ಕಲಬುರ್ಗಿ ಕಾಡು ಇನ್ನು ರಕ್ಷಿತಾರಣ್ಯ! ಮೀಸಲು ಅರಣ್ಯವಾಗಿ ವನ್ಯಜೀವಿ ಮಂಡಳಿ ಸಭೆ ನಿರ್ಧಾರ
x
ಕಲಬುರ್ಗಿಯ ಅಲ್ಲೂರು ರಕ್ಷಿತಾರಣ್ಯ

ಕಲಬುರ್ಗಿ ಕಾಡು ಇನ್ನು ರಕ್ಷಿತಾರಣ್ಯ! ಮೀಸಲು ಅರಣ್ಯವಾಗಿ ವನ್ಯಜೀವಿ ಮಂಡಳಿ ಸಭೆ ನಿರ್ಧಾರ

ಈ ಅರಣ್ಯ ಪ್ರದೇಶ ಚಿರತೆ, ಕಾಡುಹಂದಿ, ಜಿಂಕೆ, ಕಾಡುಕುರಿ, ಕಾಡುಬೆಕ್ಕು, ಚಿಪ್ಪುಹಂದಿ, ನರಿ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವಾಗಿದೆ.


Click the Play button to hear this message in audio format

ಕಲಬುರಗಿ ಜಿಲ್ಲೆಯ 2877 ಎಕರೆ ಅರಣ್ಯವನ್ನು ʼಸಂರಕ್ಷಿತ ಮೀಸಲುʼ (Reserve Forest) ಎಂದು ಘೋಷಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಚಿತ್ತಾಪೂರ ತಾಲೂಕಿನ ಅಲ್ಲೂರು (ಬಿ) ಗ್ರಾಮದ ಈ ಅರಣ್ಯವನ್ನು ಮೀಸಲು ಅರಣ್ಯ ಎಂದು ಘೋಷಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿ 6ನೇ ಸಭೆಯಲ್ಲಿಂದು ನಿರ್ಧರಿಸಲಾಗಿದೆ.

ಬೆಟ್ಟ ಗುಡ್ಡಗಳಿಂದ ಕೂಡಿದ, ಹಚ್ಚಹಸಿರಿನ ರಮಣೀಯವಾದ ಈ ಅರಣ್ಯ ಪ್ರದೇಶ ಚಿರತೆ, ಕಾಡುಹಂದಿ, ಜಿಂಕೆ, ಕಾಡುಕುರಿ, ಕಾಡುಬೆಕ್ಕು, ಚಿಪ್ಪುಹಂದಿ, ನರಿ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು, ಈ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ಯೋಗ್ಯವಾಗಿದೆ ಎಂದು ಸಭೆ ತೀರ್ಮಾನಿಸಿದೆ.

ಇದಕ್ಕೂ ಮುನ್ನ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಕಲಂ 36 ಎ ರೀತ್ಯ ಸ್ಥಳೀಯ ಗ್ರಾಮಪಂಚಾಯ್ತಿಯ ವಿಶೇಷ ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಿ, ಸಂರಕ್ಷಿತ ಮೀಸಲು ಎಂದು ಘೋಷಿಸಲು ಸಮ್ಮತಿ ಪಡೆಯಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಅಲ್ಲೂರು ಅರಣ್ಯ

ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕಿನ ಅಲ್ಲೂರು (ಬಿ) ಗ್ರಾಮವು ಕೇವಲ ಕಲ್ಲಿನ ಗಣಿಗಳಿಗೆ ಸೀಮಿತವಾಗದೆ, ತನ್ನ ಒಡಲಲ್ಲಿ ವಿಶಿಷ್ಟವಾದ ಅರಣ್ಯ ಸಂಪತ್ತನ್ನು ಹೊಂದಿದೆ. ಈ ಭಾಗದ ಅರಣ್ಯವು ಪ್ರಮುಖವಾಗಿ ಒಣ ಹವೆಗೆ ಒಗ್ಗಿಕೊಂಡಿರುವ ಕುರುಚಲು ಕಾಡುಗಳಿಂದ ಕೂಡಿದ್ದು, ಬಯಲು ಸೀಮೆಯ ಸುಡುವ ಬಿಸಿಲಿಗೆ ಹಸಿರು ಹೊದಿಕೆಯಂತೆ ಕಾರ್ಯನಿರ್ವಹಿಸುತ್ತಿದೆ.

ಇದು ನೈಸರ್ಗಿಕವಾಗಿ ಬೆಳೆದ ಸಸ್ಯವರ್ಗದಿಂದ ಸಮೃದ್ಧವಾಗಿದೆ. ಇಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ವಿವಿಧ ರೀತಿಯ ಔಷಧೀಯ ಸಸ್ಯಗಳು ಲಭ್ಯವಿದ್ದು, ಸ್ಥಳೀಯ ನಾಟಿ ವೈದ್ಯಕೀಯ ಪದ್ಧತಿಗೆ ಇವು ಆಧಾರವಾಗಿವೆ. ಪ್ರಾಣಿ ಸಂಕುಲದ ದೃಷ್ಟಿಯಿಂದ ನೋಡುವುದಾದರೆ, ಈ ಅರಣ್ಯವು ನರಿ, ಕಾಡುಹಂದಿ, ವಿವಿಧ ಜಾತಿಯ ಹಾವುಗಳು ಮತ್ತು ಅಪರೂಪದ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ. ಈ ಭಾಗದಲ್ಲಿ ಕೃಷ್ಣಮೃಗಗಳ ಸಂಚಾರವೂ ಅಲ್ಪಮಟ್ಟಿಗೆ ಕಂಡುಬರುವುದು ಇಲ್ಲಿನ ಪರಿಸರ ವ್ಯವಸ್ಥೆಯ ವಿಶೇಷತೆಯಾಗಿದೆ.

ಈ ಅರಣ್ಯವು ಕೇವಲ ಮರಗಿಡಗಳ ಸಮೂಹವಲ್ಲ, ಬದಲಾಗಿ ಅಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಜೀವನೋಪಾಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಮಳೆಗಾಲದಲ್ಲಿ ಈ ಕಾಡು ಅಂತರ್ಜಲ ಮರುಪೂರಣಕ್ಕೆ ನೆರವಾಗುವುದರಿಂದ ಹತ್ತಿರದ ಕೃಷಿ ಭೂಮಿಗಳಿಗೆ ತೇವಾಂಶ ಲಭ್ಯವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪರಿಸರ ಪ್ರೇಮಿಗಳು ಮತ್ತು ಚಾರಣಿಗರು ಈ ಬೆಟ್ಟದ ಸಾಲುಗಳತ್ತ ಆಕರ್ಷಿತರಾಗುತ್ತಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಪ್ರದೇಶವು ಮುನ್ನೆಲೆಗೆ ಬರುತ್ತಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯವು ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಮಲೆನಾಡಿನ ಚಹರೆಯನ್ನು ನೆನಪಿಸುತ್ತದೆ.

ಕಲ್ಲುಗಣಿಗಾರಿಕೆಯಿಂದ ಅಪಾಯ

ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲೂರು (ಬಿ) ಅರಣ್ಯವು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಚಿತಾಪುರ ತಾಲೂಕಿನಾದ್ಯಂತ ನಡೆಯುತ್ತಿರುವ ವ್ಯಾಪಕ ಸಿಮೆಂಟ್ ಕೈಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯ ಪ್ರಭಾವವು ಈ ಅರಣ್ಯದ ಮೇಲೂ ಆಗುತ್ತಿದೆ. ಧೂಳಿನ ಸಮಸ್ಯೆ ಮತ್ತು ಮಿತಿಮೀರಿದ ಗಣಿಗಾರಿಕೆಯಿಂದಾಗಿ ಇಲ್ಲಿನ ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಇದರೊಂದಿಗೆ, ಕೃಷಿ ಭೂಮಿಯ ವಿಸ್ತರಣೆಗಾಗಿ ನಡೆಯುತ್ತಿರುವ ಅರಣ್ಯ ಭೂಮಿಯ ಅತಿಕ್ರಮಣವು ಕಾಡಿನ ವಿಸ್ತೀರ್ಣವನ್ನು ಕುಗ್ಗಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಾಗಾಗಿ ಇದನ್ನು ಮೀಸಲು ಸಂರಕ್ಷಿತ ಅರಣ್ಯ ಎಂದು ಘೊಷಿಸಿರುವುದು ಪರಿಸರಪ್ರಿಯರ ಖುಷಿಗೆ ಕಾರಣವಾಗಿದೆ.

Read More
Next Story