ಮೊಬೈಲ್ ಪತ್ತೆ ಬೆನ್ನಲ್ಲೇ ಎಚ್ಚೆತ್ತ ಜೈಲು ಇಲಾಖೆ: ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ
x

ಮೊಬೈಲ್ ಪತ್ತೆ ಬೆನ್ನಲ್ಲೇ ಎಚ್ಚೆತ್ತ ಜೈಲು ಇಲಾಖೆ: ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ

ಇಬ್ಬರು ಕೈದಿಗಳಿದ್ದ ಬ್ಯಾರಕ್‌ನಲ್ಲಿದ್ದ ಪವಿತ್ರಾ ಗೌಡರನ್ನು,16 ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ದರ್ಶನ್ ಇರುವ ಬ್ಯಾರಕ್‌ ಸುತ್ತಮುತ್ತಲ ಭದ್ರತೆ ದ್ವಿಗುಣಗೊಳಿಸಲಾಗಿದೆ.


Click the Play button to hear this message in audio format

ರಾಜ್ಯದ ಅತಿದೊಡ್ಡ ಕಾರಾಗೃಹವಾದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಇದೀಗ ಭದ್ರತಾ ಲೋಪಗಳ ಕಾರಣದಿಂದಾಗಿ ಸುದ್ದಿಯ ಕೇಂದ್ರಬಿಂದುವಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಘಟನೆಯು ಜೈಲು ಆಡಳಿತಕ್ಕೆ ಮುಜುಗರ ತಂದಿದ್ದು, ಇದರ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ನಡೆಸಿದ ದಿಢೀರ್ ತಪಾಸಣೆಯು ಜೈಲಿನ ಒಳಾಂಗಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಈ ಕಾರ್ಯಾಚರಣೆ ಬಿಸಿ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಹೈಪ್ರೊಫೈಲ್ ಕೈದಿಗಳಿಗೂ ತಟ್ಟಿದೆ.

ಪರಪ್ಪನ ಅಗ್ರಹಾರದಂತಹ ಹೈ ಸೆಕ್ಯುರಿಟಿ ವಲಯದಲ್ಲಿ ಕೈದಿಗಳ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಇಲಾಖೆಯ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ನಿಷೇಧಿತ ವಸ್ತುವಾದ ಮೊಬೈಲ್ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಇಲಾಖೆಯು, ಆಡಳಿತಾತ್ಮಕವಾಗಿ ಕಠಿಣ ಕ್ರಮಗಳಿಗೆ ಮುಂದಾಯಿತು. ಡಿಜಿಪಿ ಅಲೋಕ್ ಕುಮಾರ್ ಅವರು ಸ್ವತಃ ಜೈಲಿಗೆ ಭೇಟಿ ನೀಡಿ, ಪ್ರತಿ ಬ್ಯಾರಕ್‌ನ ಕೂಲಂಕುಷ ತಪಾಸಣೆ ನಡೆಸಿದರು. ಇದರ ಪರಿಣಾಮವಾಗಿ, ನಿಯಮ ಮೀರಿ ಕೈದಿಗಳಿಗೆ ದೊರಕುತ್ತಿದ್ದ ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕಲಾಗಿದೆ.

ಪ್ರಜ್ವಲ್ ರೇವಣ್ಣಗೆ ಇಲ್ಲ ವಿಶೇಷ ಸವಲತ್ತು

ಈವರೆಗೆ ಪ್ರಜ್ವಲ್ ರೇವಣ್ಣ ಅವರಿಗೆ ಸಿಗುತ್ತಿದ್ದ ವಿಶೇಷ ಸವಲತ್ತುಗಳನ್ನು ಆಡಳಿತ ಮಂಡಳಿ ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಕೇವಲ 22 ಜನರಿದ್ದ ಬ್ಯಾರಕ್‌ನಲ್ಲಿದ್ದ ಅವರನ್ನು, ಹೆಚ್ಚಿನ ಕೈದಿಗಳಿರುವ ಸಾಮಾನ್ಯ ಬ್ಯಾರಕ್‌ಗೆ ಶಿಫ್ಟ್ ಮಾಡುವ ಮೂಲಕ ಅವರ ಮೇಲಿನ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ. ಇನ್ನು ಮುಂದೆ ಯಾವುದೇ ಹೊರಗಿನ ಸಂಪರ್ಕ ಅಥವಾ ವಿಶೇಷ ಸೌಲಭ್ಯಗಳು ಲಭ್ಯವಿಲ್ಲದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ದರ್ಶನ್ ಮತ್ತು ಪವಿತ್ರಾ ಗೌಡರ ಬ್ಯಾರಕ್‌ನಲ್ಲಿ ಬದಲಾವಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಮತ್ತು ಸಹ-ಆರೋಪಿ ಪವಿತ್ರಾ ಗೌಡ ಅವರ ಮೇಲೆ ಜೈಲು ಅಧಿಕಾರಿಗಳ ಕಣ್ಣು ಬಿದ್ದಿದೆ. ಭದ್ರತಾ ದೃಷ್ಟಿಯಿಂದ ಇವರನ್ನು ಸದ್ಯ ಇರುವ ಸ್ಥಾನದಿಂದ ಬದಲಾಯಿಸಲಾಗಿದೆ. ಈ ಹಿಂದೆ ಕೇವಲ ಇಬ್ಬರು ಕೈದಿಗಳಿದ್ದ ಬ್ಯಾರಕ್‌ನಲ್ಲಿದ್ದ ಪವಿತ್ರಾ ಗೌಡ ಅವರನ್ನು, ಇದೀಗ 16 ಮಂದಿ ಕೈದಿಗಳಿರುವ ಸಾಮೂಹಿಕ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಇದು ಅವರ ಜೈಲಿನ ಏಕಾಂತ ಮತ್ತು ವಿಐಪಿ ಸವಲತ್ತುಗಳಿಗೆ ದೊಡ್ಡ ಹೊಡೆತ ನೀಡಿದೆ. ನಟ ದರ್ಶನ್ ಇರುವ ಬ್ಯಾರಕ್‌ನ ಸುತ್ತಮುತ್ತಲ ಭದ್ರತೆಯನ್ನು ದ್ವಿಗುಣಗೊಳಿಸಲಾಗಿದೆ. ಅವರ ಪ್ರತಿ ಚಲನವಲನವನ್ನು ಸೆರೆಹಿಡಿಯಲು ಉನ್ನತ ಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಧಿಕಾರಿಗಳು 24/7 ನಿಗಾ ವಹಿಸಲು ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಯಾರೊಂದಿಗೆ ಮಾತನಾಡುತ್ತಾರೆ, ಏನು ಮಾಡುತ್ತಾರೆ ಎಂಬ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಸಾಕ್ಷಿ ಪ್ರದೂಷ್‌ಗೆ ಭದ್ರತೆ

ಪ್ರಜ್ವಲ್‌ ರೇವಣ್ಣ ಪ್ರಕರಣದ ಮತ್ತೊಬ್ಬ ಆರೋಪಿ ಹಾಗೂ ಮಾಫಿ ಸಾಕ್ಷಿಯಾಗಿರುವ ಪ್ರದೂಷ್‌ನ ಸುರಕ್ಷತೆಗೂ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಕರಣದ ಮಹತ್ವದ ಕೊಂಡಿಯಾಗಿರುವ ಪ್ರದೂಷ್‌ಗೆ ಬೇರೆ ಕೈದಿಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳಲು, ಈಗಾಗಲೇ ಅವರನ್ನು ಮತ್ತೊಂದು ಬ್ಯಾರಕ್‌ಗೆ ಸ್ಥಳಾಂತರಿಸಿ, ಅಲ್ಲಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಘಟನೆಗಳು ಜೈಲು ಆಡಳಿತದ ಮೇಲೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. "ಜೈಲು ಎಂಬುದು ಸುಧಾರಣಾ ಕೇಂದ್ರವಾಗಬೇಕೇ ಹೊರತು, ಅಪರಾಧಿಗಳ ಪಾಲಿನ ರಾಜಭೋಗದ ತಾಣವಾಗಬಾರದು" ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ, ಡಿಜಿಪಿ ಅಲೋಕ್ ಕುಮಾರ್ ಅವರು ತನಿಖೆಯನ್ನು ತೀವ್ರಗೊಳಿಸಿದ್ದು, ಜೈಲು ಸಿಬ್ಬಂದಿಗಳ ಪೈಕಿ ಯಾರಾದರೂ ಈ ಅಕ್ರಮಗಳಿಗೆ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಆಂತರಿಕ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಜೈಲಿನ ಒಳಗೆ ಮೊಬೈಲ್, ಡ್ರಗ್ಸ್ ಮತ್ತು ಇತರ ನಿಷೇಧಿತ ವಸ್ತುಗಳು ಪ್ರವೇಶಿಸದಂತೆ ತಡೆಯಲು 'ಜ್ಯಾಮರ್' ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ. ಭೇಟಿ ನೀಡುವವರ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿದ್ದು, ಕೈದಿಗಳೊಂದಿಗೆ ಸಂಪರ್ಕ ಸಾಧಿಸುವ ಪ್ರತಿಯೊಂದು ಚಟುವಟಿಕೆಯನ್ನು ದಾಖಲಿಸಲಾಗುತ್ತಿದೆ.

Read More
Next Story