
ಅಸಮಾನತೆ ವಿರುದ್ಧದ ಗಟ್ಟಿ ದನಿ ಕಾಕ್ರೋಚ್ ಚಳವಳಿ; ಚೇತನ್ ಅಹಿಂಸಾ ಪ್ರತಿಪಾದನೆ
ಸಮಾಜದಲ್ಲಿ ನಿಜವಾದ ಪರಿವರ್ತನೆ ಬೇಕು. ಇದು ಕೇವಲ ಆಡಳಿತ ಪಕ್ಷದ ವಿರುದ್ಧದ ರಾಜಕೀಯ ವೇದಿಕೆಯಾಗಬಾರದು. ಬದಲಿಗೆ, ಇಡೀ ಅಸಮಾನತೆಯ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಗಟ್ಟಿ ಶಕ್ತಿಯಾಗಬೇಕು ಎಂದು ನಟ ಚೇತನ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಯುವಜನತೆಯ ಹತಾಶೆ ಮತ್ತು ರಾಜಕೀಯ ಪ್ರಜ್ಞೆಯ ಪ್ರತೀಕ. ಆದರೆ, ಇದು ಕೇವಲ ‘ಸಿಜೆಪಿ ವರ್ಸಸ್ ಬಿಜೆಪಿ’ಯಾಗಿ ಚುನಾವಣಾ ಪೈಪೋಟಿಗೆ ಅವಕಾಶ ಮಾಡಿಕೊಡಬಾರದು ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.
ಬೀದರ್‌ನಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಕ್ರೋಚ್ ಜನತಾ ಪಾರ್ಟಿ ಸೃಷ್ಟಿಸಿರುವ ಈ ಅಭೂತಪೂರ್ವ ಸಂಚಲನವು ಅಸಮಾನತೆಯ ವಿರುದ್ಧ ಗಟ್ಟಿದನಿಯಾಗಬೇಕು ಎಂದು ಹೇಳಿದ್ದಾರೆ.
ಯುವಜನರಲ್ಲಿ ರಾಜಕೀಯ ಪ್ರಜ್ಞೆ
"ಕೇವಲ ನಾಲ್ಕೈದು ದಿನಗಳಲ್ಲಿ ಸಿಜೆಪಿ ಖಾತೆಗೆ 20 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ. ಇದು ಇಡೀ ದೇಶದ ಯುವಜನತೆ ಪ್ರಸ್ತುತ ಇರುವ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಎಷ್ಟರಮಟ್ಟಿಗೆ ಬೇಸತ್ತಿದ್ದಾರೆ ಮತ್ತು ಹತಾಶರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಯುವಕರಲ್ಲಿ ದೊಡ್ಡ ಮಟ್ಟದ ರಾಜಕೀಯ ಪ್ರಜ್ಞೆ ಜಾಗೃತಗೊಂಡಿರುವುದಕ್ಕೆ ಈ ವಿದ್ಯಮಾನವೇ ಸಾಕ್ಷಿ" ಎಂದು ಚೇತನ್ ಹೇಳಿದ್ದಾರೆ.
ಹೋರಾಟದ ಮನೋಭಾವ ‘ಕಾಕ್ರೋಚ್’
ವ್ಯವಸ್ಥೆಯಲ್ಲಿ ಬದಲಾವಣೆ ತರಲು ಈ ಜಿರೆಳೆಗಳ ಸೇನೆ ಬಳಸಿಕೊಳ್ಳಬೇಕು ಎಂದ ಅವರು, "ನಮಗೆ ಸಮಾಜದಲ್ಲಿ ನಿಜವಾದ ಪರಿವರ್ತನೆ ಬೇಕು. ಇದು ಕೇವಲ ಆಡಳಿತ ಪಕ್ಷದ ವಿರುದ್ಧದ ರಾಜಕೀಯ ವೇದಿಕೆಯಾಗಬಾರದು. ಬದಲಿಗೆ, ಇಡೀ ಅಸಮಾನತೆಯ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಬೇಕು" ಎಂದಿದ್ದಾರೆ.
"ಅನೇಕ ದಶಕಗಳಿಂದ ಸಮಾಜದ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವ ನಿಜವಾದ ಹೋರಾಟಗಾರರೇ ಅಸಲಿ 'ಕಾಕ್ರೋಚ್ಗಳು'. ಈ ಜಿರಳೆಗಳಿಗಿರುವ ಹೋರಾಟದ ಮನೋಭಾವದಿಂದ ಒಂದು ಉತ್ತಮ ರಾಜ್ಯ ಹಾಗೂ ಸದೃಢ ದೇಶವನ್ನು ಕಟ್ಟಲು ಸಾಧ್ಯ. ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಪೆರಿಯಾರ್ ಅವರು ಕನಸು ಕಂಡಿದ್ದ ಸಮಾನತೆಯ ಸಮಾಜವನ್ನು ನಿರ್ಮಿಸಲು ಈ ಶಕ್ತಿ ಬಳಕೆಯಾಗಬೇಕು" ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಫಾಲೋವರ್ಸ್‌ನಿಂದ ಅಧಿಕಾರ ಸಿಗಲ್ಲ
ಸಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಸಾಧನೆ ಒಂದು ಉತ್ತಮ ಪ್ರಯತ್ನ. ಆದರೆ, ಕೇವಲ ಆನ್ಲೈನ್ ಫಾಲೋವರ್ಸ್ಗಳನ್ನು ನೆಚ್ಚಿಕೊಂಡು ಯಾರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ನೆನಪಿಸಿದ ಅವರು, ಯಾವಾಗ ನಾವು ಜನರ ನಡುವೆ ಹೋಗಿ, ತಳಮಟ್ಟದಲ್ಲಿ ಕೆಲಸ ಮಾಡುತ್ತೇವೆಯೋ ಆಗ ಮಾತ್ರ ನಿಜವಾದ ಅಧಿಕಾರ ಮತ್ತು ಬದಲಾವಣೆ ಸಾಧ್ಯ" ಎಂದು ಹೇಳಿದ್ದಾರೆ.
ಇದೇ ವೇಳೆ ಸಿಜೆಪಿಯ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಚೇತನ್, "ವ್ಯವಸ್ಥೆಯನ್ನು ಪ್ರಶ್ನಿಸುವ ಇಂತಹ ಡಿಜಿಟಲ್ ವೇದಿಕೆಗಳನ್ನು ನಿಷೇಧಿಸುತ್ತಿರುವುದು ಸರಿಯಲ್ಲ. ಇನ್ನು ಈ ಚಳವಳಿಯ ಹಿಂದೆ ‘ಪಾಕಿಸ್ತಾನದ ಕುಮ್ಮಕ್ಕಿದೆ’ ಎಂದು ಬಿಂಬಿಸಲು ಹೊರಟಿರುವುದು ಖಂಡನೀಯ. ಯುವಜನರ ಈ ಸ್ವಯಂಪ್ರೇರಿತ ಹೋರಾಟವನ್ನು ಯಾರೂ ಕೂಡ ಹೀಯಾಳಿಸಬಾರದು" ಎಂದು ಸರ್ಕಾರ ಹಾಗೂ ವಿರೋಧಿಗಳ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿರುದ್ಯೋಗಿ ಯುವಕರನ್ನು 'ಜಿರಳೆಗಳು' (ಕಾಕ್ರೋಚ್) ಎಂದು ಹೋಲಿಸಿ ನೀಡಿದ್ದ ಹೇಳಿಕೆ ವಿರುದ್ಧ ದೇಶದ ಯುವಸಮೂಹ ಸಾಮಾಜಿಕ ಜಾಲತಾಣಗಳಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ಡಿಜಿಟಲ್ ಚಳವಳಿ ಆರಂಭಿಸಿದೆ. ಇದು ಕೇವಲ ಐದೇ ದಿನಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ ಆಡಳಿತಾರೂಢ ಬಿಜೆಪಿಯ ಅಧಿಕೃತ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನೇ ಹಿಂದಿಕ್ಕಿ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.

