
ನೇಪಾಳದಲ್ಲಿ ಕನ್ನಡಿಗರು ಅತಂತ್ರ: ವಿಶೇಷ ನೋಡಲ್ ಅಧಿಕಾರಿ ನೇಮಿಸಿ ಆದೇಶ
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆಗಿರುವ ಅಭಿಜಿತ್ ಗೌಡ ಅವರು ಸಂಕಷ್ಟದಲ್ಲಿರುವ ಕನ್ನಡಿಗರ ಪ್ರತಿಯೊಂದು ಮಾಹಿತಿ ಸಂಗ್ರಹಿಸಿ, ರಕ್ಷಣಾ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಿದ್ದಾರೆ.
ನೇಪಾಳದ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಮತ್ತು ನಾಪತ್ತೆಯಾಗಿರುವ ಕನ್ನಡಿಗರ ಪತ್ತೆ ಹಾಗೂ ಸುರಕ್ಷಿತವಾಗಿ ವಾಪಸ್ ಕರೆತರಲು ರಾಜ್ಯ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದೆ. ರಕ್ಷಣಾ ಕಾರ್ಯಾಚರಣೆಯ ಸಂಪೂರ್ಣ ಉಸ್ತುವಾರಿ ಹಾಗೂ ಸಮನ್ವಯಕ್ಕಾಗಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಅಭಿಜಿತ್ ಗೌಡ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ.
ವಿದೇಶಾಂಗ ಸಚಿವಾಲಯದೊಂದಿಗೆ ಸಮನ್ವಯ
ನೇಪಾಳದಲ್ಲಿ ಸಿಲುಕಿದ ಪ್ರವಾಸಿಗರು ಹಾಗೂ ಯಾತ್ರಿಕರ ಪತ್ತೆ ಮತ್ತು ರಕ್ಷಣೆಗಾಗಿ ನೇಮಕಗೊಂಡಿರುವ ಅಭಿಜಿತ್ ಗೌಡ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ದೆಹಲಿಯ ಕರ್ನಾಟಕ ಭವನದ ಅಧಿಕಾರಿಗಳು ಹಾಗೂ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಕನ್ನಡಿಗರ ಪ್ರತಿಯೊಂದು ಮಾಹಿತಿ ಸಂಗ್ರಹಿಸಿ, ರಕ್ಷಣಾ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಿದ್ದಾರೆ.
14 ಮಂದಿಗೆ ತೀವ್ರ ಶೋಧ
ದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಸಮೀರ್ ಶುಕ್ಲಾ ಅವರಿಂದ ನೇಪಾಳದಲ್ಲಿರುವ ಕನ್ನಡಿಗರ ಸ್ಥಿತಿಗತಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ನೇಪಾಳದಲ್ಲಿ ಕನ್ನಡಿಗರ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸದ್ಯ ನೇಪಾಳ ಪ್ರವಾಸ ಹಾಗೂ ಧಾರ್ಮಿಕ ಯಾತ್ರೆಗಾಗಿ ತೆರಳಿದ್ದ 33 ಕನ್ನಡಿಗರ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಇಬ್ಬರು ಈಗಾಗಲೇ ರಾಜ್ಯಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ. ಉಳಿದವರಲ್ಲಿ ಕೆಲವರನ್ನು ಸಂಪರ್ಕಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ. ಇನ್ನು 14 ಮಂದಿ ನಾಪತ್ತೆಯಾಗಿದ್ದು ಅವರ ಪತ್ತೆಗೆ ಹುಡುಕಾಟ ನಡೆಯುತ್ತಿದೆ.
ದೆಹಲಿಯಿಂದ ಉಚಿತ ಪ್ರಯಾಣ ವ್ಯವಸ್ಥೆ
ನೇಪಾಳ ಗಡಿ ಭಾಗ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲ್ಪಡುವ ಕನ್ನಡಿಗರನ್ನು ಮೊದಲಿಗೆ ದೆಹಲಿಗೆ ಕರೆತರಲಾಗುತ್ತದೆ. ದೆಹಲಿ ತಲುಪಿದ ತಕ್ಷಣ ಅವರನ್ನು ಸ್ವಾಗತಿಸಿ, ಅಲ್ಲಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಉಚಿತವಾಗಿ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.
ನೇಪಾಳದಲ್ಲಿರುವ ಪ್ರತಿಯೊಬ್ಬ ಕನ್ನಡಿಗರ ಸುರಕ್ಷತೆ ನಮಗೆ ಮುಖ್ಯ. ದೆಹಲಿಗೆ ಆಗಮಿಸುವ ಕನ್ನಡಿಗರಿಗೆ ಅಗತ್ಯವಿದ್ದರೆ ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ವಸತಿ, ಆಹಾರ, ತುರ್ತು ವೈದ್ಯಕೀಯ ನೆರವು ಹಾಗೂ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ಅಲ್ಲಿಂದ ವಿಮಾನ ಅಥವಾ ರೈಲು ಮಾರ್ಗವಾಗಿ ಬೆಂಗಳೂರಿಗೆ ಕರೆತರಲಾಗುವುದು” ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ನೆರವಿಗೆ ಸಹಾಯವಾಣಿ ಕಾರ್ಯಾಚರಣೆ
ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ನೇಪಾಳ ಸ್ಥಳೀಯ ಆಡಳಿತದ ಜೊತೆ ಸಮನ್ವಯ ಸಾಧಿಸಿ, ಪ್ರವಾಹದಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್ ಹಾಗೂ ಭೂಮಾರ್ಗದ ಮುಖಾಂತರ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲು ರಕ್ಷಣಾ ಪಡೆಗಳು ಶ್ರಮಿಸುತ್ತಿವೆ. ಕನ್ನಡಿಗರ ಕುಟುಂಬಸ್ಥರು ಧೈರ್ಯದಿಂದಿರಲು ಹಾಗೂ ಯಾವುದೇ ಮಾಹಿತಿಗಾಗಿ ರಾಜ್ಯ ಸರ್ಕಾರದ ಗೃಹ ಮತ್ತು ಕಂದಾಯ ಇಲಾಖೆ ಸಹಾಯವಾಣಿ ಸಂಪರ್ಕಿಸಲು ಕೋರಲಾಗಿದೆ.

