x

ಬಿಡದಿ ಭೂಸ್ವಾಧೀನ-ನೈಸ್ ಯೋಜನೆ; ಪ್ರತಿಷ್ಠೆಗಾಗಿ ಡಿಕೆಶಿ-ಎಚ್‌ಡಿಕೆ ಕಾದಾಟ

ಬಿಡದಿ ಟೌನ್‌ಶಿಪ್‌ ಹಾಗೂ ನೈಸ್ ಯೋಜನೆ ವ್ಯಾಪ್ತಿಯಲ್ಲಿ ಎರಡೂ ಕುಟುಂಬಗಳು ಹೊಂದಿರುವ ಅಪಾರ ಪ್ರಮಾಣದ ಭೂಮಿಯೇ ಈ ಕಾಳಗದ ಕೇಂದ್ರ ಬಿಂದು ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿವೆ.


ಕರ್ನಾಟಕ ರಾಜಕಾರಣದಲ್ಲಿ ನೈಸ್ ಹಾಗೂ ಬಿಡದಿ ಟೌನ್‌ಶಿಪ್‌ ಯೋಜನೆಗಳ ಸುತ್ತ ಎದ್ದಿರುವ ಬಿರುಗಾಳಿ ಕೇವಲ ಭೂಸ್ವಾಧೀನ ಅಥವಾ ರೈತರ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರೈತರ ಹಿತರಕ್ಷಣೆಯ ಹೋರಾಟದಂತೆ ಕಂಡರೂ, ಆಳದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಂಬದ ನಡುವಿನ ರಾಜಕೀಯ ಪ್ರತಿಷ್ಠೆ ಮತ್ತು ಒಕ್ಕಲಿಗ ಸಮುದಾಯದ ನಾಯಕತ್ವದ ಅಧಿಪತ್ಯಕ್ಕಾಗಿ ನಡೆಯುತ್ತಿರುವ ಕಾಳಗವಾಗಿದೆ.

ಬಿಡದಿ ಟೌನ್‌ಶಿಪ್‌ ಹಾಗೂ ನೈಸ್ ಯೋಜನೆ ವ್ಯಾಪ್ತಿಯಲ್ಲಿ ಎರಡೂ ಕುಟುಂಬಗಳು ಹೊಂದಿರುವ ಅಪಾರ ಪ್ರಮಾಣದ ಭೂಮಿಯೇ ಈ ಕಾಳಗದ ಕೇಂದ್ರ ಬಿಂದು ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿವೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ನೈಸ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಅದೇ ರೀತಿ, ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಬಿಡದಿ ಸ್ಮಾರ್ಟ್ ಟೌನ್‌ಶಿಪ್‌ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಈಗ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಭೂಸ್ವಾಧೀನಕ್ಕೆ ಮುಂದಾದಾಗ, ಕುಮಾರಸ್ವಾಮಿ ಅವರೇ ನೇರವಾಗಿ ಹೋರಾಟಕ್ಕಿಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಡದಿ ಸುತ್ತಮುತ್ತ ಡಿಕೆಶಿ ಕುಟುಂಬ ಹಾಗೂ ಬೆಂಬಲಿಗರು ಬೇನಾಮಿ ಆಸ್ತಿ ಹೊಂದಿದ್ದಾರೆ. ನೈಸ್ ಕಂಪನಿಯು ಒಪ್ಪಂದಕ್ಕಿಂತ ಹೆಚ್ಚಿನ ಭೂಮಿ ವಶಪಡಿಸಿಕೊಂಡಿದ್ದು, ಇದರಲ್ಲಿ ಡಿಕೆಶಿ ಹಿತಾಸಕ್ತಿಯೂ ಇದೆ ಎಂಬುದು ಜೆಡಿಎಸ್ ನಾಯಕರ ಆರೋಪವಾಗಿದೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕರು, ಕುಮಾರಸ್ವಾಮಿ ಕುಟುಂಬವೂ ಬಿಡದಿ ಸುತ್ತಮುತ್ತ ನೂರಾರು ಎಕರೆ ಭೂಮಿ ಹೊಂದಿದೆ ದೂರಿದ್ದು, ಇದೇ ವಿಚಾರ ಇಬ್ಬರು ನಾಯಕರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಮಧ್ಯೆ, 94ನೇ ವಯಸ್ಸಿನಲ್ಲೂ ಪಕ್ಷದ ಅಸ್ತಿತ್ವಕ್ಕಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾರ್ಗದರ್ಶನ ನೀಡುತ್ತಿದ್ದರೆ, ಇತ್ತ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ರೈತರ ಹೆಸರಿನಲ್ಲಿ ಯಾತ್ರೆ ಆರಂಭಿಸಿದ್ದಾರೆ.

ಹಳೆಯ ಮೈಸೂರು ಅಧಿಪತ್ಯಕ್ಕಾಗಿ ಹಪಾಹಪಿ

ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್‌ ನಡುವಿನ ಜಟಾಪಟಿಗೆ ಮತ್ತೊಂದು ಪ್ರಮುಖ ಆಯಾಮವೆಂದರೆ ಒಕ್ಕಲಿಗ ಸಮುದಾಯದ ಮೇಲಿನ ಹಿಡಿತ. ದಶಕಗಳಿಂದ ಹೆಚ್.ಡಿ. ದೇವೇಗೌಡರು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರೇ ಹಳೆಯ ಮೈಸೂರು ಭಾಗ ಹಾಗೂ ಒಕ್ಕಲಿಗ ಸಮುದಾಯದ ಅಧಿನಾಯಕರಾಗಿ ಗುರುತಿಸಿಕೊಂಡಿದ್ದರು.

ಆದರೆ, ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಸಮುದಾಯದಲ್ಲಿ ಬಲವಾದ ವರ್ಚಸ್ಸು ನಿರ್ಮಿಸಿಕೊಳ್ಳುತ್ತಿದ್ದು, ಮಠಾಧೀಶರು, ಮುಖಂಡರು ಹಾಗೂ ಯುವಜನರ ಮೇಲೆ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ, ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ರಾಜಕೀಯ ಅಸ್ತಿತ್ವದ ಭೀತಿ ಎದುರಾಗಿದೆ.

ರಾಮನಗರ, ಮಂಡ್ಯ, ಹಾಸನ, ಮೈಸೂರು, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಡಿ.ಕೆ. ಶಿವಕುಮಾರ್ ಪ್ರಭಾವ ಹೆಚ್ಚುತ್ತಿರುವುದು ಇಡೀ ಸಮುದಾಯವನ್ನೇ ರಾಜಕೀಯವಾಗಿ ಇಬ್ಭಾಗ ಮಾಡಿದೆ. ಇದಕ್ಕೆ ನಿದರ್ಶನವೆಂದರೆ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು ಮತ್ತು ರಾಮನಗರದಲ್ಲಿ ಜೆಡಿಎಸ್‌ಗೆ ಎದುರಾದ ಹಿನ್ನಡೆಗಳು. ಸೈದ್ಧಾಂತಿಕ ಚರ್ಚೆಗಳಿಂದ ದೂರ ಸರಿದಿರುವ ಈ ಸಮರವು, ರಿಯಲ್ ಎಸ್ಟೇಟ್, ಭೂ ಹಿಡಿತ ಮತ್ತು ಅಭಿವೃದ್ಧಿ ಯೋಜನೆಗಳ 'ಕ್ರೆಡಿಟ್' ಯಾರಿಗೆ ಸಲ್ಲಬೇಕು ಎಂಬುದರ ಸುತ್ತ ಸುತ್ತುತ್ತಿದೆ. ಒಟ್ಟಾರೆ ಈ ಘಟಾನುಘಟಿ ನಾಯಕರ ವಾಕ್ಸಮರ ಮತ್ತು ಪ್ರತಿಷ್ಠೆಯ ರಾಜಕಾರಣವು ರಾಜ್ಯದ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಪ್ರಾದೇಶಿಕ ರಾಜಕಾರಣದ ದಿಕ್ಕನ್ನೇ ಬದಲಿಸುತ್ತಿದೆ.

Read More
Next Story