ಸಮುದ್ರ ದಾಟಿದ ಉತ್ತರ ಕರ್ನಾಟಕದ ರೊಟ್ಟಿ: ಅಮೆರಿಕ, ಕೆನಡಾ, ಆಸ್ಟ್ರೇಲಿಯಾಕ್ಕೆ ಲಗ್ಗೆ..!
x

ಸಮುದ್ರ ದಾಟಿದ ಉತ್ತರ ಕರ್ನಾಟಕದ ರೊಟ್ಟಿ: ಅಮೆರಿಕ, ಕೆನಡಾ, ಆಸ್ಟ್ರೇಲಿಯಾಕ್ಕೆ ಲಗ್ಗೆ..!

ಯಾವುದೇ ಒಂದು ಸಣ್ಣ ಮಟ್ಟದ ಗುಡಿ ಕೈಗಾರಿಕೆ ಅಥವಾ ಸ್ವಸಹಾಯ ಸಂಘಗಳ ಉತ್ಪನ್ನ ಅಂತಾರಾಷ್ಟ್ರೀಯ ಮಟ್ಟ ತಲುಪಲು ದಶಕಗಳೇ ಬೇಕಾಗುತ್ತವೆ. ಆದರೆ, ಕಲಬುರಗಿಯಲ್ಲಿ ಕೇವಲ 18 ತಿಂಗಳಲ್ಲಿ ಈ ಸಾಧನೆ ಮಾಡಲಾಗಿದೆ.


Click the Play button to hear this message in audio format

ಉತ್ತರ ಕರ್ನಾಟಕ ಜೀವನದ ಅವಿಭಾಜ್ಯ ಅಂಗ, ಪೌಷ್ಟಿಕಾಂಶಗಳ ಗಣಿ ಎನಿಸಿಕೊಂಡಿರುವ ಜೋಳದ ರೊಟ್ಟಿ ಈಗ ಆಧುನಿಕ ಮಾರುಕಟ್ಟೆಯ ತಂತ್ರಜ್ಞಾನ ಮತ್ತು ಬ್ರಾಂಡಿಂಗ್ ನೆರವಿನೊಂದಿಗೆ ಸಮುದ್ರದಾಚೆಗೂ ಪಯಣ ಬೆಳೆಸುತ್ತಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಟಿಯ ಫಲವಾಗಿ, 'ಕಲಬುರಗಿ ರೊಟ್ಟಿ' ಎಂಬ ಬ್ರಾಂಡ್ ಇಂದು ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದ ಕನ್ನಡಿಗರ ಹಾಗೂ ಅಲ್ಲಿನ ಸ್ಥಳೀಯರ ಮನೆ ತಲುಪುತ್ತಿದೆ. ಇದು ಕೇವಲ ಒಂದು ಆಹಾರ ಪದಾರ್ಥದ ರಫ್ತಲ್ಲ, ಬದಲಿಗೆ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಯಾವುದೇ ಒಂದು ಸಣ್ಣ ಮಟ್ಟದ ಗುಡಿ ಕೈಗಾರಿಕೆ ಅಥವಾ ಸ್ವಸಹಾಯ ಸಂಘಗಳ ಉತ್ಪನ್ನ ಅಂತಾರಾಷ್ಟ್ರೀಯ ಮಟ್ಟ ತಲುಪಲು ದಶಕಗಳೇ ಬೇಕಾಗುತ್ತವೆ. ಆದರೆ, ಕಲಬುರಗಿಯಲ್ಲಿ ಕೇವಲ 18 ತಿಂಗಳಲ್ಲಿ ಈ ಸಾಧನೆ ಮಾಡಲಾಗಿದೆ. ಜಿಲ್ಲಾಡಳಿತದ ಬೆಂಬಲ ಮತ್ತು ಸ್ವಸಹಾಯ ಸಂಘಗಳ ಶ್ರಮದಿಂದ 'ಕಲಬುರಗಿ ರೊಟ್ಟಿ' ಇದೀಗ ಬ್ರಾಂಡ್ ಆಗಿ ರೂಪುಗೊಂಡಿದೆ. ಆಸ್ಟ್ರೇಲಿಯಾ, ಅಮೇರಿಕಾ ಹಾಗೂ ಕೆನಡಾ ದೇಶಗಳಿಗೆ ರೊಟ್ಟಿಗಳನ್ನು ಅಂಚೆ ಮೂಲಕ ರಫ್ತು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇದು ಜಿಲ್ಲೆಯ ಕೃಷಿ ಆಧಾರಿತ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ತೆರೆದಿದೆ.

ಮಹಿಳಾ ಸಬಲೀಕರಣ: ಸಾವಿರ ಕೈಗಳ ಕಾಯಕ ಯೋಗ

ಸುಮಾರು 100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಅಡಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಮೊದಲು ಕೇವಲ ಮನೆಕೆಲಸ ಅಥವಾ ಕೂಲಿಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಮಾಸಿಕ 15 ಸಾವಿರ ರೂ.ನಿಂದ 20 ಸಾವಿರ ರೂ.ವರೆಗೆ ಸ್ಥಿರ ಆದಾಯ ಗಳಿಸುತ್ತಿದ್ದಾರೆ. ಮದುವೆ ಮತ್ತು ಹಬ್ಬ ಹರಿದಿನಗಳಂತಹ ಸೀಸನ್‌ಗಳಲ್ಲಿ ಈ ಆದಾಯ ಮತ್ತಷ್ಟು ಹೆಚ್ಚುತ್ತಿದೆ. ಕಲಬುರಗಿಯ ಶರಣಮ್ಮ ಪಾಟೀಲ್ ಅವರಂತಹ ಸಾವಿರಾರು ಮಹಿಳೆಯರು ಇಂದು ಉದ್ಯಮಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ.

ಕಲಬುರಗಿ ರೊಟ್ಟಿಯ ಮಾರಾಟ ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತವಾಗಿ ರೂಪಿತವಾಗಿದೆ. ಅಮೇಜಾನ್‌ನಂತಹ ಜಾಗತಿಕ ಇ-ಕಾಮರ್ಸ್ ತಾಣಗಳಲ್ಲಿ ಮತ್ತು 'ಕಲಬುರಗಿ ರೊಟ್ಟಿ' ಎಂಬ ಪ್ರತ್ಯೇಕ ವೆಬ್‌ಸೈಟ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಪುಣೆ ಮೂಲದ 'ಅಶ್ತಮ್ ಟ್ರೇಡರ್ಸ್' ಅವರೊಂದಿಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ವರ್ಷಕ್ಕೆ ಒಂದು ಲಕ್ಷ ರೊಟ್ಟಿಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. ಪ್ರತಿ ತಿಂಗಳು ಅಮೆರಿಕಾ ಮತ್ತು ಆಸ್ಟ್ರೇಲಿಯಾಕ್ಕೆ ತಲಾ ೧೦ ಸಾವಿರ ಹಾಗೂ ಕೆನಡಾಕ್ಕೆ ೫ ಸಾವಿರ ರೊಟ್ಟಿಗಳನ್ನು ಕಳುಹಿಸಲಾಗುತ್ತಿದೆ.

ಆರ್ಥಿಕ ಲಾಭಾಂಶದ ವಿಶ್ಲೇಷಣೆ: ಶೇ.100ರಷ್ಟು ಆದಾಯ ಹೆಚ್ಚಳ

ಸ್ಥಳೀಯ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ನಡುವಿನ ಬೆಲೆ ವ್ಯತ್ಯಾಸವು ರೊಟ್ಟಿ ತಯಾರಕರಿಗೆ ಭಾರಿ ಲಾಭ ತಂದುಕೊಟ್ಟಿದೆ. ಒಂದು ರೊಟ್ಟಿಗೆ 10 ರಿಂದ 12 ರೂ. ಇದ್ದು, ವಿದೇಶಿ ಮಾರುಕಟ್ಟೆಯಲ್ಲಿ ಒಂದು ರೊಟ್ಟಿಗೆ 25 ರಿಂದ 30 ರೂ. ಲಭ್ಯವಾಗುತ್ತಿದೆ. ಇದರಿಂದ ಮಹಿಳೆಯರಿಗೆ ಶೇ. 80 ರಿಂದ 100 ರಷ್ಟು ಹೆಚ್ಚಿನ ಆದಾಯ ದೊರೆಯುತ್ತಿದೆ. ಇದು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಉತ್ಪಾದಕರಿಗೆ ತಲುಪುತ್ತಿರುವುದು ವಿಶೇಷ. ರೊಟ್ಟಿಯು ದೀರ್ಘಕಾಲ ಬಾಳಿಕೆ ಬರಲು ತಾಂತ್ರಿಕ ಹಸ್ತಕ್ಷೇಪ ಅತ್ಯಗತ್ಯ. ಇದಕ್ಕಾಗಿ ಸರ್ಕಾರವು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ರೊಟ್ಟಿಗಳು ಕೆಡದಂತೆ ಪ್ಯಾಕ್ ಮಾಡಲು ಅತ್ಯಾಧುನಿಕ ಯಂತ್ರದ ಅವಶ್ಯಕತೆಯಿದೆ. ಗಾಳಿರಹಿತ ಪ್ಯಾಕ್‌ಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಎಸ್‌ಆರ್‌ ನಿಧಿಯಿಂದ 55 ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ. ಕಲಬುರಗಿಯ ಕೊಟನೂರ (ಡಿ) ಕೃಷಿ ತರಬೇತಿ ಕೇಂದ್ರದಲ್ಲಿ 32 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ರೊಟ್ಟಿಯ ಗುಣಮಟ್ಟ ಮತ್ತು ಬಾಳಿಕೆ ಹೆಚ್ಚಲಿದ್ದು, ರಫ್ತು ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿ

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸ್ಥಳೀಯವಾಗಿ ಸ್ವಸಹಾಯ ಸಂಘಗಳ ಮೂಲಕ ತಯಾರಿಸುವ ಕಲಬುರಗಿ ರೊಟ್ಟಿ ಇದೀಗ ವಿದೇಶದಲ್ಲಿ ಲಭ್ಯವಾಗುತ್ತಿದೆ. ಒಂದುವರೆ ವರ್ಷದಲ್ಲೇ ಕಲಬುರಗಿ ರೊಟ್ಟಿ ವಿದೇಶಿ ಮಾರುಕಟ್ಟೆಯಲ್ಲಿ ಸಿಗುವಂತೆ ಕ್ರಮವಹಿಸಲಾಗಿದ್ದು ಇದು ಹೆಮ್ಮೆಯ ವಿಷಯವಾಗಿದೆ. ಕಳೆದ ಒಂದುವರೆ ವರ್ಷದ ಹಿಂದೆ "ಕಲಬುರಗಿ ರೊಟ್ಟಿ " ಹೆಸರಿನಲ್ಲಿ ಬ್ರ್ಯಾಂಡ್ 100 ರೊಟ್ಟಿ ಸ್ವಸಹಾಯ ಸಂಘಗಳ ಮೂಲಕ ಒಟ್ಟು‌ 1000 ಮಹಿಳೆಯರು ರೊಟ್ಟಿ ತಯಾರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಲಬುರಗಿ ರೊಟ್ಟಿ ಪುಣೆ ಮೂಲದ ರಫ್ತು ಕಂಪನಿಯ ಮೂಲಕ ಅಮೇರಿಕಾ, ಕೆನಡಾ ಹಾಗೂ ಆಸ್ಟ್ರೇಲಿಯಾ ಗಳಿಗೆ ರಫ್ತು ಮಾಡಲು ಕ್ರಮವಹಿಸಲಾಗಿದೆ. ಇದು ನಮ್ಮ ಕಲಬುರಗಿ ಯ ಹೆಮ್ಮೆಯ ವಿಷಯವಾಗಿದೆ ಎಂದರು.

'ಕಲಬುರಗಿ ರೊಟ್ಟಿ'ಯ ಯಶಸ್ಸು ಕೇವಲ ಒಂದು ಯಶಸ್ವಿ ಉದ್ಯಮದ ಕಥೆಯಲ್ಲ, ಇದು 'ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ' ಎಂಬ ಪರಿಕಲ್ಪನೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಆಹಾರ ಸಂಸ್ಕರಣಾ ಉದ್ಯಮದಲ್ಲಿ ತಂತ್ರಜ್ಞಾನ ಮತ್ತು ಬ್ರಾಂಡಿಂಗ್ ಬೆರೆತರೆ ಗ್ರಾಮೀಣ ಆರ್ಥಿಕತೆಯ ಚಿತ್ರಣವನ್ನೇ ಬದಲಿಸಬಹುದು ಎಂಬುದನ್ನು ಕಲಬುರಗಿ ಸಾಬೀತುಪಡಿಸಿದೆ.


Read More
Next Story