ಹುಬ್ಬಳ್ಳಿ-ಗದಗ ಬೈಪಾಸ್‌ನಲ್ಲಿ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ
x

ಹುಬ್ಬಳ್ಳಿ-ಗದಗ ಬೈಪಾಸ್‌ನಲ್ಲಿ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ

ಸದ್ಯ ವಿಜಯಪುರ- ಬೆಂಗಳೂರು ‌ನಡುವೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ವಿಶೇಷ ರೈಲನ್ನು ಕೂಡ ಕಾಯಂ‌ ಮಾಡಬೇಕು ಎಂದು ಎಂ.ಬಿ.ಪಾಟೀಲ ಒತ್ತಾಯಿಸಿದ್ದಾರೆ.


ಮೈಸೂರು- ಫಂಡರಾಪುರ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸ್‌ಪ್ರೆಸ್‌ ರೈಲನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಗಳ ಮೂಲಕ ಓಡಿಸಲು ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಇದರಿಂದ ವಿಜಯಪುರ, ಬಾಗಲಕೋಟೆ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ.

ವಿಜಯಪುರ ಕಡೆಗೆ ಚಲಿಸುವ ರೈಲುಗಳನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕವೇ ಓಡಿಸಬೇಕೆಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಅವರು ಹಲವು ಬಾರಿ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದರು. ಅದಕ್ಕೆ ರೈಲ್ವೆ ಮಂಡಳಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದು ಹೆಚ್ಚಿನ ಅನುಕೂಲ ಆಗಲಿದೆ. ಜತೆಗೆ ಎರಡೂ ನಗರಗಳ ನಡುವಿನ ಪ್ರಯಾಣ ಅವಧಿ 55 ನಿಮಿಷ ಕಡಿಮೆ ಆಗಲಿದೆ.

ಸದ್ಯ ವಿಜಯಪುರ- ಬೆಂಗಳೂರು ‌ನಡುವೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ವಿಶೇಷ ರೈಲನ್ನು ಕೂಡ ಕಾಯಂ‌ ಮಾಡಬೇಕು ಎಂದು ಎಂ.ಬಿ.ಪಾಟೀಲ ಒತ್ತಾಯಿಸಿದ್ದಾರೆ.

ಬೈಪಾಸ್ ಮಾರ್ಗದಲ್ಲಿ ರೈಲು ಸಂಚರಿಸಲು ಶುರುವಾದ ಮೇಲೆ ಗೋಲಗುಂಬಜ್ ಎಕ್ಸ್‌ಪ್ರೆಸ್ ಇನ್ನು ಮುಂದೆ ಹುಬ್ಬಳ್ಳಿ ಮತ್ತು ಗದಗದಲ್ಲಿ ಊರೊಳಗೆ ಹೋಗುವುದಿಲ್ಲ. ಆದರೆ, ಅಲ್ಲಿಯ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಹುಬ್ಬಳ್ಳಿ ದಕ್ಷಿಣ ಮತ್ತು ಗದಗ ಬೈಪಾಸ್ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿದೆ. ಹಾಗೆಯೇ, ರಾಜ್ಯ ಸರ್ಕಾರದ ಕೋರಿಕೆಯಂತೆ ಮೈಸೂರು-ಫಂಡರಾಪುರ ನಡುವೆ ಮತ್ತೊಂದು ರೈಲು ಸೇವೆಯನ್ನು ಆದಷ್ಟು ಶೀಘ್ರವೇ ಪ್ರಾರಂಭಿಸಬೇಕು ಎಂದು ಕೋರಿದ್ದಾರೆ.

ಹುಬ್ಭಳ್ಳಿ ಮತ್ತು ಗದಗದಲ್ಲಿ ಊರೊಳಗೆ ರೈಲುಗಳು ಹೋಗುವುದರಿಂದ ವಿಜಯಪುರ, ಬಾಗಲಕೋಟೆ ಮುಂತಾದ ಜಿಲ್ಲೆಗಳ ಜನರಿಗೆ ಪ್ರಯಾಣಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಆದ್ದರಿಂದ ಇಲ್ಲಿ ಬೈಪಾಸ್ ಮೂಲಕವೇ ಓಡಿಸಬೇಕೆಂದು ಕೇಂದ್ರ ಸರ್ಕಾರದ ಗಮನವನ್ನು ನಿರಂತರವಾಗಿ ಸೆಳೆಯಲಾಗುತ್ತಿತ್ತು. ಈ ಸಂಬಂಧ ಪತ್ರ ವ್ಯವಹಾರ, ಅನುಸರಣಾ ಸಭೆಗಳು ಒಂದೇ ಸಮನೆ ನಡೆಯುತ್ತಿತ್ತು.

ವೇಳಾಪಟ್ಟಿ ಬದಲು

ಮೈಸೂರು-ಫಂಡರಾಪುರ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸಪ್ರೆಸ್ ಬೈಪಾಸ್ ಮಾರ್ಗಗಳಲ್ಲಿ ಓಡಲು ಆರಂಭಿಸಿದ ಬಳಿಕ ಮೈಸೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಟು ಮರುದಿನ ಬೆಳಿಗ್ಗೆ 10.05ಕ್ಕೆ ಫಂಡರಾಪುರವನ್ನು ತಲುಪಲಿದೆ. ಹಾಗೆಯೇ ಫಂಡರಾಪುರದಿಂದ ಬೆಳಿಗ್ಗೆ ಮಧ್ಯಾಹ್ನ 1.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.30ಕ್ಕೆ ಮೈಸೂರನ್ನು ತಲುಪಲಿದೆ.

Read More
Next Story