೆಚ್ಚವೂ ಕಡಿಮೆಯಾಗುತ್ತದೆ. ವಿಜ್ಞಾನ ಕೇಂದ್ರಗಳು ಕೇವಲ ಪ್ರದರ್ಶನಾಲಯಗಳಾಗಿರದೆ, ನಿರಂತರವಾಗಿ ಹೊಸ ವಿಷಯಗಳನ್ನು ಕಲಿಸುವ ಕೇಂದ್ರಗಳಾಗಿ ಬೆಳೆಯಬೇಕು ಎಂದು ಹೇಳಿದರು.

Read More
Next Story