
ಬಿಜೆಪಿ ಜತೆ ಮೈತ್ರಿ ಇದ್ದರೂ ಜಾತ್ಯತೀತ ಸಿದ್ಧಾಂತ ಬಿಡಲ್ಲ; ಕಾರ್ಯಕರ್ತರಿಗೆ ಸಂದೇಶ ರವಾನಿಸಿದ ನಾಯಕರು
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕುರಿತ ಇಂದಿಗೂ ಕಾರ್ಯಕರ್ತರಲ್ಲಿ ಅಪಸ್ವರಗಳಿವೆ. ಮೈತ್ರಿಯ ಕುರಿತು ಸಾಕಷ್ಟು ಸ್ಪಷ್ಟನೆ ನೀಡಿದ್ದರೂ ಗ್ರಾಮೀಣ ಭಾಗದಲ್ಲಿ ಭಿನ್ನದನಿ ಬದಲಾಗಿಲ್ಲ.
ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡ ನಂತರ ಜೆಡಿಎಸ್ ಪಕ್ಷವು ಜಾತ್ಯಾತೀತವಾಗಿಲ್ಲ ಎಂಬ ಟೀಕೆಗಳ ಬೆನ್ನಲ್ಲೇ ಜೆಡಿಎಸ್ ಇಂದಿಗೂ, ಎಂದೆಂದಿಗೂ ಜಾತ್ಯತೀತ ಪಕ್ಷವಾಗಿಯೇ ಉಳಿಯಲಿದೆ ಎಂಬ ಸಂದೇಶ ರವಾನಿಸಲು ಪಕ್ಷದ ನಾಯಕರು ಮುಂದಾಗಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕುರಿತ ಇಂದಿಗೂ ಕಾರ್ಯಕರ್ತರಲ್ಲಿ ಅಪಸ್ವರಗಳಿವೆ. ಮೈತ್ರಿಯ ಕುರಿತು ಸಾಕಷ್ಟು ಸ್ಪಷ್ಟನೆ ನೀಡಿದ್ದರೂ ಗ್ರಾಮೀಣ ಭಾಗದಲ್ಲಿ ಭಿನ್ನದನಿ ಬದಲಾಗಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಮೈತ್ರಿ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಎನ್‌ಡಿಎ ಜೊತೆ ರಾಜಕೀಯ ಕಾರಣಕ್ಕಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಜಾತ್ಯತೀತ ಜನತಾದಳದ (ಜೆಡಿಎಸ್) ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿಗೂ ನಾವು ಜಾತ್ಯಾತೀತವಾಗಿಯೇ ಉಳಿಯುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಇಂದಿಗೂ ಕೆಲ ಕಾರ್ಯಕರ್ತರಲ್ಲಿ ಗೊಂದಲವಿರುವ ಮಾತುಗಳು ಕೇಳಿ ಬರುತ್ತಿವೆ. ನಾವು ಎನ್‌ಡಿಎ ಜೊತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ, ನಮ್ಮ ಸಿದ್ದಾಂತವನ್ನು ಯಾರ ಜೊತೆಗೂ ವಿಲೀನ ಮಾಡಿಕೊಂಡಿಲ್ಲ ಎಂದಿದ್ದಾರೆ.
ಜೆಡಿಎಸ್ ಪಕ್ಷವು ಜಾತಿ, ಧರ್ಮ ಹಾಗೂ ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡುತ್ತಿಲ್ಲ. ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆ ಮೇಲೆ ಪಕ್ಷದ ಆಡಳಿತ ನಿಂತಿದೆ. ಎಲ್ಲರನ್ನೂ ಸಮಾನವಾಗಿ ನೋಡುವ ಕೆಲಸವನ್ನು ಪಕ್ಷ ಮಾಡುತ್ತಿದೆ. ಇದನ್ನು ಮುಂದುವರಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಆನೆ ದಾಳಿಗೆ ಶೀಘ್ರ ಶಾಶ್ವತ ಪರಿಹಾರ
ಆನೆ ದಾಳಿಯಿಂದ ಆಗುತ್ತಿರುವ ತೀವ್ರ ಹಾನಿ ಮತ್ತು ಪ್ರಾಣಾಪಾಯದ ಬಗ್ಗೆಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಶಾಶ್ವತ ಪರಿಹಾರಕ್ಕಾಗಿ ಚರ್ಚಿಸಿದ್ದಾರೆ. ತ್ವರಿತವಾಗಿ ಕ್ರಮ ಕೈಗೊಳ್ಳಲು ಚರ್ಚಿಸುತ್ತಿದ್ದಾರೆ ಎಂದು ಹೇಳಿದರು.
ಸಚಿವ ಜಮೀರ್ ಅಹಮದ್ ಖಾನ್ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷವನ್ನು ಯಾವ ಸಂದರ್ಭದಲ್ಲಿ ಯಾವ ರೀತಿ ಬಿಟ್ಟು ಹೋದ್ರು, ಹೋಗುವಾಗ ಸಾರ್ವಜನಿಕ ವಲಯದಲ್ಲಿ ಯಾವ ಯಾವ ರೀತಿ ಚರ್ಚೆ ಮಾಡಿದ್ದಾರೆ, ಎಲ್ಲವನ್ನು ಪರಿಗಣಿಸಿ ಕರೆಸಿಕೊಳ್ಳಬೇಕೆ, ಬೇಡವೇ ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.
ಪ್ರತಿ ಕ್ಷೇತ್ರ, ಪ್ರತಿ ತಾಲೂಕಿನಲ್ಲೂ ಸಂಘಟನೆ
ಚಿಕ್ಕಮಗಳೂರು ಜಿಲ್ಲೆಯ ಪ್ರತಿ ಕ್ಷೇತ್ರ , ಪ್ರತಿ ತಾಲೂಕುಗಳಿಗೂ ತೆರಳಿ ಸಂಘಟನೆ ಮಾಡುತ್ತೇನೆ. ಕಡೂರು ಕ್ಷೇತ್ರದಲ್ಲಿ ನಿರಂತರವಾಗಿ ಜೆಡಿಎಸ್ ಗೆಲುವಾಗಿದೆ. ನಮ್ಮ ಪಕ್ಷಕ್ಕೆ ಜಿಲ್ಲೆಯಲ್ಲಿ ಒಂದು ಬಲವಿದೆ. ಪಕ್ಷಕ್ಕೆ ಹೊಸ ವೇಗ ನೀಡಲು ಹೋರಾಟ ಮಾಡುತ್ತಿದ್ದೇವೆ ಎಂದು ನಿಖಿಲ್ ತಿಳಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದೆ. ಕಾಂಗ್ರೆಸ್ನಲ್ಲಿ ಅಹಿಂದ ನಾಯಕರ ರಾಜಕೀಯ ಭವಿಷ್ಯ ಎಲ್ಲಿಗೆ ಹೋಗುತ್ತೆ ಎಂಬ ಆತಂಕ ನನಗಿದೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಯಾವತ್ತೂ ಬೆಳೆಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

