
ಮೃತ ಬಾಲಕರಾದ ಶಿವಂ ಪರಶುರಾಮ ಸುಂಡೀಕರ್ ಮತ್ತು ಪರಶುರಾಮ ರಾಜು ನೀಲಜಕರ್
ಬೆಳಗಾವಿಯಲ್ಲಿ ಘೋರ ದುರಂತ - ಕಪಿಲೇಶ್ವರ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು
ಬೆಳಗಾವಿಯ ಶಿವಾಜಿನಗರದ ನಿವಾಸಿ ಶಿವಂ ಪರಶುರಾಮ ಸುಂಡೀಕರ್ (7 ವರ್ಷ) ಮತ್ತು ಶಹಾಪುರದ ಜೇಡಗಲ್ಲಿಯ ನಿವಾಸಿ ಪರಶುರಾಮ ರಾಜು ನೀಲಜಕರ್ (11 ವರ್ಷ) ಮೃತ ದುರ್ದೈವಿಗಳು.
ಬೆಳಗಾವಿ ನಗರದ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಶಿವಾಜಿ ನಗರದ ನಿವಾಸಿ ಶಿವಂ ಪರಶುರಾಮ ಸುಂಡೀಕರ್ (7 ವರ್ಷ) ಮತ್ತು ಶಹಾಪುರದ ಜೇಡಗಲ್ಲಿಯ ನಿವಾಸಿ ಪರಶುರಾಮ ರಾಜು ನೀಲಜಕರ್ (11 ವರ್ಷ) ಮೃತ ದುರ್ದೈವಿಗಳು.
ಬೇಸಿಗೆಯ ಬಿಸಿಲಿನಿಂದ ಪಾರಾಗಲು ಬಾಲಕರು ಕಪಿಲೇಶ್ವರ ಹೊಂಡಕ್ಕೆ ಈಜಲು ತೆರಳಿದ್ದರು ಎನ್ನಲಾಗಿದೆ. ಹೊಂಡದ ಆಳ ಅರಿಯದೆ ಇಳಿದ ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡದವರು ತೀವ್ರ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಕುಟುಂಬಸ್ಥರ ಆಕ್ರಂದನ
ಬಾಲಕರ ಸಾವಿನ ಸುದ್ದಿ ಕೇಳಿ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಖಡೇಬಜಾರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸ್ವಾಮಿ ವಿವೇಕಾನಂದ, ಗಾಂಧೀಜಿ ಭೇಟಿ ನೀಡಿದ್ದ ದೇವಾಲಯ
ʼದಕ್ಷಿಣದ ಕಾಶಿ' ಎಂದು ಕರೆಯಲ್ಪಡುವ ಕಪಿಲೇಶ್ವರ ದೇವಸ್ಥಾನ ಬೆಳಗಾವಿ ನಗರದ ಪ್ರಮುಖ ಮತ್ತು ಪುರಾತನ ದೇವಸ್ಥಾನಗಳಲ್ಲಿ ಒಂದು. ಹರ ಮತ್ತು ಹರಿ ಮೂರ್ತಿ ಪರಸ್ಪರ ಮುಖಾಮುಖಿಯಾಗಿ ಸ್ಥಾಪನೆಗೊಂಡಿರುವ ಭಾರತದ ಏಕೈಕ ದೇವಸ್ಥಾನ ಎನ್ನುವ ಹೆಗ್ಗಳಿಕೆಯೂ ದೇವಸ್ಥಾನಕ್ಕಿದೆ.
ಕ್ರಿಶ 1,500ರಲ್ಲಿ ಇಂದಿನ ದೇವಸ್ಥಾನ ಪ್ರದೇಶದಲ್ಲಿ ಕಪಿಲ ಮುನಿಗಳು ತಪಸ್ಸುಗೈದು ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಅವರ ಶಕ್ತಿಯಿಂದಲೇ ಶಿವನ ಮೂರ್ತಿ ಉದ್ಭವಗೊಂಡ ಕಾರಣದಿಂದ ಶಿವನ ದೇವಸ್ಥಾನಕ್ಕೆ 'ಕಪಿಲೇಶ್ವರ' ಎಂದು ಕರೆಯಲಾಗುತ್ತದೆ. ಉತ್ತರದ ಕಾಶಿನಾಥ ದೇವಸ್ಥಾನದಷ್ಟೇ ಮಹತ್ವ ಹೊಂದಿರುವುದರಿಂದ 'ದಕ್ಷಿಣದ ಕಾಶಿ' ಎಂದು ಕರೆಯಲಾಗುತ್ತದೆ. ಶಂಕರಾಚಾರ್ಯರು ತಮ್ಮ ಶಿಷ್ಯಗಣದೊಂದಿಗೆ ಇಲ್ಲಿ ಪೂಜೆ ವಿಧಿ ವಿಧಾನ ನೆರವೇರಿಸಿದ್ದರು. ನಂತರದ ದಿನಗಳಲ್ಲಿ ಸ್ವಾಮಿ ವಿವೇಕಾನಂದರು, ಮಹಾತ್ಮಾ ಗಾಂಧೀಜಿ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.

