ಇ-ಸ್ವತ್ತು 2.0 ಗೆ ಹೊಸ ರೂಪ: ಗ್ರಾಮೀಣ ಆಸ್ತಿ ದಾಖಲೆಗಳಿಗೆ ಇನ್ನು ಸ್ವಯಂಚಾಲಿತ ಅನುಮೋದನೆ
x

ಇ-ಸ್ವತ್ತು 2.0 ಗೆ ಹೊಸ ರೂಪ: ಗ್ರಾಮೀಣ ಆಸ್ತಿ ದಾಖಲೆಗಳಿಗೆ ಇನ್ನು ಸ್ವಯಂಚಾಲಿತ ಅನುಮೋದನೆ

ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ಅತ್ಯಾಧುನಿಕ 'ಇ-ಸ್ವತ್ತು 2.0' ಆಗಿ ಪರಿವರ್ತಿಸಲಾಗಿದ್ದು, ಇದು ಗ್ರಾಮೀಣ ನಾಗರಿಕರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.


Click the Play button to hear this message in audio format

ಗ್ರಾಮೀಣ ಭಾರತದ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಅನ್ನು ಅಧಿಸೂಚಿಸುವ ಮೂಲಕ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ. ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ, ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ಅತ್ಯಾಧುನಿಕ 'ಇ-ಸ್ವತ್ತು 2.0' ಆಗಿ ಪರಿವರ್ತಿಸಲಾಗಿದ್ದು, ಇದು ಗ್ರಾಮೀಣ ನಾಗರಿಕರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ಹಿಂದಿನ ಇ-ಸ್ವತ್ತು ವ್ಯವಸ್ಥೆಯಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ಪಡೆಯಲು ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಕಚೇರಿಗಳಿಗೆ ಪದೇ ಪದೆ ಅಲೆದಾಡುವುದು, ಅರ್ಜಿಗಳ ಇತ್ಯರ್ಥದಲ್ಲಿ ವಿಳಂಬ ಮತ್ತು ಸ್ಪಷ್ಟವಾದ ನಿಯಮಾವಳಿಗಳ ಕೊರತೆಯು ಜನರಿಗೆ ತೊಂದರೆ ನೀಡುತ್ತಿತ್ತು. ಈ ಸಮಸ್ಯೆಗಳನ್ನು ಮನಗಂಡ ಸರ್ಕಾರ, ಸಾರ್ವಜನಿಕ ಹಿತದೃಷ್ಟಿಯಿಂದ ತಂತ್ರಾಂಶವನ್ನು ಪೂರ್ಣ ಪ್ರಮಾಣದಲ್ಲಿ ಮಾರ್ಪಡಿಸಿದೆ. 2025ರ ಡಿ.1ರಂದು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚಾಲನೆಗೊಂಡ ಈ ನೂತನ ತಂತ್ರಾಂಶವು, ಗ್ರಾಮೀಣ ಆಸ್ತಿ ನಿರ್ವಹಣೆಯನ್ನು ಸರಳೀಕರಣಗೊಳಿಸಿದೆ.

ಪ್ರಮುಖ ಮಾರ್ಪಾಡುಗಳು, ಸಾರ್ವಜನಿಕರಿಗೆ ಸಿಗುವ ಲಾಭಗಳು
ದಾಖಲೆಗಳ ಆಧಾರದ ಮೇಲೆ ನಮೂನೆ ವಿತರಣೆ

ಹಿಂದಿನ ನಿಯಮಗಳಲ್ಲಿನ ಅಸ್ಪಷ್ಟತೆಯನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕಂದಾಯ ಇಲಾಖೆಯ ಕರ್ನಾಟಕ ಭೂ-ಕಂದಾಯ ಅಧಿನಿಯಮದಡಿ ವಿತರಿಸಲಾದ ಹಕ್ಕುಪತ್ರಗಳು, ಮನೆದಳ ಮತ್ತು ಕಣಮನೆ ಪ್ರಮಾಣ ಪತ್ರಗಳನ್ನು ಆಧಾರವಾಗಿಟ್ಟುಕೊಂಡು ನಮೂನೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದು ಪಹಣಿ ಹೊಂದಿರುವ ರೈತರಿಗೆ ಮತ್ತು ಗ್ರಾಮೀಣ ನಿವಾಸಿಗಳಿಗೆ ತಮ್ಮ ಆಸ್ತಿ ದಾಖಲೆಗಳನ್ನು ನವೀಕರಿಸಿಕೊಳ್ಳಲು ದೊಡ್ಡ ಮಟ್ಟದ ಸಹಕಾರಿಯಾಗಲಿದೆ. ಗ್ರಾಮ ಪಂಚಾಯಿತಿಗಳ ಆದಾಯವನ್ನು ಹೆಚ್ಚಿಸಲು ಮತ್ತು ಅನಧಿಕೃತ ಆಸ್ತಿಗಳನ್ನು ಸಕ್ರಮಗೊಳಿಸಲು ಇ-ಸ್ವತ್ತು 2.0 ರಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಕೃಷಿ ಭೂಮಿಯಲ್ಲಿರುವ ಮನೆಗಳು, ವಸತಿ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳು, ಗ್ರಾಮ ಠಾಣಾದಲ್ಲಿ ನೋಂದಾಯಿತ ದಾಖಲೆಗಳಿಲ್ಲದ ಕಟ್ಟಡಗಳು, ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾದ ಆಸ್ತಿಗಳು. ಈ ಎಲ್ಲಾ ವಿಭಾಗಗಳನ್ನು ತೆರಿಗೆ ವ್ಯಾಪ್ತಿಗೆ ತರುವುದರಿಂದ ಪಂಚಾಯಿತಿಗಳ ಬೊಕ್ಕಸಕ್ಕೆ ಆದಾಯ ಹೆಚ್ಚಲಿದೆ ಮತ್ತು ಅಂತಹ ಆಸ್ತಿಗಳಿಗೆ ಮಾಲೀಕತ್ವದ ಅಧಿಕೃತ ದಾಖಲೆಗಳು ದೊರೆಯಲಿವೆ.

ಸ್ವಯಂ ಚಾಲಿತ ಅನುಮೋದನೆ

ಸರ್ಕಾರಿ ಕೆಲಸಗಳಲ್ಲಿನ ವಿಳಂಬಕ್ಕೆ ಕಡಿವಾಣ ಹಾಕಲು ಸ್ವಯಂ ಚಾಲಿತ ಅನುಮೋದನೆ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ. ಪ್ರತಿಯೊಂದು ಹಂತದ ಅರ್ಜಿಗೆ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಆ ಅರ್ಜಿಯನ್ನು ಇತ್ಯರ್ಥಪಡಿಸದಿದ್ದರೆ, ತಂತ್ರಾಂಶವೇ ಸ್ವಯಂಚಾಲಿತವಾಗಿ ಅನುಮೋದನೆ ನೀಡುತ್ತದೆ. ಇದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಮಾತ್ರವಲ್ಲದೆ, ಅಧಿಕಾರಿಗಳಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ನಮೂನೆ-11ಬಿ ಪಡೆಯುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮೇಲ್ಮನವಿ ಸಲ್ಲಿಕೆಯ ಅವಧಿಯನ್ನು 2026ರ ಸೆ.30ರವರೆಗೆ ವಿಸ್ತರಿಸಲಾಗಿದೆ. ಇದು ಆಸ್ತಿ ಮಾಲೀಕರಿಗೆ ತಮ್ಮ ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ಇರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಿದೆ.

ಆಡಳಿತಾತ್ಮಕ ಬದಲಾವಣೆಯ ಮಹತ್ವ

ಸಚಿವ ಪ್ರಿಯಾಂಕ್ ಖರ್ಗೆ ಪ್ರಕಾರ, ಈ ನಿಯಮಗಳು ಕೇವಲ ಸಾಫ್ಟ್‌ವೇರ್ ಅಪ್‌ಡೇಟ್ ಅಲ್ಲ, ಬದಲಾಗಿ ಆಡಳಿತ ವ್ಯವಸ್ಥೆಯ ಸುಧಾರಣೆ. ಡಿಜಿಟಲೀಕರಣದ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡುವುದು ಮತ್ತು ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಸುಲಭವಾಗಿ ಸಾಬೀತುಪಡಿಸಲು ಅವಕಾಶ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಗ್ರಾಮೀಣ ಆರ್ಥಿಕತೆಗೆ ಕೊಡುಗೆ

ಆಸ್ತಿಗಳಿಗೆ ಅಧಿಕೃತ ನಮೂನೆ-11ಬಿ ಅಥವಾ ಇತರ ದಾಖಲೆಗಳು ದೊರೆತಾಗ, ಅವುಗಳಿಗೆ ಮಾರುಕಟ್ಟೆ ಮೌಲ್ಯ ಸಿಗುತ್ತದೆ. ಬ್ಯಾಂಕ್ ಸಾಲ ಪಡೆಯಲು, ಆಸ್ತಿ ಮಾರಾಟಕ್ಕೆ ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಈ ದಾಖಲೆಗಳು ಅತ್ಯಗತ್ಯ. ಹಿಂದೆ ದಾಖಲೆಗಳ ಕೊರತೆಯಿಂದಾಗಿ ಅತಂತ್ರವಾಗಿದ್ದ ಸಾವಿರಾರು ಆಸ್ತಿಗಳಿಗೆ ಈಗ ಕಾನೂನು ಮಾನ್ಯತೆ ದೊರೆತಂತಾಗಿದೆ. ಇದು ಗ್ರಾಮೀಣ ಭಾಗದ ಆರ್ಥಿಕ ಚಲನಶೀಲತೆಯನ್ನು ಹೆಚ್ಚಿಸಲಿದೆ.

ರಾಜ್ಯ ಸರ್ಕಾರದ 'ಇ-ಸ್ವತ್ತು 2.0' ಮತ್ತು ಹೊಸ ಪಂಚಾಯತ್ ರಾಜ್ ನಿಯಮಗಳು, ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವತ್ತ ಎತ್ತಿದ ದಿಟ್ಟ ಹೆಜ್ಜೆಯಾಗಿದೆ. ತಂತ್ರಜ್ಞಾನವನ್ನು ಆಡಳಿತದೊಂದಿಗೆ ಮೇಳೈಸುವ ಮೂಲಕ, ಸಾರ್ವಜನಿಕರ ಸಮಯವನ್ನು ಉಳಿಸುವುದು ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುವುದು ಈ ಯೋಜನೆಯ ಸಾಧನೆ. ಮುಂಬರುವ ದಿನಗಳಲ್ಲಿ ಇಂತಹ ಸುಧಾರಣೆಗಳು ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಮತ್ತಷ್ಟು ಬಲ ತುಂಬಲಿದ್ದು, ಗ್ರಾಮೀಣ ಕರ್ನಾಟಕವು ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ವೇಗವಾಗಿ ಮುನ್ನಡೆಯಲು ಸಹಕಾರಿಯಾಗಲಿದೆ. ಸಾರ್ವಜನಿಕರು ಈ ತಂತ್ರಾಂಶದ ಸದುಪಯೋಗ ಪಡೆದುಕೊಂಡು ತಮ್ಮ ಆಸ್ತಿ ದಾಖಲೆಗಳನ್ನು ಕಾನೂನುಬದ್ಧಗೊಳಿಸಿಕೊಳ್ಳಬೇಕಾದ್ದು ಇಂದಿನ ಅಗತ್ಯವಾಗಿದೆ.

Read More
Next Story