4500 ಕೋಟಿ ರೂ.ಅವ್ಯವಹಾರ ಆರೋಪ;  ಶಿವಂ ಅಸೋಸಿಯೇಟ್ಸ್‌ ಮಾಲೀಕ ಬಂಧನ, ಸಿಐಡಿ ಹೆಗಲಿಗೆ ತನಿಖೆ
x
ಶಿವಾನಂದ ನೀಲಣ್ಣವರ್

4500 ಕೋಟಿ ರೂ.ಅವ್ಯವಹಾರ ಆರೋಪ; ಶಿವಂ ಅಸೋಸಿಯೇಟ್ಸ್‌ ಮಾಲೀಕ ಬಂಧನ, ಸಿಐಡಿ ಹೆಗಲಿಗೆ ತನಿಖೆ

ಆರೋಪಿ ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ಪ್ರಮುಖ ನಾಲ್ಕು ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಒಂದೊಂದು ಖಾತೆಯಲ್ಲೂ ನೂರಾರು ಕೋಟಿ ರೂಪಾಯಿ ಪತ್ತೆಯಾಗಿದೆ.


ಸಾವಿರಾರು ಕೋಟಿ ರೂಪಾಯಿ ಒಡೆಯ ಎಂದು ಹೇಳಿಕೊಂಡು ಓಡಾಡುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ವಂಚನೆ ಆರೋಪದಡಿ ಬೆಳಗಾವಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. 4500 ಕೋಟಿ ರೂ. ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಮತ್ತು ಅಂತಾರಾಜ್ಯ ವ್ಯಾಪ್ತಿ ಪರಿಗಣಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿದ್ದಾರೆ.

ಅನುಮಾನ ಹುಟ್ಟಿಸಿದ ಬ್ಯಾಂಕ್ ಅಧಿಕಾರಿಗಳ ‘ಮೌನ’

ಆರೋಪಿ ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ಪ್ರಮುಖ ನಾಲ್ಕು ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಒಂದೊಂದು ಖಾತೆಯಲ್ಲೂ ನೂರಾರು ಕೋಟಿ ರೂಪಾಯಿ ಪತ್ತೆಯಾಗಿದೆ. ಈ ಖಾತೆಗಳಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ಹಣ ಜಮೆಯಾಗುತ್ತಿತ್ತು. ಇದೇ ಖಾತೆಗಳಿಂದ ತಿಂಗಳಿಗೆ ಸುಮಾರು 75 ಕೋಟಿಗೂ ಅಧಿಕ ಹಣವನ್ನು 35 ಸಾವಿರ ಜನರಿಗೆ ಬಡ್ಡಿ ರೂಪದಲ್ಲಿ ಜಮಾ ಮಾಡಲಾಗುತ್ತಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೂ ನಿಯಮಾವಳಿಗಳ ಪ್ರಕಾರ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೇರಿಗೆ (IT) ಇಲಾಖೆಗೆ ಮಾಹಿತಿ ನೀಡಬೇಕಿದ್ದ ಬ್ಯಾಂಕ್ ಅಧಿಕಾರಿಗಳು ಮಾತ್ರ ‘ಸೈಲೆಂಟ್’ ಆಗಿದ್ದರು. ಈಗ ಇದೇ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬೆಳಗಾವಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ

ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ತಂಡವು ಇಂದು ಬೆಳಗಾವಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿತು. ಸಿಐಡಿ ಡಿಐಜಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆ ಸುಮಾರು 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಿತು.

ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರು ಪ್ರಕರಣಕ್ಕೆ ಸಂಬಂಧಿಸಿದ ನಿನ್ನೆವರೆಗಿನ ತನಿಖಾ ವರದಿ ಸೇರಿದಂತೆ ಎಲ್ಲಾ ಮಹತ್ವದ ದಾಖಲೆಗಳನ್ನು ಅಧಿಕೃತವಾಗಿ ಸಿಐಡಿ ತಂಡಕ್ಕೆ ಹಸ್ತಾಂತರಿಸಿದರು. ಮಾಹಿತಿ ಸಂಗ್ರಹಿಸಿದ ಬಳಿಕ ಸಿಐಡಿ ಹಿರಿಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಮರಳಿದೆ.

ಅಂತರರಾಜ್ಯ ಪ್ರಕರಣ

ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರು ಮಾಧ್ಯಮದವರೊಂದಿಗೆ ಮಾತನಾಡಿ, "ಶಿವಂ ಅಸೋಸಿಯೇಟ್ ಮಾಲೀಕ ಶಿವಾನಂದ ನೀಲಣ್ಣವರ್ನನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲೇ ಇದು 50 ಕೋಟಿ ರೂಪಾಯಿಗೂ ಹೆಚ್ಚಿನ ಅವ್ಯವಹಾರ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ, ಇದರ ವ್ಯಾಪ್ತಿ ಅಂತಾರಾಜ್ಯ ಮಟ್ಟಕ್ಕೆ ಹರಡಿಕೊಂಡಿದೆ. ಹೀಗಾಗಿ ಡಿಜಿ-ಐಜಿಪಿಯವರು ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ. ಸಿಐಡಿ ಡಿಐಜಿ ಅವರು ಸ್ಥಳಕ್ಕೆ ಬಂದು ಎಲ್ಲಾ ಅಗತ್ಯ ದಾಖಲೆ ಹಾಗೂ ಸ್ಥಳೀಯ ಅಧಿಕಾರಿಗಳು ಕಲೆಹಾಕಿದ್ದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಅವರು ತನಿಖೆ ಮುಂದುವರಿಸಲಿದ್ದಾರೆ." ಎಂದು ಹೇಳಿದ್ದಾರೆ.

Read More
Next Story