ಹಿಂದೂಗಳಿಗೆ ಅವಮಾನ: ಸರ್ಕಾರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟದ ಎಚ್ಚರಿಕೆ
x

ಹಿಂದೂಗಳಿಗೆ ಅವಮಾನ: ಸರ್ಕಾರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟದ ಎಚ್ಚರಿಕೆ

ಕಾಂಗ್ರೆಸ್ ಸರ್ಕಾರವು ಕೇವಲ ಅಲ್ಪಸಂಖ್ಯಾತರ ಮತಗಳ ಮೇಲೆ ಅವಲಂಬಿತವಾಗಿದೆ ಎಂಬ ಭ್ರಮೆಯಲ್ಲಿದೆ. ಹಿಂದೂಗಳ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಸರ್ಕಾರಕ್ಕೆ ಹಿಂದೂಗಳ ಮತಗಳೇ ಬೇಡ ಎಂಬ ರೀತಿಯಲ್ಲಿ ವರ್ತಿಸುತ್ತಿದೆ.


Click the Play button to hear this message in audio format

ರಾಜ್ಯದ ಕಾಂಗ್ರೆಸ್ ಸರ್ಕಾರವು ಪದೇ ಪದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಮತ್ತು ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮುಳುಗಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ 'ಹಿಂದೂ ವಿರೋಧಿ' ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಲು ಬಿಜೆಪಿ ಸಂಕಲ್ಪ ತೊಟ್ಟಿದೆ ಎಂದು ತಿಳಿಸಿದ್ದಾರೆ. ಕಲಬುರಗಿಯ ಆಳಂದ ಪಟ್ಟಣದಲ್ಲಿರುವ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಆವರಣದ ರಾಘವ ಚೈತನ್ಯ ಮಂದಿರದ ಮೇಲೆ ದಾಳಿ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿಂದೂಗಳ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಮಾಡಿದವರನ್ನು ರಕ್ಷಿಸುವ ಮೂಲಕ ಸರ್ಕಾರವು ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಈ ಕ್ರಮವು ಹಿಂದೂ ಸಮಾಜಕ್ಕೆ ಮಾಡಿದ ದೊಡ್ಡ ಅವಮಾನ ಎಂದು ಅವರು ಕಿಡಿಕಾರಿದ್ದಾರೆ. ಈ ನಡೆಯನ್ನು ಖಂಡಿಸಿ ಕಲಬುರಗಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರತಿಭಟನೆಯ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಯೇ ಸರ್ಕಾರದ ಗುರಿ

ಕಾಂಗ್ರೆಸ್ ಸರ್ಕಾರವು ಕೇವಲ ಅಲ್ಪಸಂಖ್ಯಾತರ ಮತಗಳ ಮೇಲೆ ಅವಲಂಬಿತವಾಗಿದೆ ಎಂಬ ಭ್ರಮೆಯಲ್ಲಿದೆ. ಹಿಂದೂಗಳ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಸರ್ಕಾರಕ್ಕೆ ಹಿಂದೂಗಳ ಮತಗಳೇ ಬೇಡ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರ ಸಂವಿಧಾನಬದ್ಧವಲ್ಲದ ಮತ್ತು ಸಮಾಜದ ಶಾಂತಿಗೆ ಭಂಗ ತರುವಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಭಟ್ಕಳದ 'ಮೂರಿನ ಕಟ್ಟೆ' ಮರುನಿರ್ಮಾಣ ವಿಷಯದಲ್ಲಿ ನಡೆದ ಗಲಭೆಯ ಸಂದರ್ಭದಲ್ಲೂ ಬಿಜೆಪಿ ಹಿಂದೂ ಸಂಘಟನೆಗಳ ಬೆಂಬಲಕ್ಕೆ ನಿಂತು ಕಾರ್ಯಕರ್ತರಿಗೆ ಧೈರ್ಯ ತುಂಬಿದೆ ಎಂದು ಹೇಳಿದರು.

ಅಭಿವೃದ್ಧಿ ಶೂನ್ಯ ಹಾಗೂ ಭ್ರಷ್ಟಾಚಾರದ ಆರೋಪ

ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ನಾಲಾಯಕ್ ಸರ್ಕಾರ ಎಂದು ಟೀಕಿಸಿರುವ ವಿಜಯೇಂದ್ರ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ದೂರಿದ್ದಾರೆ. ಹೊಸ ಯೋಜನೆಗಳ ಘೋಷಣೆ ಇಲ್ಲ, ಇರುವ ಯೋಜನೆಗಳಿಗೆ ಅನುದಾನವಿಲ್ಲ. ಐದು ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ತನ್ನ ಕೈಗಳನ್ನು ತಾನೇ ಕಟ್ಟಿಕೊಂಡಿದೆ. ಅಭಿವೃದ್ಧಿಗಾಗಿ ಹಣವಿಲ್ಲದೆ ಸರ್ಕಾರ ಪರದಾಡುತ್ತಿದೆ. ಅಭಿವೃದ್ಧಿ ಬದಲು ಭ್ರಷ್ಟಾಚಾರದ ಆರೋಪಗಳೇ ಕೇಳಿಬರುತ್ತಿವೆ. ಯುವಕರ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಸುಪ್ರೀಂಕೋರ್ಟ್ ಸೂಚನೆ ಇದ್ದರೂ ಮೀಸಲಾತಿ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ಸರಿಯಾದ ವಾದ ಮಂಡಿಸುವಲ್ಲಿ ಸರ್ಕಾರ ವಿಫಲವಾಗಿದೆ, ಇದರಿಂದ ಲಕ್ಷಾಂತರ ಯುವಕರು ಉದ್ಯೋಗ ವಂಚಿತರಾಗಿದ್ದಾರೆ ಎಂದು ದೂರಿದರು.

ಶಾಲೆಗಳಲ್ಲಿ ದ್ವೇಷದ ಬಿತ್ತನೆ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರ ಖಂಡನೀಯವಾಗಿದ್ದು, ಶಾಲೆಗಳು ವಿದ್ಯಾರ್ಜನೆಗೆ ಇರುವ ದೇವಾಲಯಗಳು. ಅಲ್ಲಿ ಸಮವಸ್ತ್ರದ ಮೂಲಕ ಸಮಾನತೆ ಇರಬೇಕು. ಆದರೆ, ಅಧಿಕಾರದ ಮದದಲ್ಲಿರುವ ಈ ಸರ್ಕಾರ ಮಕ್ಕಳಲ್ಲಿ ದ್ವೇಷದ ಭಾವನೆ ಬಿತ್ತುತ್ತಿದೆ ಎಂದು ಟೀಕಿಸಿದ್ದಾರೆ. ಇಂತಹ ನಿರ್ಧಾರಗಳು ಸಮಾಜವನ್ನು ವಿಭಜಿಸುವ ತಂತ್ರಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಲುದಾರಿಕೆ ಆರೋಪಕ್ಕೆ ತಿರುಗೇಟು

ಡಿ.ಕೆ. ಶಿವಕುಮಾರ್ ಮತ್ತು ತಮ್ಮ ನಡುವೆ ವ್ಯವಹಾರದ ಪಾಲುದಾರಿಕೆ ಇದೆ ಎಂಬ ಆಧಾರರಹಿತ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಯಾರೋ ಮುಠ್ಠಾಳರು ಮಾಡುತ್ತಿರುವ ಮೂರ್ಖತನದ ಹೇಳಿಕೆಗಳಿವು. ಇಂತಹ ಆಧಾರರಹಿತ ವದಂತಿಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

Read More
Next Story