ಕಲ್ಯಾಣ ಕರ್ನಾಟಕ ಆರ್ಥಿಕತೆಗೆ ಕೃಷಿಕಲ್ಪ: ನವೋದ್ಯಮಗಳಿಗೆ ಒಂದು ಸಾವಿರ ಕೋಟಿ ರೂ. ಅನುದಾನ
x

ಕಲ್ಯಾಣ ಕರ್ನಾಟಕ ಆರ್ಥಿಕತೆಗೆ ಕೃಷಿಕಲ್ಪ: ನವೋದ್ಯಮಗಳಿಗೆ ಒಂದು ಸಾವಿರ ಕೋಟಿ ರೂ. ಅನುದಾನ

ರಾಜ್ಯದಲ್ಲಿ ಸುಮಾರು 18 ಸಾವಿರ ಸ್ಟಾರ್ಟ್-ಅಪ್‌ಗಳು ನೋಂದಾಯಿಸಿಕೊಂಡಿವೆ. ಇವುಗಳಿಗೆ ಕೇವಲ ಕಲ್ಪನೆಗಳಷ್ಟೇ ಸಾಲದು, ಸರಿಯಾದ ಮಾರ್ಗದರ್ಶನ, ಪ್ರಾಯೋಗಿಕ ಪರೀಕ್ಷೆ ಮತ್ತು ಆರ್ಥಿಕ ನೆರವು ಅತ್ಯಗತ್ಯ.


Click the Play button to hear this message in audio format

ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯಿಂದ ಹೊರಬರುತ್ತಿದೆ. ಐಟಿ-ಬಿಟಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಹೊಸ ಆಯಾಮವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ‘ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್’ ಕಾರ್ಯಕ್ರಮವು ಯುವ ಉದ್ಯಮಿಗಳಿಗೆ ಒಂದು ವರದಾನವಾಗಿ ಪರಿಣಮಿಸಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಟಿಯ ಯೋಜನೆಗಳು ಈ ಭಾಗದ ಆರ್ಥಿಕ ಚಿತ್ರಣವನ್ನೇ ಬದಲಿಸುವ ನಿರೀಕ್ಷೆಯಲ್ಲಿದೆ.

ರಾಜ್ಯದ ಅಭಿವೃದ್ಧಿಯು ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ‘ಬಿಯಾಂಡ್ ಬೆಂಗಳೂರು’ ಎಂಬ ಮಹತ್ವದ ಕಾರ್ಯಕ್ರಮವನ್ನು ರೂಪಿಸಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಂತಹ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾ ವಾತಾವರಣವನ್ನು ನಿರ್ಮಿಸುವುದು ಇದರ ಮೂಲ ಉದ್ದೇಶವಾಗಿದೆ.

ರಾಜ್ಯದಲ್ಲಿ ಸುಮಾರು 18 ಸಾವಿರ ಸ್ಟಾರ್ಟ್-ಅಪ್‌ಗಳು ನೋಂದಾಯಿಸಿಕೊಂಡಿವೆ. ಇವುಗಳಿಗೆ ಕೇವಲ ಕಲ್ಪನೆಗಳಷ್ಟೇ ಸಾಲದು, ಸರಿಯಾದ ಮಾರ್ಗದರ್ಶನ, ಪ್ರಾಯೋಗಿಕ ಪರೀಕ್ಷೆ ಮತ್ತು ಆರ್ಥಿಕ ನೆರವು ಅತ್ಯಗತ್ಯ. ಇದಕ್ಕಾಗಿ ರಾಜ್ಯ ಸರ್ಕಾರವು 1,500 ಸ್ಟಾರ್ಟ್-ಅಪ್‌ಗಳಿಗೆ ತಲಾ 50 ಲಕ್ಷ ರೂ. ಅನುದಾನ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ನವೋದ್ಯಮಗಳ ಅಬ್ಬರ

ಕಲಬುರಗಿಯಲ್ಲಿ ಸ್ಥಾಪಿಸಲಾಗಿರುವ ಅಗ್ರಿಕಲ್ಚರ್ ಸೆಂಟರ್ ಆಫ್ ಎಕ್ಸಲೆನ್ಸ್ ದೇಶದಲ್ಲೇ ಇಂತಹದ್ದೊಂದು ಮಾದರಿಯ ಮೊದಲ ಪ್ರಯತ್ನವಾಗಿದೆ. ಕೃಷಿ ವಲಯವು ಸಾಂಪ್ರದಾಯಿಕ ಪದ್ಧತಿಯಿಂದ ಆಧುನಿಕ ತಂತ್ರಜ್ಞಾನದತ್ತ ಪರಿವರ್ತನೆ ಹೊಂದಲು ಇದು ದಾರಿದೀಪವಾಗಲಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಕಲಬುರಗಿಯ ‘ರೊಟ್ಟಿ ಬ್ರಾಂಡ್’ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಿದ್ದಿಯಾಗಿದೆ. ಅಮೆರಿಕಾ, ಕೆನಡಾದಂತಹ ದೇಶಗಳಿಗೆ ರಫ್ತಾಗುತ್ತಿರುವ ಈ ರೊಟ್ಟಿಗಳು, ಪುಣೆ ಮೂಲದ ಕಂಪನಿಯೊಂದರೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಮಹಿಳಾ ಸಂಘಗಳ ಸಬಲೀಕರಣಕ್ಕೆ ಸಾಕ್ಷಿಯಾಗಿದೆ. ಇದು ಸ್ಥಳೀಯ ಉತ್ಪಾದನೆ - ಜಾಗತಿಕ ಮಾರುಕಟ್ಟೆ ಎಂಬ ತತ್ವಕ್ಕೆ ಉತ್ತಮ ಉದಾಹರಣೆಯಾಗಿದೆ.

ಅನುದಾನ - ಮಾನವ ಸಂಪನ್ಮೂಲದ ಬೆಂಬಲ

ರಾಜ್ಯ ಸರ್ಕಾರವು ಎರಡನೇ ಮತ್ತು ಮೂರನೇ ಹಂತದ ನಗರಗಳ ಸ್ಟಾರ್ಟ್-ಅಪ್‌ಗಳಿಗಾಗಿ ಬರೋಬ್ಬರಿ 1 ಸಾವಿರ ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಒಟ್ಟು 1,480ಕ್ಕೂ ಹೆಚ್ಚು ಸ್ಟಾರ್ಟ್-ಅಪ್‌ಗಳಿಗೆ ಈ ಹಣಕಾಸಿನ ನೆರವು ದೊಡ್ಡ ಬಲ ತುಂಬಲಿದೆ. ಐಐಐಟಿ ರಾಯಚೂರು ತಾಂತ್ರಿಕ ಶಿಕ್ಷಣದ ಕೇಂದ್ರವಾಗಿ ಬೆಳೆಯುತ್ತಿದ್ದು, ಅಲ್ಲಿನ ಮಾನವ ಸಂಪನ್ಮೂಲವನ್ನು ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಕೆಕೆಆರ್‌ಡಿಬಿ ಮೂಲಕ ಅನುದಾನ ಒದಗಿಸುವ ಚಿಂತನೆ ಸಚಿವರಲ್ಲಿದೆ. ಇದು ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ.

ಚಿತ್ತಾಪುರದಲ್ಲಿ ಯೋಜಿಸಲಾಗಿದ್ದ ನ್ಯಾಷನಲ್ ಇನ್ವೆಸ್ಟ್ ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಜೋನ್ ಸ್ಥಾಪನೆಯು ಕಲ್ಯಾಣ ಕರ್ನಾಟಕದ ಕೈಗಾರಿಕಾ ಕನಸಾಗಿತ್ತು. ರಾಜಕೀಯ ಅನಿವಾರ್ಯತೆಗಳಿಂದ ಆ ಯೋಜನೆ ಕುಂಠಿತವಾಗಿದ್ದರೂ, ಸರ್ಕಾರ ಈಗ ಮತ್ತೆ ಅಂತಹ ಬೃಹತ್ ಹೂಡಿಕೆಗಳತ್ತ ಗಮನ ಹರಿಸುತ್ತಿದೆ. ಗೋವಿಂದ ರಾವ್ ವರದಿಯ ಶಿಫಾರಸುಗಳ ಆಧಾರದ ಮೇಲೆ ಮುಂದಿನ ಹತ್ತು ವರ್ಷಗಳ ಅಭಿವೃದ್ಧಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ.

ಈ ಕಾರ್ಯಕ್ರಮಗಳು ಕೇವಲ ಸರ್ಕಾರಿ ಘೋಷಣೆಗಳಾಗಿ ಉಳಿಯಬಾರದು. ಕಲ್ಯಾಣ ಕರ್ನಾಟಕದ ಯುವಕರಲ್ಲಿನ ಕೌಶಲ್ಯವನ್ನು ಈ ಸ್ಟಾರ್ಟ್-ಅಪ್‌ಗಳಿಗೆ ಪೂರಕವಾಗಿ ಬದಲಿಸಬೇಕಿದೆ. ಕೇವಲ ಅನುದಾನ ಕೊಟ್ಟರೆ ಸಾಲದು, ವಿದ್ಯುತ್, ಸಂಪರ್ಕ ಸಾಧನಗಳು ಮತ್ತು ಉತ್ತಮ ರಸ್ತೆಗಳ ಜಾಲವನ್ನು ಬಲಪಡಿಸುವುದು ಅನಿವಾರ್ಯ. ಸಣ್ಣ ಸ್ಟಾರ್ಟ್-ಅಪ್‌ಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದೊಡ್ಡ ಮಟ್ಟದ ನೆಟ್‌ವರ್ಕಿಂಗ್ ವೇದಿಕೆಗಳ ಅಗತ್ಯವಿದೆ. ರಾಜಕೀಯ ಬದಲಾವಣೆಗಳ ಹೊರತಾಗಿಯೂ ಇಂತಹ ತಾಂತ್ರಿಕ ಹಾಗೂ ಕೃಷಿ ಆಧಾರಿತ ಯೋಜನೆಗಳು ಮುಂದುವರಿಯಬೇಕು ಎಂದು ಹೇಳಿದರು.


Read More
Next Story