
ಅಂತಾರಾಷ್ಟ್ರೀಯ ರೊಬೊಟಿಕ್ಸ್ ಸ್ಪರ್ಧೆ: ತ್ರಿವರ್ಣ ಧ್ವಜ ಹಾರಿಸಿದ ನಾಗನೂರು ಮಠದ ವಿದ್ಯಾರ್ಥಿಗಳು
ಸುಶಾಂತ್ ಲಕ್ಕಪ್ಪ ಬಂದಿವಡ್ಡರ್ ಮತ್ತು ವಿಠ್ಠಲ್ ಮಲ್ಲಿಕಾರ್ಜುನ ಗದಗ್ ಎಂಬ ವಿದ್ಯಾರ್ಥಿಗಳು ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ, ಬದಲಾಗಿ ಅದೊಂದು ಮೆಟ್ಟಿಲು ಎಂಬುದನ್ನು ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಸಾಧಿಸಿ ತೋರಿದ್ದಾರೆ. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಆಶ್ರಯದಲ್ಲಿ ಬೆಳೆದ, ಸಾಮಾನ್ಯ ಕುಟುಂಬದ ಹಿನ್ನೆಲೆಯುಳ್ಳ ಸುಶಾಂತ್ ಲಕ್ಕಪ್ಪ ಬಂದಿವಡ್ಡರ್ ಮತ್ತು ವಿಠ್ಠಲ್ ಮಲ್ಲಿಕಾರ್ಜುನ ಗದಗ್ ಎಂಬ ವಿದ್ಯಾರ್ಥಿಗಳು, ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಪ್ರತಿಷ್ಠಿತ ‘ಕೋಡ್‌ಅವೂರ್’ ಅಂತಾರಾಷ್ಟ್ರೀಯ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಇಡೀ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಇಬ್ಬರು ವಿದ್ಯಾರ್ಥಿಗಳ ಕುಟುಂಬದ ಹಿನ್ನೆಲೆಯನ್ನು ಗಮನಿಸಿದಾಗ, ಅವರ ಸಾಧನೆಯ ಮಹತ್ವ ಅರಿವಾಗುತ್ತದೆ. ಸುಶಾಂತ್ ಲಕ್ಕಪ್ಪ ಬಂದಿವಡ್ಡರ್ ತಂದೆ ಆಟೋ ಚಾಲಕರಾಗಿದ್ದರೆ, ವಿಠ್ಠಲ್ ಮಲ್ಲಿಕಾರ್ಜುನ ಗದಗ್ ತಂದೆ ಸಣ್ಣ ರೈತಋಾಗಿದ್ದಾರೆ. ಆರ್ಥಿಕವಾಗಿ ಸವಾಲಿನ ಪರಿಸ್ಥಿತಿಯಲ್ಲಿದ್ದರೂ, ತಾಂತ್ರಿಕ ಶಿಕ್ಷಣದ ಮೇಲಿನ ಅತೀವ ಆಸಕ್ತಿ ಮತ್ತು ಕಲಿಯುವ ಛಲ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇವರು ಬೆಳಗಾವಿಯ ಶ್ರೀ ಸಿದ್ದರಾಮೇಶ್ವರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸ್ಟೀಮ್-ಎಚ್ ಟ್ರೈನಿಂಗ್ ಅಂಡ್ ರಿಸರ್ಚ್ ಫೌಂಡೇಶನ್’ನ ಸದಸ್ಯರಾಗಿದ್ದಾರೆ.
ಕಿರಿಯ ವಿಜ್ಞಾನಿಗಳ ಕಾರ್ಯಕ್ರಮ
ಅಂತಾರಾಷ್ಟ್ರೀಯ ಮಟ್ಟದ ಯಶಸ್ಸಿನ ಹಿಂದಿರುವುದು ಒಂದು ಸುದೀರ್ಘ ಮತ್ತು ವ್ಯವಸ್ಥಿತ ತರಬೇತಿ ಪ್ರಕ್ರಿಯೆ. ಈ ಫೌಂಡೇಶನ್ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಕಿರಿಯ ವಿಜ್ಞಾನಿಗಳ ಕಾರ್ಯಕ್ರಮ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸುಶಾಂತ್ ಮತ್ತು ವಿಠ್ಠಲ್ ಈ ಕಾರ್ಯಕ್ರಮದ ಮೂಲಕ ಆಯ್ಕೆಯಾದರು. ಅವರಿಗೆ ಫೌಂಡೇಶನ್ ವತಿಯಿಂದ ಕಠಿಣ ತರಬೇತಿ, ಪ್ರಾಯೋಗಿಕ ಯೋಜನೆಗಳು ಮತ್ತು ನಿರಂತರ ಮಾರ್ಗದರ್ಶನ ನೀಡಲಾಯಿತು. ಈ ತರಬೇತಿಯೇ ಅವರನ್ನು ವಿಜ್ಞಾನಿ ಮನೋಭಾವದ ವಿದ್ಯಾರ್ಥಿಗಳನ್ನಾಗಿ ರೂಪಿಸಿತು.
ರಾಷ್ಟ್ರೀಯದಿಂದ ಅಂತಾರಾಷ್ಟ್ರೀಯ ವೇದಿಕೆಯವರೆಗೆ
ಈ ವಿದ್ಯಾರ್ಥಿಗಳ ಪ್ರಯಾಣ ಹಂತ ಹಂತವಾಗಿ ಸಾಗಿತು. ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಗೀತಂ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕೋಡ್‌ಅವೂರ್ ಸ್ಪರ್ಧೆಯಲ್ಲಿ ಇವರು ಭಾಗವಹಿಸಿ, ತಮ್ಮ ಅದ್ಭುತವಾದ ‘ರೋಬೋಟ್ ಸಾಕರ್ ಸಿಸ್ಟಮ್’ ಮೂಲಕ ನ್ಯಾಯಾಧೀಶರ ಗಮನ ಸೆಳೆದರು. ಅಲ್ಲಿ ಪ್ರಥಮ ಸ್ಥಾನ ಗಳಿಸಿದ ನಂತರ, ಮೇ 16 ಮತ್ತು 17 ರಂದು ಜಕಾರ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆದರು. ಜಕಾರ್ತಾದಲ್ಲಿ ನಡೆದ ಈ ಜಾಗತಿಕ ಸ್ಪರ್ಧೆಯಲ್ಲಿ ವಿಶ್ವದ 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಶಾಲೆಗಳ ವಿದ್ಯಾರ್ಥಿಗಳನ್ನು ಹಿಂದಿಕ್ಕಿ, ಬೆಳಗಾವಿಯ ಈ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುವುದು ಅಸಾಮಾನ್ಯ ಸಾಧನೆಯಾಗಿದೆ.
ನಾಗನೂರು ರುದ್ರಾಕ್ಷಿ ಮಠದ ಮಾರ್ಗದರ್ಶನ
ಈ ಸಾಧನೆಯ ಹಿಂದೆ ಮಠದ ದೂರದೃಷ್ಟಿಯಿದೆ. ‘ಸ್ಟೀಮ್-ಎಚ್ ಟ್ರೈನಿಂಗ್ ಅಂಡ್ ರಿಸರ್ಚ್ ಫೌಂಡೇಶನ್’ಗೆ ‘ಟ್ರಾನ್ಸ್‌ಡಿಸಿಪ್ಲಿನರಿ ಲರ್ನಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಬೆಂಬಲವಿದೆ. ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿಯವರು ಈ ಸಂಸ್ಥೆಗೆ ಭಾರಿ ಉತ್ತೇಜನ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ನಾಗನೂರು ರುದ್ರಾಕ್ಷಿ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಶಿಕ್ಷಣ ಮತ್ತು ಸಮಾಜ ಸೇವೆಯ ಕೇಂದ್ರವಾಗಿ ಬೆಳೆದಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಪಾಠಗಳನ್ನು ಕಲಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಮಠವು ದೇಶದ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುತ್ತಿದೆ. ಮಠದ ವಾತಾವರಣದಲ್ಲಿ ನಡೆಯುತ್ತಿರುವ ಈ ಸಂಶೋಧನಾ ಕಾರ್ಯಗಳು ವಿದ್ಯಾರ್ಥಿಗಳಿಗೆ ಕಲಿಯುವಿಕೆ ಮತ್ತು ಆವಿಷ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡಿದೆ.
ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಪ್ರಾಯೋಗಿಕ ತಂತ್ರಜ್ಞಾನದ ಅರಿವು ಇದ್ದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಮಿಂಚಬಹುದು ಎಂಬುದಕ್ಕೆ ಸುಶಾಂತ್ ಮತ್ತು ವಿಠ್ಠಲ್ ಜ್ವಲಂತ ಉದಾಹರಣೆ. ಖಾಸಗಿ ಮತ್ತು ದುಬಾರಿ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ಸ್ಪರ್ಧಿಸಿ ಗೆದ್ದಿರುವುದು ಅವರಲ್ಲಿನ ಪರಿಶ್ರಮ ಮತ್ತು ಮಠ ನೀಡಿದ ತಾಂತ್ರಿಕ ತರಬೇತಿಯ ಫಲವಾಗಿದೆ. ವಿದ್ಯಾರ್ಥಿಗಳ ಈ ಐತಿಹಾಸಿಕ ಸಾಧನೆಗೆ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿಗಳು, ಪ್ರಾಂಶುಪಾಲರು, ಶಿಕ್ಷಕರು ಮತ್ತು ಈ ಯೋಜನೆಯ ಸಂಯೋಜಕರು ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇವರ ಸಾಧನೆಯು ಮುಂದಿನ ದಿನಗಳಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುವುದರಲ್ಲಿ ಸಂಶಯವಿಲ್ಲ.

