
ಏಕಕಾಲದ ಚುನಾವಣೆ: ದೇಶದ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದ ಜೆಪಿಸಿ ಸಮಿತಿ
ರಾಜ್ಯದ ರಾಜಕೀಯ ಮುಖಂಡರು ಮತ್ತು ಹಿತಾಸಕ್ತರೊಂದಿಗೆ ಜೆಪಿಸಿ ಸಮಾಲೋಚನೆ ನಡೆಸಿತು. ರಾಜ್ಯ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು, ‘ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರುವಂತೆ ಮನವಿ ಸಲ್ಲಿಸಿದೆ.
ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ‘ಒಂದು ದೇಶ, ಒಂದು ಚುನಾವಣೆ’ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಲೋಕಸಭಾ ಕಾರ್ಯಾಲಯದ ಜಂಟಿ ಸಂಸದೀಯ ಸಮಿತಿ ದೇಶಾದ್ಯಂತ ಸಂಚರಿಸಿ ರಾಜಕೀಯ ಪಕ್ಷಗಳು ಹಾಗೂ ವಿವಿಧ ವಲಯದ ತಜ್ಞರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ಇದೇ ಭಾಗವಾಗಿ ಬೆಂಗಳೂರಿನಲ್ಲಿ ಸಮಿತಿಯು ಸಭೆ ನಡೆಸಿ, ರಾಜ್ಯದ ರಾಜಕೀಯ ಮುಖಂಡರು ಮತ್ತು ಹಿತಾಸಕ್ತರೊಂದಿಗೆ ಸಮಾಲೋಚನೆ ನಡೆಸಿತು. ರಾಜ್ಯ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು, ‘ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರುವಂತೆ ಅಧಿಕೃತ ಮನವಿ ಸಲ್ಲಿಸಿದೆ. ಈ ಯೋಜನೆಯು ದೇಶದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದು ಹೇಳಿದೆ.
ಸಭೆಯ ನಂತರ ಮಾತನಾಡಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಪಿ.ಪಿ. ಚೌಧರಿ, ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಂದೇ ದಿನ ಅಥವಾ ಏಕಕಾಲದಲ್ಲಿ ನಡೆಸುವ ಪ್ರಕ್ರಿಯೆಯ ಕುರಿತು ಜನಾಭಿಪ್ರಾಯ ಮತ್ತು ಪಕ್ಷಗಳ ಅಭಿಪ್ರಾಯಗಳನ್ನು ಕ್ರೋಡೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯು ಆಕಸ್ಮಿಕವಾಗಿ ಬಂದಿದ್ದಲ್ಲ. 1967-68ರವರೆಗೂ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆಯುತ್ತಿದ್ದವು. ಆದರೆ, ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ಈ ವ್ಯವಸ್ಥೆ ಬದಲಾಯಿತು. ಇದೀಗ ಮತ್ತೆ ಹಳೆಯ ಪದ್ಧತಿಯನ್ನು ಸುಧಾರಿತ ರೂಪದಲ್ಲಿ ತರುವ ಪ್ರಯತ್ನ ನಡೆದಿದೆ. ‘ಒಂದು ದೇಶ, ಒಂದು ಚುನಾವಣೆ’ ಕೇವಲ ಇಂದಿನ ಅಗತ್ಯವಲ್ಲ, ಇದು ದಶಕಗಳ ಹಿಂದೆಯೇ ಚರ್ಚೆಗೆ ಬಂದಿದ್ದ ವಿಷಯ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲೂ ಇದರ ಬಗ್ಗೆ ಗಂಭೀರ ಚಿಂತನೆ ನಡೆದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ವಿಸ್ತೃತ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈಗ ಈ ವರದಿಯನ್ನು ಜಂಟಿ ಸಂಸದೀಯ ಸಮಿತಿಯು ಮತ್ತಷ್ಟು ಆಳವಾಗಿ ಪರಿಶೀಲಿಸುತ್ತಿದೆ. ನೀತಿ ಆಯೋಗ ಮತ್ತು ಭಾರತೀಯ ಚುನಾವಣಾ ಆಯೋಗವು ಈ ಯೋಜನೆಯನ್ನು ಬೆಂಬಲಿಸಿವೆ. ತಜ್ಞರಾದ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಸೇರಿದಂತೆ ಅನೇಕ ಆರ್ಥಿಕ ತಜ್ಞರು ಮತ್ತು ನಿವೃತ್ತ ನ್ಯಾಯಾಧೀಶರ ಅಭಿಪ್ರಾಯಗಳನ್ನು ಈಗಾಗಲೇ ಪಡೆಯಲಾಗಿದೆ ಎಂದು ಹೇಳಿದರು.
ಯೋಜನೆಯಿಂದಾಗುವ ಅನುಕೂಲಗಳು
ಸಮಿತಿಯು ಈ ಯೋಜನೆಯ ಜಾರಿಯಿಂದ ದೇಶಕ್ಕೆ ಸಿಗುವ ಲಾಭಗಳನ್ನು ಪಟ್ಟಿ ಮಾಡಿದೆ. ಪ್ರತ್ಯೇಕ ಚುನಾವಣೆಗಳನ್ನು ನಡೆಸುವುದು ದೇಶಕ್ಕೆ ಆರ್ಥಿಕ ಹೊರೆಯಾಗಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಸುಮಾರು 7 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣ ಉಳಿತಾಯವಾಗಲಿದೆ ಎಂಬ ಅಂದಾಜಿದೆ. ಪದೇ ಪದೇ ನಡೆಯುವ ಚುನಾವಣೆಗಳಿಂದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಏಕಕಾಲದ ಚುನಾವಣೆಯಿಂದ ಆಡಳಿತಾತ್ಮಕ ಕೆಲಸಗಳಿಗೆ ಅಡಚಣೆಯಾಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಮತಗಟ್ಟೆಗಳಾಗಿ ಬಳಸಲಾಗುತ್ತದೆ. ಇದರಿಂದ ಶಾಲಾ ಮಕ್ಕಳಿಗೆ ಪದೇ ಪದೇ ರಜೆ ನೀಡಬೇಕಾಗುತ್ತದೆ, ಇದು ಅವರ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತದೆ. ಏಕಕಾಲದ ಚುನಾವಣೆ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಪದೇ ಪದೇ ಚುನಾವಣೆ ಬಂದಾಗ ‘ನೀತಿ ಸಂಹಿತೆ’ ಜಾರಿಯಲ್ಲಿರುತ್ತದೆ. ಇದರಿಂದ ಸರ್ಕಾರಗಳು ಅಭಿವೃದ್ಧಿ ಕಾಮಗಾರಿಗಳನ್ನು ಘೋಷಿಸಲು ಅಥವಾ ಜಾರಿಗೊಳಿಸಲು ಅಡ್ಡಿಯಾಗುತ್ತದೆ. ಒಂದೇ ಚುನಾವಣೆ ನಡೆದರೆ, ಸರ್ಕಾರಗಳಿಗೆ ಐದು ವರ್ಷಗಳ ಕಾಲ ನಿರಂತರವಾಗಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಸಿಗುತ್ತದೆ.
ಜೆಪಿಸಿ ಸಮಿತಿಯು ಈಗ ಸಂಗ್ರಹಿಸಿದ ಮಾಹಿತಿಗಳು ಮತ್ತು ಅಭಿಪ್ರಾಯಗಳನ್ನು ಆಧರಿಸಿ ಅಂತಿಮ ವರದಿಯನ್ನು ಸಿದ್ಧಪಡಿಸಲಿದೆ. ದೇಶದ ಸಾಂವಿಧಾನಿಕ ತಿದ್ದುಪಡಿಗಳನ್ನು ಒಳಗೊಂಡಿರುವ ಈ ಪ್ರಕ್ರಿಯೆಯು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾದುದು. ಆದ್ದರಿಂದ ಎಲ್ಲಾ ರಾಜ್ಯಗಳ ಮತ್ತು ಪ್ರಮುಖ ರಾಜಕೀಯ ಪಕ್ಷಗಳ ಒಮ್ಮತಕ್ಕೆ ಸಮಿತಿ ಆದ್ಯತೆ ನೀಡುತ್ತಿದೆ.

