ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ; ಸಿಗ್ನಲ್ ಕೊಟ್ಟ ಸಿಯಾ, ತಳ್ಳಿದ ಪ್ರಿಯಕರ ಚೇತನ್
x

ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಬಯಲಿಗೆ.

ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ; ಸಿಗ್ನಲ್ ಕೊಟ್ಟ ಸಿಯಾ, ತಳ್ಳಿದ ಪ್ರಿಯಕರ ಚೇತನ್

ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಬಯಲಿಗೆ. ಲೋಹಗಢ್ ಕೋಟೆಯಲ್ಲಿ ಪ್ರಿಯಕರನಿಗೆ ಸಿಯಾ ಗೋಯಲ್ ಸಿಗ್ನಲ್ ನೀಡುತ್ತಿದ್ದಂತೆ ಕೇತನ್‌ನನ್ನು ಕೆಳಗೆ ತಳ್ಳಿ ಹತ್ಯೆ ಮಾಡಲಾಗಿದೆ.


Click the Play button to hear this message in audio format

ಮಹಾರಾಷ್ಟ್ರದ ಪ್ರಸಿದ್ಧ ಲೋಹಗಢ್ ಕೋಟೆಯಲ್ಲಿ ನಡೆದ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇತನ್ ಅಗರ್ವಾಲ್ ಅವರ ನಿಶ್ಚಿತಾರ್ಥವಾಗಿದ್ದ ಯುವತಿ ಸಿಯಾ ಗೋಯಲ್, ಸಿಗ್ನಲ್ ನೀಡುತ್ತಿದ್ದಂತೆ ಆಕೆಯ ಪ್ರಿಯಕರ ಚೇತನ್ ಚೌಧರಿ ಜೂನ್ 18 ರಂದು ಲೋಹಗಢ್ ಕೋಟೆಯಿಂದ ಕೇತನ್‌ನನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ತಮ್ಮ ಪ್ರೀತಿಯ ವಿಷಯ ತಿಳಿದು ಓಡಿಹೋದರೆ ಕುಟುಂಬದ ಮರ್ಯಾದೆ ಹರಾಜಾಗುತ್ತದೆ ಎಂದು ಹೆದರಿದ ಈ ಜೋಡಿ, ಓಡಿಹೋಗುವ ಬದಲು ಅಗರ್ವಾಲ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. "ಆರಂಭದಲ್ಲಿ ವಿಚಾರಣೆಯ ಸಮಯದಲ್ಲಿ ಇಬ್ಬರೂ ಅಪರಾಧಿಗಳ ಸಾಮಾನ್ಯ ಪ್ರವೃತ್ತಿಯಂತೆ ಒಬ್ಬರ ಮೇಲೊಬ್ಬರು ತಪ್ಪು ಹೊರಿಸಲು ಯತ್ನಿಸಿದರು. ಆದರೆ, ಅಂತಿಮವಾಗಿ ತಾನೇ ಈ ಸಂಚು ರೂಪಿಸಿದ್ದಾಗಿ ಮತ್ತು ಯೋಜನೆಯಲ್ಲಿ ಚೇತನ್ ಕೂಡ ಭಾಗಿಯಾಗಿದ್ದಾಗಿ ಸಿಯಾ ಒಪ್ಪಿಕೊಂಡಿದ್ದಾಳೆ," ಎಂದು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾವು ಕೋಟೆಯಲ್ಲಿದ್ದದ್ದು ನಿಜ, ಆದರೆ ಕೇತನ್ (25)‌ನನ್ನು ತಳ್ಳಿದ ಜಾಗಕ್ಕೆ ತಾವು ಹೋಗಿರಲಿಲ್ಲ ಮತ್ತು ಅಲ್ಲಿ ನಿಖರವಾಗಿ ಏನಾಯಿತು ಎಂಬುದು ತನಗೆ ತಿಳಿದಿಲ್ಲ ಎಂದು ಚೇತನ್ ಆರಂಭದಲ್ಲಿ ತಿಳಿಸಿದ್ದು, ಆದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಪೊಲೀಸರಿಗೆ ಅನುಮಾನ ಬಂದಿತ್ತು. ಅಂತಿಮವಾಗಿ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡು ಇಡೀ ಘಟನಾವಳಿಯನ್ನು ವಿವರಿಸಿದ್ದಾರೆ ಎಂದು ಹೇಳಿದರು.

ಯೋಜನೆಯ ಪ್ರಕಾರ, ಸಿಯಾ ಗೋಯಲ್ (20) ಕೆಳಗೆ ಕುಳಿತುಕೊಳ್ಳುವ ಮೂಲಕ ಸಿಗ್ನಲ್‌ ನೀಡಬೇಕಿತ್ತು. ಅದನ್ನು ನೋಡಿ ಚೇತನ್ ಬಂದು, ಏನೂ ಅರಿಯದ ಅಗರ್ವಾಲ್‌ನನ್ನು ಕೆಳಗೆ ತಳ್ಳಬೇಕಿತ್ತು. ಅವರು ಯೋಜನೆಯಂತೆಯೇ ಇದನ್ನು ಕಾರ್ಯಗತಗೊಳಿಸಿದ್ದಾರೆ ಎಂದು ಅಧಿಕಾರಿ ವಿವರಿಸಿದ್ದಾರೆ.

"ಅಲ್ಲಿ ಏನು ಮತ್ತು ಹೇಗೆ ಸಂಭವಿಸಿತು ಎಂಬುದನ್ನು ಅವರು ನಮಗೆ ತಿಳಿಸಿದ್ದಾರೆ. ತನಗೆ ಇಂತಹದ್ದೊಂದು ಅಪಾಯ ಕಾದಿದೆ ಎಂಬ ಸಣ್ಣ ಸುಳಿವು ಕೂಡ ಕೇತನ್‌ಗೆ ಇರಲಿಲ್ಲ. ಆತ ಏನನ್ನಾದರೂ ಗ್ರಹಿಸುವ ಮುನ್ನವೇ ಆತನನ್ನು ಪ್ರಪಾತಕ್ಕೆ ತಳ್ಳಲಾಗಿತ್ತು," ಎಂದು ಅಧಿಕಾರಿ ಹೇಳಿದರು. ಒಬ್ಬ ನಿರಪರಾಧಿಯನ್ನು ಕೊಲೆ ಮಾಡುವ ಬದಲು ನೀವೇಕೆ ಓಡಿಹೋಗಲಿಲ್ಲ ಎಂದು ಪೊಲೀಸರು ಪ್ರಶ್ನಿಸಿದಾಗ, "ಓಡಿಹೋದರೆ ನಮ್ಮ ಕುಟುಂಬಗಳಿಗೆ ಅಪಕೀರ್ತಿ ಬರುತ್ತಿತ್ತು," ಎಂದು ಅವರು ಉತ್ತರಿಸಿದ್ದಾರೆ.

ಆರೋಪಿಗಳು ಇದಕ್ಕೂ ಮುನ್ನ ಎರಡು ಬಾರಿ ಅಗರ್ವಾಲ್‌ನನ್ನು ಲೋಹಗಢ್ ಕೋಟೆಗೆ ಕರೆದೊಯ್ದು ಕೊಲೆ ಮಾಡಲು ಯತ್ನಿಸಿದ್ದರು, ಆದರೆ ಆ ಎರಡೂ ಬಾರಿ ಯೋಜನೆ ವಿಫಲವಾಗಿತ್ತು ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು. ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರಿಗೆ ನವೆಂಬರ್‌ನಲ್ಲಿ ರಾಜಸ್ಥಾನದ ಉದಯ್‌ಪುರದ ಅರಮನೆಯೊಂದರಲ್ಲಿ ವಿವಾಹ ನಿಶ್ಚಯವಾಗಿತ್ತು. ಆದರೆ ಸಿಯಾಗೆ ಆತನನ್ನು ಮದುವೆಯಾಗಲು ಇಷ್ಟವಿರಲಿಲ್ಲ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಯಾಳ ತಂದೆ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಅಪರಾಧಕ್ಕೆ ಕಾರಣರಾದವರು ಸ್ವತಃ ತನ್ನ ಮಗಳೇ ಆಗಿದ್ದರೂ ಸಹ, ಕೇತನ್‌ನನ್ನು ಕೋಟೆಯಿಂದ ತಳ್ಳಿ ಕೊಂದಂತೆಯೇ ಆಕೆಯನ್ನೂ ಕೋಟೆಯಿಂದ ಕೆಳಗೆ ತಳ್ಳಿ ಸಾಯಿಸಬೇಕು. ಕೇತನ್ ನನಗೆ ಮಗನಂತಿದ್ದ, ಆತನ ಸಾವು ನಮ್ಮ ಎರಡೂ ಕುಟುಂಬಗಳನ್ನು ನುಚ್ಚುನೂರು ಮಾಡಿದೆ. ನಾವು ಮದುವೆಯ ತಯಾರಿ ನಡೆಸುತ್ತಿದ್ದೆವು. ನಡೆದಿರುವ ಘಟನೆ ಅತ್ಯಂತ ದುರಂತದ ಸಂಗತಿ. ಇಂದಿಗೂ ಇದನ್ನು ನಮ್ಮಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಕುಟುಂಬವು ಕೆಲವು ವಿಷಯಗಳನ್ನು ಮುಚ್ಚಿಟ್ಟಿದೆ ಎಂದು ಕೇತನ್ ತಂದೆ ಮಾಡಿರುವ ಆರೋಪವನ್ನು ಸಿಯಾ ತಂದೆ ನಿರಾಕರಿಸಿದ್ದಾರೆ. ಮಗಳ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇರುವುದು ಅಥವಾ ಆಕೆಗೆ ಮತ್ತೊಬ್ಬನೊಂದಿಗೆ ಅಫೇರ್ ಇರುವುದು ತಮಗೆ ತಿಳಿದಿರಲಿಲ್ಲ. ಸಿಯಾ ಅತ್ಯಂತ ಸರಾಗ ಹಾಗೂ ಮುಗ್ಧ ಹುಡುಗಿಯಾಗಿದ್ದಳು ಮತ್ತು ತನ್ನ ಮದುವೆಯ ಬಗ್ಗೆ ಯಾವಾಗಲೂ ತುಂಬಾ ಸಂತೋಷದಿಂದಿರುವಂತೆ ಕಾಣುತ್ತಿದ್ದಳು ಎಂದು ಆಕೆಯ ತಂದೆ ತಿಳಿಸಿದ್ದಾರೆ.

Read More
Next Story