ಭೀಕರ ಅಪಘಾತ- ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು
x

ಭೀಕರ ಅಪಘಾತ- ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರಾದಾಳ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Click the Play button to hear this message in audio format

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರಾದಾಳ ಗ್ರಾಮದ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್‌ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಬೊಮ್ಮನಹಳ್ಳಿ ಗ್ರಾಮದ ದೇವರಾಜ್ (19), ಮುಡಬೂಳ ಗ್ರಾಮದ ಲಕ್ಷ್ಮಿಕಾಂತ್ (20) ಹಾಗೂ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮದ ಪ್ರಕಾಶ್ (23) ಎಂದು ಗುರುತಿಸಲಾಗಿದೆ.

ಬಸ್-ಬೈಕ್ ನಡುವೆ ಭೀಕರ ಡಿಕ್ಕಿ

ಚಿತ್ತಾಪುರದಿಂದ ಸನ್ನತಿ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ, ಬೊಮ್ಮನಹಳ್ಳಿ ಕಡೆಯಿಂದ ಚಿತ್ತಾಪುರದತ್ತ ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಬೈಕ್‌ನಲ್ಲಿದ್ದ ಮೂವರು ರಸ್ತೆಗೆ ಬಿದ್ದಿದ್ದಾರೆ. ಅಪಘಾತದ ವೇಳೆ ಬಸ್‌ನ ಚಕ್ರಗಳು ಯುವಕರ ಮೇಲೆ ಹರಿದ ಪರಿಣಾಮ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ಆಕ್ರಂದನ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಮೃತರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲುಮುಟ್ಟಿದೆ. ಕೆಲಕಾಲ ರಸ್ತೆ ಸಂಚಾರದಲ್ಲೂ ವ್ಯತ್ಯಯ ಉಂಟಾಯಿತು.

ಪ್ರಕರಣ ದಾಖಲು

ಘಟನಾ ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
Next Story