
ಎಫ್ಐಆರ್ ಹಾಕಿದ್ರು ಹೆದರಬೇಡಿ, ಟೋಲ್ ಮಾತ್ರ ಕಟ್ಟಬೇಡಿ; ಕೇಂದ್ರ ಸಚಿವ ಕುಮಾರಸ್ವಾಮಿ ಕರೆ
"ಈಗಾಗಲೇ ಸುಮಾರು 2 ಸಾವಿರ ಕೋಟಿ ರೂ.ಗೂ ಅಧಿಕ ಟೋಲ್ ವಸೂಲಿಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪರ ಕೆಲಸ ಮಾಡುತ್ತಿದ್ದಾರೋ ಅಥವಾ ನೈಸ್ ಕಂಪನಿಯ ಮಾಲೀಕರಂತೆ ನಡೆದುಕೊಳ್ಳುತ್ತಿದ್ದಾರೋ" ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನೈಸ್ ರಸ್ತೆಯ ಟೋಲ್ ಸಂಗ್ರಹದ ಸುತ್ತ ಹರಡಿರುವ ಗೊಂದಲಗಳು ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಟೋಲ್ ಸಂಗ್ರಹ ಕುರಿತಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ನೈಸ್ ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದು, "ಸಾರ್ವಜನಿಕರು ಯಾವುದೇ ಕಾರಣಕ್ಕೂ ಟೋಲ್ ಪಾವತಿಸಬಾರದು, ಎಫ್ಐಆರ್ ದಾಖಲಿಸಿದರೂ ಹೆದರಬಾರದು” ಎಂದು ಬಹಿರಂಗ ಕರೆ ನೀಡಿದ್ದಾರೆ. ಕೇಂದ್ರ ಸಚಿವರ ಈ ಹೇಳಿಕೆ ಬೆನ್ನಲ್ಲೇ ನೈಸ್ ರಸ್ತೆಯ ವಿವಿಧ ಟೋಲ್ ಬೂತ್ಗಳಲ್ಲಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಗ್ವಾದಗಳು ತೀವ್ರಗೊಂಡಿವೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಥೆಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೈಸ್ ಸಂಸ್ಥೆಯು ಕಾನೂನುಬಾಹಿರವಾಗಿ ಸಾರ್ವಜನಿಕರಿಂದ ಟೋಲ್ ಸಂಗ್ರಹಿಸುವ ಮೂಲಕ ಹಗಲು ದರೋಡೆ ಮಾಡುತ್ತಿದೆ. ಫ್ರೇಮ್ವರ್ಕ್ ಒಪ್ಪಂದ ಹಾಗೂ ಯೋಜನಾ ತಾಂತ್ರಿಕ ಒಪ್ಪಂದಗಳ ಉಲ್ಲಂಘನೆಯಾಗಿರುವ ಬಗ್ಗೆ ಕೋರ್ಟ್ ಮತ್ತು ಸದನ ಸಮಿತಿಗಳು ಬೊಟ್ಟು ಮಾಡಿವೆ. ಹೀಗಿದ್ದರೂ ನಿಯಮಬಾಹಿರವಾಗಿ ಟೋಲ್ ದರ ಏರಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವರು ಕಿಡಿಕಾರಿದ್ದಾರೆ.
"ಈಗಾಗಲೇ ಸುಮಾರು 2 ಸಾವಿರ ಕೋಟಿ ರೂ.ಗೂ ಅಧಿಕ ಟೋಲ್ ವಸೂಲಿಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪರ ಕೆಲಸ ಮಾಡುತ್ತಿದ್ದಾರೋ ಅಥವಾ ನೈಸ್ ಕಂಪನಿಯ ಮಾಲೀಕರಂತೆ ನಡೆದುಕೊಳ್ಳುತ್ತಿದ್ದಾರೋ" ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ಟೋಲ್ ಸಂಗ್ರಹವನ್ನು ತಡೆದು, ಶಾಸನ ರೂಪಿಸುವ ಮೂಲಕ ಇಡೀ ಯೋಜನೆಯನ್ನು ರಾಜ್ಯ ಸರ್ಕಾರವೇ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೇಂದ್ರ ಸಚಿವರ ಹೇಳಿಕೆ ಬೆನ್ನಲ್ಲೇ ದ್ವಿಚಕ್ರ ವಾಹನ ಸವಾರರು, ಕಾರು, ಲಾರಿ ಹಾಗೂ ಆಟೋ ಚಾಲಕರು ವೈರಲ್ ವಿಡಿಯೋ ತೋರಿಸಿ ಟೋಲ್ ಪಾವತಿಗೆ ನಿರಾಕರಿಸುತ್ತಿದ್ದಾರೆ.
"ಟೋಲ್ ಸಂಗ್ರಹಿಸಬಾರದು ಎಂದು ನ್ಯಾಯಾಲಯವಾಗಲಿ ಅಥವಾ ಸರ್ಕಾರವಾಗಲಿ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಸಚಿವರ ಹೇಳಿಕೆ ಆಧರಿಸಿ ಟೋಲ್ ಉಚಿತವಾಗುವುದಿಲ್ಲ" ಎಂದು ನೈಸ್ ಸಿಬ್ಬಂದಿ ವಾಹನ ಸವಾರರೊಂದಿಗೆ ವಾಗ್ವಾದ ನಡೆಸುವ ದೃಶ್ಯಗಳು ಸಾಮಾನ್ಯವಾಗಿವೆ. ಟೋಲ್ ಪಾವತಿಸದೆ ತೆರಳಿದರೆ ನಿಯಮಾನುಸಾರ ಕಾನೂನು ಕ್ರಮ ಹಾಗೂ ಎಫ್ಐಆರ್ ದಾಖಲಿಸಲಾಗುವುದು ನೈಸ್ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ.

