Lokayukta Raid | ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ; ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ!
x
ಬಾಗಲಕೋಟೆಯಲ್ಲಿ ಲೋಕಾಯುಕ್ತ ರೇಡ್‌

Lokayukta Raid | ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ; ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ!

ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯ ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ 1.70 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


"ಬೇಲಿಯೇ ಎದ್ದು ಹೊಲ ಮೇಯ್ದಂತೆ" ರಕ್ಷಣೆ ನೀಡಬೇಕಾದ ಪೊಲೀಸರೇ ಲಂಚದ ಆಸೆಗೆ ಬಿದ್ದು ಲೋಕಾಯುಕ್ತರ ಅತಿಥಿಗಳಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಲಂಚ ಸ್ವೀಕರಿಸುವಾಗ ಕೆರೂರು ಪಿಎಸ್‌ಐ ಮತ್ತು ಕಾನ್‌ಸ್ಟೇಬಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಘಟನೆಯ ವಿವರ

ಕೆರೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಪೆಟ್ರೋಲ್ ಬಂಕ್ ಒಂದರಲ್ಲಿ ಇಸ್ಪೀಟ್ (ಗ್ಯಾಂಬಲಿಂಗ್) ಆಡುತ್ತಿದ್ದವರನ್ನು ಬಂಧಿಸಿದ್ದ ಈ ಅಧಿಕಾರಿಗಳು, ಅವರ ಮೇಲೆ ಕೇಸ್ ದಾಖಲಿಸದಿರಲು ಮತ್ತು ಜಪ್ತಿ ಮಾಡಿದ್ದ ಬೈಕ್ ಬಿಡುಗಡೆ ಮಾಡಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

1.70 ಲಕ್ಷ ಲಂಚಕ್ಕೆ ಬೇಡಿಕೆ

ಬಂಧಿತರಿಂದ ಒಟ್ಟು 1.70 ಲಕ್ಷ ರೂಪಾಯಿ ಲಂಚ ನೀಡುವಂತೆ ಪಿಎಸ್‌ಐ ಭೀಮಪ್ಪ ಒತ್ತಾಯಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತ ಮುತ್ತಪ್ಪ ನಾಯ್ಕರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಮಹಾನಿಂಗ್ ನಂದಗಾಂವಿ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ, ಇಬ್ಬರನ್ನೂ ವಶಕ್ಕೆ ಪಡೆದಿದೆ.

ಪಟಾಕಿ ಸಿಡಿಸಿ ಸಂಭ್ರಮಿಸಿದ ಸಾರ್ವಜನಿಕರು!

ಸಾಮಾನ್ಯವಾಗಿ ಅಧಿಕಾರಿಗಳು ಸಿಕ್ಕಿಬಿದ್ದಾಗ ಜನ ಅಯ್ಯೋ ಎನ್ನುತ್ತಾರೆ. ಆದರೆ ಕೆರೂರಿನಲ್ಲಿ ದೃಶ್ಯವೇ ಬೇರೆಯಾಗಿತ್ತು. ಪಿಎಸ್‌ಐ ಭೀಮಪ್ಪ ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆಯೇ ಕೆರೂರು ಪಟ್ಟಣದ ಯುವಕರ ಗುಂಪು ಪೊಲೀಸ್ ಠಾಣೆಯ ಮುಂದೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದೆ.

ಜನರ ಆಕ್ರೋಶಕ್ಕೆ ಕಾರಣ

ಪಿಎಸ್‌ಐ ಭೀಮಪ್ಪ ಅವರ ಭ್ರಷ್ಟಾಚಾರ ಮತ್ತು ಸಾರ್ವಜನಿಕರ ಮೇಲಿನ ದುರ್ವರ್ತನೆಯಿಂದ ಪಟ್ಟಣದ ಜನರು ತೀವ್ರ ಬೇಸತ್ತಿದ್ದರು. ಈ ಹಿಂದೆ ಕೂಡ ಅವರ ವಿರುದ್ಧ ಹಲವು ದೂರುಗಳು ಕೇಳಿಬಂದಿದ್ದವು. ಒಬ್ಬ ಭ್ರಷ್ಟ ಅಧಿಕಾರಿ ಸಿಕ್ಕಿಬಿದ್ದಿದ್ದಕ್ಕೆ ಜನರು ಈ ರೀತಿ ಬೀದಿಗಿಳಿದು ಸಂಭ್ರಮ ಆಚರಿಸಿದ್ದು, ಸಾರ್ವಜನಿಕ ವಲಯದಲ್ಲಿ ಅಧಿಕಾರಿಯ ಮೇಲಿದ್ದ ಅಸಮಾಧಾನ ಎಷ್ಟಿತ್ತು ಎಂಬುದನ್ನು ತೋರಿಸಿಕೊಟ್ಟಿದೆ.

ಪ್ರಸ್ತುತ ಲೋಕಾಯುಕ್ತ ಪೊಲೀಸರು ಭೀಮಪ್ಪ ರಬಕವಿ ಮತ್ತು ಸಂತೋಷ್ ಬಿರಾದಾರ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Read More
Next Story