
ನೇಪಾಳ ದುರಂತ: ಕನ್ನಡಿಗರ ಡಿಎನ್‌ಎ ಮಾದರಿ ಸಂಗ್ರಹಕ್ಕೆ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರ
ಪ್ರವಾಹದಲ್ಲಿ ಮೃತರಾದವರನ್ನು ಫೋಟೋ ಅಥವಾ ದೈಹಿಕ ಗುರುತುಗಳಿಂದ ಗುರುತಿಸುವುದು ಅಸಾಧ್ಯ. ಹೀಗಾಗಿ, ನೇಪಾಳ ಸರ್ಕಾರ, ಪ್ರತಿಯೊಂದು ಮೃತದೇಹದ 'ಡಿಎನ್‌ಎ ಪ್ರೊಫೈಲ್' ಸಿದ್ಧಪಡಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಂಭವಿಸಿದ ಅನಿರೀಕ್ಷಿತ ಪ್ರಕೃತಿ ವಿಕೋಪದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಇದರಲ್ಲಿ ರಾಜ್ಯದ ಪ್ರವಾಸಿಗರು ಮತ್ತು ಉದ್ಯೋಗಿಗಳೂ ಸೇರಿದ್ದಾರೆ ಎಂಬುದು ಆತಂಕಕಾರಿ ವಿಷಯವಾಗಿದೆ. ನಾಪತ್ತೆಯಾದ ಕನ್ನಡಿಗರ ಪತ್ತೆಗಾಗಿ ನೇಪಾಳ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ, ರಾಜ್ಯ ಸರ್ಕಾರವು ಯುದ್ಧೋಪಾದಿಯಲ್ಲಿ ಡಿಎನ್‌ಎ ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ಆರಂಭಿಸಿದೆ. ಇದಕ್ಕಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ನೋಡಲ್ ಕೇಂದ್ರವನ್ನಾಗಿ ನಿಯೋಜಿಸಿದೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸಾವಿನ ಸಂಖ್ಯೆ 1,295ರ ಗಡಿ ದಾಟಿದೆ. ಕೇವಲ ಜೀವಹಾನಿಯಷ್ಟೇ ಅಲ್ಲದೆ, 32 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ರಸ್ತೆಗಳು, ಸಂಪರ್ಕ ಸೇತುವೆಗಳು ಮತ್ತು ಮೂಲಸೌಕರ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ, ಮೃತದೇಹಗಳನ್ನು ಗುರುತಿಸುವುದು ನೇಪಾಳದ ರಕ್ಷಣಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಡಿಎನ್‌ಎ ಪರೀಕ್ಷೆಯ ಅವಶ್ಯಕತೆ ಏಕೆ?
ಪ್ರವಾಹದ ಅಬ್ಬರದಲ್ಲಿ ಕೊಚ್ಚಿಹೋದ ಅಥವಾ ಮಣ್ಣಿನಡಿ ಸಿಲುಕಿದ ಮೃತದೇಹಗಳು ಅತಿಯಾದ ಹಾನಿಗೊಳಗಾಗಿದ್ದು, ಅವುಗಳನ್ನು ಕೇವಲ ಫೋಟೋ ಅಥವಾ ದೈಹಿಕ ಗುರುತುಗಳ ಮೂಲಕ ಗುರುತಿಸುವುದು ಅಸಾಧ್ಯವಾಗಿದೆ. ಹೀಗಾಗಿ, ವಿಜ್ಞಾನದ ಮೊರೆ ಹೋಗಿರುವ ನೇಪಾಳ ಸರ್ಕಾರ, ಪ್ರತಿಯೊಂದು ಮೃತದೇಹದ ಡಿಎನ್‌ಎ ಪ್ರೊಫೈಲ್ ಸಿದ್ಧಪಡಿಸುತ್ತಿದೆ. ಈ ಡಿಎನ್‌ಎ ಪ್ರೊಫೈಲ್‌ಗಳನ್ನು ಅವರ ಕುಟುಂಬಸ್ಥರ ಡಿಎನ್‌ಎ ಮಾದರಿಯೊಂದಿಗೆ ತಾಳೆ ನೋಡುವುದರಿಂದ ಮಾತ್ರವೇ ಮೃತಪಟ್ಟವರು ಯಾರು ಎಂಬುದು ಖಚಿತವಾಗಲಿದೆ.
ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರವಾಗಿ ಆಯ್ಕೆ
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕಂದಾಯ ಇಲಾಖೆಯು ಜಂಟಿಯಾಗಿ ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಈ ಪ್ರಕ್ರಿಯೆಗಾಗಿ ನೋಡಲ್ ಕೇಂದ್ರವನ್ನಾಗಿ ನಿಯೋಜಿಸಿದೆ. ಈ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗೇಶ್ ಕುಪ್ಪಸ್ಟ್ ಮತ್ತು ಆರ್‌ಎಂಒ ಡಾ. ವಾದಿರಾಜ್ ಬಿ. ಪೊಕ್ಕನ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಕುಟುಂಬಸ್ಥರು ಇವರನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಪಡೆಯಬಹುದು.
ಡಿಎನ್‌ಎ ಮಾದರಿ ನೀಡಲು ಬರುವ ಪ್ರಥಮ ಹಂತದ ಸಂಬಂಧಿಕರು (ತಂದೆ, ತಾಯಿ, ಪತ್ನಿ, ಪತಿ, ಮಕ್ಕಳು) ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇತ್ತೀಚಿನ ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ., ಸರ್ಕಾರದಿಂದ ನೀಡಲಾದ ಮಾನ್ಯತೆ ಪಡೆದ ಗುರುತಿನ ಚೀಟಿ (ಆಧಾರ್ ಕಾರ್ಡ್ ಕಡ್ಡಾಯ), ಕಾಣೆಯಾದ ವ್ಯಕ್ತಿಯೊಂದಿಗೆ ತಮಗಿರುವ ರಕ್ತಸಂಬಂಧವನ್ನು ದೃಢೀಕರಿಸುವ ದಾಖಲೆಗಳನ್ನು ಒದಗಿಸಬೇಕಾಗಿದೆ.
ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಆಸ್ಪತ್ರೆಯಲ್ಲಿ ಸಂಬಂಧಿಕರಿಂದ ರಕ್ತದ ಮಾದರಿ ಅಥವಾ ಡಿಎನ್‌ಎ ಮಾದರಿ ಸಂಗ್ರಹಿಸಲಾಗುತ್ತದೆ. ಜಿಲ್ಲಾಡಳಿತ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಈ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ನಂತರ ಈ ಮಾದರಿಗಳನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅಲ್ಲಿಂದ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ನೇಪಾಳದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ. ಕಾಣೆಯಾದವರ ಕುಟುಂಬದವರಿಗೆ ಧೈರ್ಯ ತುಂಬಲು ಮತ್ತು ಮಾಹಿತಿ ಹಂಚಿಕೊಳ್ಳಲು ಕೆಎಸ್‌ಡಿಎಂಎ ಸಂಪೂರ್ಣ ಸಿದ್ಧತೆ ನಡೆಸಿದೆ. ಯಾವುದೇ ಗೊಂದಲಗಳಿದ್ದಲ್ಲಿ ಅಥವಾ ತುರ್ತು ಸಹಾಯ ಅಗತ್ಯವಿದ್ದಲ್ಲಿ ಸರ್ಕಾರಿ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

