ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: 101 ಬಂಕ್‌ಗಳಿಗೆ ದಂಡ ವಿಧಿಸಿದ ರಾಜ್ಯ ಸರ್ಕಾರ
x

ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: 101 ಬಂಕ್‌ಗಳಿಗೆ ದಂಡ ವಿಧಿಸಿದ ರಾಜ್ಯ ಸರ್ಕಾರ

ಪ್ರಮುಖ ಕಂಪನಿಗಳ 805 ಬಂಕ್‌ಗಳನ್ನು ತಪಾಸಣೆಗೊಳಪಡಿಸಲಾಗಿದೆ. ಈ ಪೈಕಿ 101 ಬಂಕ್‌ಗಳಲ್ಲಿ ಇಂಧನ ವಿತರಣೆಯಲ್ಲಿ ಮಿತಿ ಮೀರಿದ ದೋಷಗಳು ಕಂಡುಬಂದಿದ್ದು, 6.66 ಲಕ್ಷ ರೂ. ದಂಡ ವಿಧಿಸಲಾಗಿದೆ.


Click the Play button to hear this message in audio format

ನೀವು ಪೆಟ್ರೋಲ್ ಬಂಕ್‌ಗೆ ಹೋದಾಗ ನಿಮ್ಮ ವಾಹನಕ್ಕೆ ಹಾಕಿಸುವ ಇಂಧನದಲ್ಲಿ ವ್ಯತ್ಯಾಸವಾಗುತ್ತಿದೆಯೇ? ನೀವು ಪಾವತಿಸುವ ಹಣಕ್ಕೆ ತಕ್ಕಷ್ಟು ಇಂಧನ ಸಿಗುತ್ತಿದೆಯೇ? ಇಂತಹ ಅನುಮಾನಗಳಿಗೀಗ ಸರ್ಕಾರವೇ ಉತ್ತರ ನೀಡಿದೆ.

ಗ್ರಾಹಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಕಳೆದ 8 ದಿನಗಳಿಂದ ನಿರಂತರ ತಪಾಸಣೆ ನಡೆಸಲಾಗಿದೆ. ರಾಜ್ಯದ 5,946 ಪೆಟ್ರೋಲ್ ಬಂಕ್‌ಗಳ ಪೈಕಿ, ಪ್ರಮುಖ ಕಂಪನಿಗಳ 805 ಬಂಕ್‌ಗಳನ್ನು ತಪಾಸಣೆಗೊಳಪಡಿಸಲಾಗಿದೆ. ಈ ಪೈಕಿ 101 ಬಂಕ್‌ಗಳಲ್ಲಿ ಇಂಧನ ವಿತರಣೆಯಲ್ಲಿ ಮಿತಿ ಮೀರಿದ ದೋಷಗಳು ಕಂಡುಬಂದಿವೆ. ತಕ್ಷಣವೇ ಈ ಬಂಕ್‌ಗಳ ವಿರುದ್ಧ ಮೊಕದ್ದಮೆ ದಾಖಲಿಸಿ, 6.66 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ತಪಾಸಣಾ ಅಭಿಯಾನವು ನಿರಂತರವಾಗಿ ಮುಂದುವರಿಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯ ಮೂಲ ಮಂತ್ರವೇ ʼಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ, ನಿಖರವಾದ ಪ್ರಮಾಣವೇ ದೊರೆಯಬೇಕುʼ. ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಗೂ ನ್ಯಾಯಯುತವಾದ ಸೇವೆ ಸಿಗಬೇಕು ಎಂಬುದು ನಮ್ಮ ಸಂಕಲ್ಪ. ಕೇಂದ್ರ ಸರ್ಕಾರವು ಡಿಸೆಂಬರ್ 2025ರಲ್ಲಿ ಜಾರಿಗೆ ತಂದಿರುವ 'ಕಾನೂನು ಮಾಪನಶಾಸ್ತ್ರ' ತಿದ್ದುಪಡಿ ಸಮರ್ಪಕವಾಗಿಲ್ಲ. ಹಿಂದೆ ವರ್ಷಕ್ಕೊಮ್ಮೆ ನಡೆಯಬೇಕಿದ್ದ ಪೆಟ್ರೋಲ್ ಬಂಕ್‌ಗಳ ಮರುಸತ್ಯಾಪನೆ ಅವಧಿಯನ್ನು ಕೇಂದ್ರವು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಎರಡು ವರ್ಷಕ್ಕೊಮ್ಮೆ ಎಂದು ವಿಸ್ತರಿಸಿದೆ. ರಾಜ್ಯದಲ್ಲಿ ತಪಾಸಣೆ ನಡೆಸಿದ 10 ವಿತರಣಾ ನಳಿಕೆಗಳ ಪೈಕಿ 8.5 ನಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಹೀಗಿರುವಾಗ ಸತ್ಯಾಪನೆಯನ್ನು ಎರಡು ವರ್ಷಕ್ಕೊಮ್ಮೆ ಮಾಡುವುದರಿಂದ ಗ್ರಾಹಕರಿಗೆ ವಾರ್ಷಿಕವಾಗಿ ನೂರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗೀಕರಣಕ್ಕೆ ವಿರೋಧ

2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 1,430 ಕೋಟಿ ಲೀಟರ್ ಇಂಧನ ಮಾರಾಟವಾಗಿದ್ದು, ಈ ನಷ್ಟವು ಸಾಮಾನ್ಯ ಗ್ರಾಹಕನ ಜೇಬಿಗೆ ನೇರವಾಗಿ ಹೊಡೆತ ನೀಡುತ್ತಿದೆ. ಈ ಅವಧಿಯನ್ನು ಮತ್ತೆ ಒಂದು ವರ್ಷಕ್ಕೆ ಇಳಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದರು. ಕೇಂದ್ರ ಸರ್ಕಾರವು ಸರ್ಕಾರದಿಂದ ಅನುಮೋದಿತ ಪರೀಕ್ಷಾ ಕೇಂದ್ರಗಳು (ಜಿಎಟಿಸಿ) ಮೂಲಕ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಪೆಟ್ರೋಲ್ ಬಂಕ್‌ಗಳ ಸತ್ಯಾಪನೆ ಮತ್ತು ಮುದ್ರೆ ಹಾಕುವ ಅಧಿಕಾರ ನೀಡಲು ಹೊರಟಿದೆ. ಇದು ವಾಣಿಜ್ಯೀಕರಣಕ್ಕೆ ದಾರಿ ಮಾಡಿಕೊಡಲಿದ್ದು, ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಲಿದೆ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಗ್ರಾಹಕರಿಗೆ ನಿಖರ ಮಾಹಿತಿ ನೀಡಲು ಇಲಾಖೆಯು ಶೀಘ್ರವೇ ಆನ್‌ಲೈನ್ ಡ್ಯಾಶ್‌ಬೋರ್ಡ್ ಒಂದನ್ನು ಪ್ರಾರಂಭಿಸಲಿದೆ. ಇದರಲ್ಲಿ ರಾಜ್ಯದ ಪ್ರತಿಯೊಂದು ಪೆಟ್ರೋಲ್ ಬಂಕ್‌ಗೆ ಸರ್ಕಾರಿ ಪ್ರಮಾಣಪತ್ರ ಸಿಕ್ಕಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಗ್ರಾಹಕರು ಸುಲಭವಾಗಿ ಪರಿಶೀಲಿಸಬಹುದು ಎಂದರು.

ದೂರು ನೀಡಲು ಸಹಾಯವಾಣಿ

ತೂಕ ಮತ್ತು ಅಳತೆಯಲ್ಲಿ ಮೋಸ ಹೋಗುತ್ತಿರುವ ಗ್ರಾಹಕರು ಇನ್ನು ಮುಂದೆ ನೇರವಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಟೋಲ್-ಫ್ರೀ ಸಹಾಯವಾಣಿ 1800 599 1100, ಇ-ಮೇಲ್ ವಿಳಾಸ [email protected] ಅನ್ನು ಸಂಪರ್ಕಿಸಿ ದೂರುಗಳನ್ನು ದಾಖಲಿಸಬಹುದು. ಡಿಸೆಂಬರ್ 2026ರೊಳಗೆ ಬಾಕಿಯಿರುವ 2,500 ಬಂಕ್‌ಗಳ ನಿಖರತೆಯನ್ನು ಪರೀಕ್ಷಿಸಿ ಪ್ರಮಾಣೀಕರಿಸಲಾಗುವುದು ಎಂದು ಭರವಸೆ ನೀಡಿದರು.

Read More
Next Story