
ಸಾಂದರ್ಭಿಕ ಚಿತ್ರ
ಬೀದರ್‌ನಲ್ಲಿ ಬಿಸಿಲಿಗೆ ಮೊದಲ ಬಲಿ: 45 ಡಿಗ್ರಿ ತಾಪಮಾನಕ್ಕೆ ರಸ್ತೆಯಲ್ಲೇ ಕುಸಿದು 20 ವರ್ಷದ ಯುವಕ ಸಾವು
ಬೀದರ್ ಜಿಲ್ಲೆಯಲ್ಲಿ ಸತತವಾಗಿ ತಾಪಮಾನ ಏರಿಕೆಯಾಗುತ್ತಲೇ ಇದೆ. ಬಿಸಿಲಿಗೆ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಬಲಿ ಇದು.
ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಬೀದರ್‌ನಲ್ಲಿ ಬಿರು ಬಿಸಿಲಿಗೆ ಮೊದಲ ಬಲಿಯಾಗಿದೆ. ವಿಪರೀತ ಬಿಸಿಲಿನ ಝಳ ತಾಳಲಾರದೆ 20 ವರ್ಷದ ಯುವಕನೊಬ್ಬ ರಸ್ತೆಯಲ್ಲೇ ತಲೆ ಸುತ್ತಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಕಮಲನಗರ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮಿರ್ಜಾಪುರ ಮೂಲದ ಮಹ್ಮದ್ ಸಮೀರ್ (20) ಮೃತ ದುರ್ದೈವಿ. ಈತ ತನ್ನ ತಂದೆ ಲಯಿಕ್ ಅಹ್ಮದ್ ಅವರೊಂದಿಗೆ ಕೆಲಸಕ್ಕಾಗಿ ಏಪ್ರಿಲ್ 12ರಂದು ಕಮಲನಗರಕ್ಕೆ ಬಂದಿದ್ದನು. ಕೆಲವು ದಿನಗಳ ಹಿಂದೆ ಮಧ್ಯಾಹ್ನ ತರಕಾರಿ ತರಲು ಮಾರುಕಟ್ಟೆಗೆ ತೆರಳಿದ್ದಾಗ, ವಿಪರೀತ ಬಿಸಿಲಿನಿಂದಾಗಿ ಸಮೀರ್‌ಗೆ ತಲೆ ಸುತ್ತು ಬಂದಿದೆ. ದಾರಿಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದ ಆತ, ಬಳಿಕ ರಾಷ್ಟ್ರೀಯ ಹೆದ್ದಾರಿ-50ರ ಮೂಲಕ ಡಿಗ್ಗಿ ಗ್ರಾಮದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಬಿಸಿಲಿನ ಪ್ರಖರತೆ ತಡೆದುಕೊಳ್ಳಲಾಗದೆ ರಸ್ತೆಯಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ. ಕಳೆದ ಕೆಲವು ದಿನಗಳಿಂದ ಬೀದರ್‌ನಲ್ಲಿ ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂಬುದು ಗಮನಾರ್ಹ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಾರುಕಟ್ಟೆಗೆ ಹೋದ ಮಗ ವಾಪಸ್ ಬಾರದಿದ್ದಾಗ ಆತಂಕಗೊಂಡ ತಂದೆ ಲಯಿಕ್ ಅಹ್ಮದ್ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಶನಿವಾರ (ಏಪ್ರಿಲ್ 18) ಡಿಗ್ಗಿ-ಕಮಲನಗರ ರಸ್ತೆಯ ಮಧ್ಯೆ ಯುವಕನ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಶ್ರೀಕಾಂತ ಅಲ್ಲಾಪುರೆ ಹಾಗೂ ಪಿಎಸ್‌ಐ ಆಶಾ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ತಂದೆ ನೀಡಿದ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಡುವ ಬಿಸಿಲಿನಿಂದಲೇ ಯುವಕ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ಹೊರಬರದಂತೆ ಅಧಿಕಾರಿಗಳ ಎಚ್ಚರಿಕೆ
ಬೀದರ್ ಜಿಲ್ಲೆಯಲ್ಲಿ ಸತತವಾಗಿ ತಾಪಮಾನ ಏರಿಕೆಯಾಗುತ್ತಲೇ ಇದೆ. ಬಿಸಿಲಿಗೆ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಬಲಿ ಇದಾಗಿದ್ದು, ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಧ್ಯಾಹ್ನದ ವೇಳೆ ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜನರು ಸಾಕಷ್ಟು ನೀರು ಕುಡಿಯುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವಂತೆ ಸೂಚಿಸಲಾಗಿದೆ.
ತಾಪಮಾನ ಹೆಚ್ಚಳದಿಂದಾಗುವ ಸಮಸ್ಯೆಗಳು ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ʼದ ಫೆಡರಲ್ ಕರ್ನಾಟʼ ವಿಡಿಯೋ ವರದಿ ಮಾಡಿತ್ತು.

