ನವಿಲು ಗರಿಗಳ ಅಕ್ರಮ ಬಳಕೆ ಆರೋಪ: ಕಿಶನ್‌, ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು
x

ನವಿಲು ಗರಿಗಳ ಅಕ್ರಮ ಬಳಕೆ ಆರೋಪ: ಕಿಶನ್‌, ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು

ನವಿಲಿನ ಗರಿಗಳನ್ನು ಅಕ್ರಮವಾಗಿ ಬಳಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿದ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


ದೇಶದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಗರಿಗಳನ್ನು ಅಕ್ರಮವಾಗಿ ಬಳಸಿ, ವೇಷಭೂಷಣಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುತ್ತಿರುವ ಪ್ರಕರಣ ಇದೀಗ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕಿಶನ್‌ ಮತ್ತು ನಿವೇದಿತಾ ಗೌಡ ಅವರು ನೈಜ ನವಿಲು ಗರಿಗಳನ್ನು ಬಳಸಿ ತಯಾರಿಸಿದ ಉಡುಪುಗಳನ್ನು ಧರಿಸಿ ನೃತ್ಯ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗಳು ಸಾರ್ವಜನಿಕವಾಗಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ. ನವಿಲು ಗರಿಗಳ ಬಳಕೆ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಅಡಿಯಲ್ಲಿ ಅಪರಾಧವಾಗಿದ್ದರೂ, ಪ್ರಭಾವಿ ವ್ಯಕ್ತಿಗಳು ಇಂತಹ ಕೃತ್ಯಗಳಲ್ಲಿ ತೊಡಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಪ್ರಕಾರ ನವಿಲು ಸಂರಕ್ಷಿತ ಪ್ರಭೇದವಾಗಿದೆ. ನವಿಲು ಗರಿಗಳ ಸಂಗ್ರಹ, ಮಾರಾಟ, ಪ್ರದರ್ಶನ ಮತ್ತು ಬಳಕೆ ಕುರಿತು ಕಠಿಣ ನಿಯಮಗಳಿವೆ. ಇಂತಹದರಲ್ಲಿ ದೊಡ್ಡ ಪ್ರಮಾಣದ ನವಿಲು ಗರಿಗಳನ್ನು ಉಡುಪಿನಲ್ಲಿ ಬಳಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪ್ರಭಾವಿ ವ್ಯಕ್ತಿಗಳು ಸಾರ್ವಜನಿಕವಾಗಿ ನವಿಲು ಗರಿಗಳನ್ನು ಬಳಸಿ ಪ್ರದರ್ಶಿಸುವುದರಿಂದ, ಸಮಾಜದಲ್ಲಿ ನವಿಲು ಗರಿಗಳ ಬಳಕೆಯನ್ನು ವೈಭವೀಕರಿಸಿದಂತಾಗುತ್ತದೆ. ಇದು ಪರೋಕ್ಷವಾಗಿ ನವಿಲುಗಳ ಅಕ್ರಮ ಬೇಟೆ ಮತ್ತು ಮಾರಾಟಕ್ಕೆ ಉತ್ತೇಜನ ನೀಡುವ ಅಪಾಯವಿದೆ. ವಿಡಿಯೋದಲ್ಲಿ ಬಳಸಿರುವ ಗರಿಗಳ ಸಂಖ್ಯೆ ಅಸಾಮಾನ್ಯವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನವಿಲು ಗರಿಗಳು ಎಲ್ಲಿಂದ ಬಂದವು? ಅವುಗಳನ್ನು ಕಾನೂನುಬದ್ಧವಾಗಿ ಪಡೆದಿದ್ದಾರೆಯೇ ಅಥವಾ ಅಕ್ರಮವಾಗಿ ಸಾಗಾಣಿಕೆ ಮಾಡಲಾಗಿದೆಯೇ? ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.


ಅರಣ್ಯ ಇಲಾಖೆಗೆ ಮನವಿ

ದೂರುದಾರರು ಅರಣ್ಯ ಇಲಾಖೆಗೆ ಸಲ್ಲಿಸಿರುವ ಮನವಿಯಲ್ಲಿ ಹಲವು ನಿರ್ದಿಷ್ಟ ಕ್ರಮಗಳನ್ನು ಸೂಚಿಸಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಅರಣ್ಯ ವಲಯ ಅಧಿಕಾರಿಗಳಿಗೆ ತಕ್ಷಣ ಈ ಪ್ರಕರಣದ ತನಿಖೆ ನಡೆಸಲು ಆದೇಶಿಸಬೇಕು. ವಿಡಿಯೋದಲ್ಲಿರುವ ನವಿಲು ಗರಿಗಳು ನೈಜವಾ ಅಥವಾ ಕೃತಕವಾ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷಿಸಬೇಕು. ಗರಿಗಳ ಮೂಲ, ಖರೀದಿ ಮತ್ತು ಪೂರೈಕೆ ಸರಪಳಿಯ ಬಗ್ಗೆ ತನಿಖೆ ನಡೆಸಿ, ಯಾವುದೇ ಪ್ರಭಾವಕ್ಕೆ ಮಣಿಯದೆ ಕ್ರಮ ಜರುಗಿಸಬೇಕು. ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿ, ಗರಿಗಳನ್ನು ಒದಗಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೂರುದಾರರು ತಮ್ಮ ಪತ್ರದಲ್ಲಿ, ನವಿಲು ಭಾರತದ ಸಂವಿಧಾನಬದ್ಧ ರಾಷ್ಟ್ರೀಯ ಪಕ್ಷಿಯಾಗಿದ್ದು, ಅದರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಕಾನೂನನ್ನು ಗೌರವಿಸಬೇಕು. ಈ ಪ್ರಕರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಮೂಲಕ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣೆಯ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಗರಿಗಳು ನೈಜವಾದವು ಎಂದು ಸಾಬೀತಾದರೆ, ಉಡುಪು ಧರಿಸಿದವರಷ್ಟೇ ಅಲ್ಲದೆ ಅದನ್ನು ಮಾರಾಟ ಮಾಡಿದವರು ಅಥವಾ ಪೂರೈಕೆ ಮಾಡಿದವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ. ಇಂತಹ ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನಕ್ಕಷ್ಟೇ ಸೀಮಿತವಾಗುವ ಬದಲಾಗಿ, ಪ್ರಕೃತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿಯಬೇಕೆಂಬುದನ್ನು ಈ ದೂರಿನಲ್ಲಿ ತಿಳಿಸಲಾಗಿದೆ. ದಿನೇಶ್ ಕಲ್ಲಹಳ್ಳಿ ಅವರ ದೂರಿನ ಆಧಾರದ ಮೇಲೆ ಅರಣ್ಯ ಇಲಾಖೆ ತನಿಖೆ ಕೈಗೊಳ್ಳಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.

Read More
Next Story