ರಾಜಸ್ಥಾನದಲ್ಲಿ 611 ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡವೇ ಇಲ್ಲ: ಸಿಜೆಪಿ ಅಭಿಯಾನದ ಬೆನ್ನಲ್ಲೇ ಒಪ್ಪಿಕೊಂಡ ಬಿಜೆಪಿ ಸರ್ಕಾರ
x

ರಾಜಸ್ಥಾನದಲ್ಲಿ 611 ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡವೇ ಇಲ್ಲ: ಸಿಜೆಪಿ ಅಭಿಯಾನದ ಬೆನ್ನಲ್ಲೇ ಒಪ್ಪಿಕೊಂಡ ಬಿಜೆಪಿ ಸರ್ಕಾರ

ಕೆಲ ದಿನಗಳ ಹಿಂದೆ ಕಾಕ್ರೋಚ್‌ ಜನತಾ ಪಾರ್ಟಿಯ (CJP) ಸಹ-ಸಂಚಾಲಕ ಅಶುತೋಷ್ ರಾಂಕಾ ನೇತೃತ್ವದ ತಂಡ ಜೈಪುರದ ಬಳಿಯ ಬಾಗ್ರು ಶಾಲೆಯೊಂದಕ್ಕೆ ಪರಿಶೀಲನೆಗೆ ತೆರಳಿತ್ತು.


ರಾಜಸ್ಥಾನದಲ್ಲಿ ಬರೋಬ್ಬರಿ 611 ಸರ್ಕಾರಿ ಶಾಲೆಗಳು ಸ್ವಂತ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂಬ ಆತಂಕಕಾರಿ ಮಾಹಿತಿ ಶುಕ್ರವಾರ ವಿಧಾನಸಭೆಯಲ್ಲಿ ಬಹಿರಂಗವಾಗಿದೆ. ಈ ಪೈಕಿ 10 ಶಾಲೆಗಳು ಬಾಲಕಿಯರ ಶಾಲೆಗಳಾಗಿವೆ. ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ಮೂಲಸೌಕರ್ಯದ ಕೊರತೆಯನ್ನು ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದು, ಹಿಂದಿನ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯ ಲೋಪಗಳೇ ಇದಕ್ಕೆ ಕಾರಣ ಎಂದು ಆರೋಪಿಸಿದೆ. ಝಾಲಾವರ್ ಶಾಲಾ ಅಪಘಾತದ ಬಳಿಕ ನಡೆಸಿದ ಆಡಿಟ್‌ನಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ ಬೆಳಕಿಗೆ ಬಂದಿದ್ದು, ಹಿಂದಿನ ಸರ್ಕಾರದ ‘ಲೋಪ’ವನ್ನು ಸರಿಪಡಿಸಲು ಈಗಿನ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಹೇಳಿದೆ.

ವಿಪಕ್ಷ ನಾಯಕ ಟೀಕಾ ರಾಮ್ ಜುಲ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಸಮಗ್ರ ಶಿಕ್ಷಣ ಅಭಿಯಾನದ 2025-26ರ UDISE ದತ್ತಾಂಶವನ್ನು ಉಲ್ಲೇಖಿಸಿ ಈ ಮಾಹಿತಿ ನೀಡಿದೆ. ಕಟ್ಟಡ ರಹಿತ ಶಾಲೆಗಳಲ್ಲಿ 10 ಹೆಣ್ಣುಮಕ್ಕಳ ಶಾಲೆಗಳೂ ಸೇರಿವೆ.

ಇತ್ತೀಚೆಗೆ ಜಾಲಾವಾಡ್ ಶಾಲಾ ಅಪಘಾತದ ನಂತರ ನಡೆಸಲಾದ ಆಡಿಟ್ ವರದಿಯನ್ನು ಉಲ್ಲೇಖಿಸಿದ ಬಿಜೆಪಿ, "ಇದು ಹಿಂದಿನ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೇಸ್ ಸರ್ಕಾರದ ಪಾಪ. ಅವರ ಆಡಳಿತಾವಧಿಯ ವೈಫಲ್ಯಗಳನ್ನು ಪ್ರಸ್ತುತ ಸರ್ಕಾರ ಸರಿಪಡಿಸಲು ಯತ್ನಿಸುತ್ತಿದೆ" ಎಂದು ಕಿಡಿಕಾರಿದೆ.

ದನದ ಕೊಟ್ಟಿಗೆಯಿಂದ ನಡೆಯುತ್ತಿದೆ ಶಾಲೆ

ಕೆಲ ದಿನಗಳ ಹಿಂದೆ ಕಾಕ್ರೋಚ್‌ ಜನತಾ ಪಾರ್ಟಿಯ (CJP) ಸಹ-ಸಂಚಾಲಕ ಅಶುತೋಷ್ ರಾಂಕಾ ನೇತೃತ್ವದ ತಂಡ ಜೈಪುರದ ಬಳಿಯ ಬಾಗ್ರು ಶಾಲೆಯೊಂದಕ್ಕೆ ಪರಿಶೀಲನೆಗೆ ತೆರಳಿತ್ತು. ಈ ಶಾಲೆಯು ಸ್ವಂತ ಕಟ್ಟಡವಿಲ್ಲದೆ ಕೊಟ್ಟಿಗೆಯಿಂದ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತಂಡ ಪರಿಶೀಲನೆಗೆ ತೆರಳಿತ್ತು. ಶಾಲೆಯ ಹಳೆಯ ಕಟ್ಟಡವು ಅಪಾಯಕಾರಿ ಎಂದು ಘೋಷಣೆಯಾದ ನಂತರ ವಿದ್ಯಾರ್ಥಿಗಳನ್ನು ತಾತ್ಕಾಲಿಕ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.

ಜಿಲ್ಲಾವಾರು ಮಾಹಿತಿ:

ಜೈಪುರದಲ್ಲಿ 38, ಜಾಲಾವಾಡ್‌ನಲ್ಲಿ ಆಕ್ಲೆರಾ ಬ್ಲಾಕ್‌ನಲ್ಲಿ ಅತಿ ಹೆಚ್ಚು ಅಂದರೆ 23, ಖಾನ್‌ಪುರದಲ್ಲಿ 16 ಹಾಗೂ ಝಲ್ರಾಪಟನ್‌ನಲ್ಲಿ 11 ಶಾಲೆಗಳು ಕಟ್ಟಡ ರಹಿತವಾಗಿವೆ. ಫಲೋಡಿ (ಬಾಪ್)ನಲ್ಲಿ 11 ಶಾಲೆಗಳು, ಬಾನ್ಸ್‌ವಾರ (ಚೋಟಿಸರ್ವನ್)ನಲ್ಲಿ 10 ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ.

ಶೌಚಾಲಯ, ಕುಡಿಯುವ ನೀರಿನ ಅಭಾವ

ಸ್ವಂತ ಕಟ್ಟಡ ಹೊಂದಿರುವ 64,484 ಸರ್ಕಾರಿ ಶಾಲೆಗಳ ಪೈಕಿ 2,047 ಶಾಲೆಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ. 1,049 ಶಾಲೆಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ದೌಸಾ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 96 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ.

ಸರ್ಕಾರದ ಕಡೆಯಿಂದ ಅನುದಾನ ಘೋಷಣೆ

ಶಾಲಾ ಕಟ್ಟಡಗಳ ದುರಸ್ತಿಗೆ 550 ಕೋಟಿ ರೂ. ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ 450 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ, ವಿವಿಧ ಮೂಲಗಳಿಂದ ಶಾಲಾ ಮೂಲಸೌಕರ್ಯಕ್ಕಾಗಿ ವರ್ಷಕ್ಕೆ ₹2,500 ಕೋಟಿ ಅಂದರೆ 5 ವರ್ಷಗಳಲ್ಲಿ ಒಟ್ಟು 12,500 ಕೋಟಿ ರೂ. ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಸರ್ಕಾರದ ಸಿದ್ಧತೆಯನ್ನು ಪ್ರಶ್ನಿಸಿದ ವಿಪಕ್ಷ

ಸರ್ಕಾರದ ಸಮಜಾಯಿಷಿಯನ್ನು ತಳ್ಳಿಹಾಕಿದ ವಿಪಕ್ಷ ನಾಯಕ ಟೀಕಾ ರಾಮ್ ಜುಲ್ಲಿ, ಆಡಿಟ್ ವರದಿಯನ್ನೇ ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ 3,768 ಸರ್ಕಾರಿ ಶಾಲಾ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದ್ದು, ಬಳಕೆಗೆ ಸುರಕ್ಷಿತವಾಗಿಲ್ಲ. 83,783 ಶಾಲಾ ಕೊಠಡಿಗಳು ಅಪಾಯಕಾರಿ ಸ್ಥಿತಿಯಲ್ಲಿವೆ.

"ಸರ್ಕಾರದ ಬಳಿ ಯಾವುದೇ ಸ್ಪಷ್ಟ ಯೋಜನೆಯಿಲ್ಲ. ಶಾಲೆಗಳ ದುಸ್ಥಿತಿಯಿಂದಾಗಿ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ. ಹೈಕೋರ್ಟ್ ಸಹ ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ" ಎಂದು ಜುಲ್ಲಿ ಕಿಡಿಕಾರಿದ್ದಾರೆ. ಮತ್ತೊಂದೆಡೆ, ಶಾಲೆಗಳಿಗೆ ಕಟ್ಟಡ, ಶೌಚಾಲಯ ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯ ಒದಗಿಸುವುದು ತಮ್ಮ ಮೊದಲ ಆದ್ಯತೆ ಎಂದು ಸರ್ಕಾರ ಪ್ರತಿಪಾದಿಸಿದೆ.

Read More
Next Story