ನೇಪಾಳ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 17 ಕನ್ನಡಿಗರ ಪೈಕಿ 12 ಮಂದಿ ಸಂಪರ್ಕಕ್ಕೆ
x

ನೇಪಾಳ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 17 ಕನ್ನಡಿಗರ ಪೈಕಿ 12 ಮಂದಿ ಸಂಪರ್ಕಕ್ಕೆ

ನೇಪಾಳ ಪ್ರವಾಸಕ್ಕೆ ತೆರಳಿದ್ದ ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಐವರು ಪ್ರವಾಹದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.


Click the Play button to hear this message in audio format

ನೇಪಾಳದಲ್ಲಿ ಭೀಕರ ಪ್ರವಾಹದಲ್ಲಿ ಕನ್ನಡಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನೇಪಾಳಕ್ಕೆ ತೆರಳಿದ್ದ ಹಲವರು ಪ್ರವಾಹದಲ್ಲಿ ಸಿಲುಕಿದ್ದು, ಸದ್ಯದ ಮಾಹಿತಿ ಪ್ರಕಾರ ನಾಪತ್ತೆಯಾಗಿದ್ದ 17 ಕನ್ನಡಿಗರ ಪೈಕಿ 12ಜನ ಸಂಪರ್ಕಕ್ಕೆ ಸಿಕ್ಕಿದ್ದಾರೆ ಎನ್ನಲಾಗಿದೆ. ಗುರುವಾರ ಸಂಜೆವರೆಗಿನ ಮಾಹಿತಿ ಪ್ರಕಾರ, 389ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 288 ಭಾರತೀಯರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಐವರು ಪ್ರವಾಹದಲ್ಲಿ ಸಿಲುಕಿರುವ ಮಾಹಿತಿ

ನೇಪಾಳ ಪ್ರವಾಸಕ್ಕೆ ತೆರಳಿದ್ದ ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಐವರು ಪ್ರವಾಹದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸಿಲುಕಿರುವ ಐವರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ.

ನೇಪಾಳದಲ್ಲಿ ಹಾವೇರಿ ಜಿಲ್ಲೆಯ 12 ಕನ್ನಡಿಗರು ಸುರಕ್ಷಿತ

ಇನ್ನು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳಿಗೆ ಸೇರಿದ 12 ಮಂದಿ ಪ್ರವಾಸ ನಿಮಿತ್ತ ನೇಪಾಳಕ್ಕೆ ತೆರಳಿದ್ದು, ಅಲ್ಲಿನ ತೀವ್ರ ಪ್ರಕೃತಿ ವಿಕೋಪದ ನಡುವೆಯೂ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಗುಂಪಿನ ಸದಸ್ಯರು ಶೀಘ್ರದಲ್ಲೇ ನೇಪಾಳದ ಸೋನೌಲಿ ಪ್ರದೇಶಕ್ಕೆ ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ಕರ್ನಾಟಕಕ್ಕೆ ಮರಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಪ್ರವಾಸಿಗರೊಂದಿಗೆ ತೆರಳಿರುವ ಕನ್ನಡಿಗರು ಮಾಹಿತಿ ನೀಡಿದ್ದಾರೆ.

ಪ್ರವಾಹ, ಭೂಕುಸಿತ, ರಸ್ತೆ ತಡೆ ಸೇರಿದಂತೆ ವಿವಿಧ ಕಾರಣಗಳಿಂದ ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಿಲುಕಿರುವ ಕರ್ನಾಟಕದ ನಿವಾಸಿಗಳನ್ನು ಪತ್ತೆಹಚ್ಚಿ ಅವರಿಗೆ ನೆರವು ನೀಡಲು ರಾಜ್ಯ ಸರ್ಕಾರ ಕಾರ್ಯಾಚರಣೆ ಚುರುಕುಗೊಳಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್ ಅವರು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಸಂತ್ರಸ್ತ ಪ್ರದೇಶಗಳಲ್ಲಿರುವ ಕನ್ನಡಿಗರ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ವಿದೇಶಾಂಗ ಸಚಿವಾಲಯ ಹಾಗೂ ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಿಲುಕಿರುವವರ ವಿವರಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರ ವಿಶೇಷ ನಮೂನೆಯೊಂದನ್ನು ಸಿದ್ಧಪಡಿಸಿದೆ. ಇದರಲ್ಲಿ ಸದ್ಯದ ಸ್ಥಳ ಮತ್ತು ಸ್ಥಿತಿ, ಸಂಪರ್ಕ ವಿವರಗಳು, ಪ್ರವಾಸ ಅಥವಾ ಗುಂಪಿನ ಮಾಹಿತಿ ಹಾಗೂ ಟೂರ್ ಆಪರೇಟರ್‌ಗಳ ವಿವರಗಳನ್ನು ದಾಖಲಿಸಲಾಗುತ್ತದೆ. ಈ ಮಾಹಿತಿಯನ್ನು ವಿದೇಶಾಂಗ ಸಚಿವಾಲಯ, ನೇಪಾಳದ ಭಾರತೀಯ ರಾಯಭಾರ ಕಚೇರಿ, ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿ, ಇತರೆ ಸಂಬಂಧಿತ ಅಧಿಕಾರಿಗಳು ಮತ್ತು ಪ್ರವಾಸ ಆಯೋಜಕರೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ, ಸ್ಥಳಾಂತರ ಮತ್ತು ಇತರ ನೆರವು ಕಾರ್ಯಗಳಿಗೆ ಬಳಸಲಾಗುತ್ತದೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಪರಿಸ್ಥಿತಿಯನ್ನು 24 ಗಂಟೆಗಳ ಕಾಲ ನಿಗಾ ವಹಿಸಿದೆ. ಇದೇ ವೇಳೆ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡಗಳು ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ. SEOC ಮತ್ತು ಕರ್ನಾಟಕ ಭವನವು ವಿದೇಶಾಂಗ ಸಚಿವಾಲಯದ ಕ್ಷಿಪ್ರ ಪ್ರತಿಕ್ರಿಯೆ ಘಟಕಗಳು, ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ಮಿಷನ್‌ಗಳು ಹಾಗೂ ಕೇಂದ್ರ ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯೊಂದಿಗೂ ಸಂಪರ್ಕದಲ್ಲಿವೆ.

ಸಿಎಂ ಡಿ.ಕೆ. ಶಿವಕುಮಾರ್ ಮಲ್ಲಿನಾಥ್ ಜೊತೆ ವಿಡಿಯೋ ಕರೆ

ಇದೇ ವೇಳೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ನೇಪಾಳದಲ್ಲಿ ಪ್ರವಾಹದ ಪರಿಣಾಮದಿಂದ ಸಿಲುಕಿದ್ದ ಕರ್ನಾಟಕ ಮೂಲದ ಮಲ್ಲಿನಾಥ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿ ಧೈರ್ಯ ತುಂಬಿದರು.

ಸದ್ಯ ನವದೆಹಲಿಯ ಪ್ರವಾಸದಲ್ಲಿರುವ ಶಿವಕುಮಾರ್, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವವರು ಆತಂಕಕ್ಕೊಳಗಾಗಬಾರದು ಹಾಗೂ ಸ್ವಯಂಪ್ರೇರಿತವಾಗಿ ಸುರಕ್ಷಿತ ಸ್ಥಳಗಳನ್ನು ತೊರೆದು ಹೊರಡಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದರು.

“ಧೈರ್ಯವಾಗಿರಿ. ನೀವು ಸುರಕ್ಷಿತವಾಗಿ ತಂಗಿರುವ ಸ್ಥಳವನ್ನು ಬಿಟ್ಟು ಹೊರಡಲು ಪ್ರಯತ್ನಿಸಬೇಡಿ. ನಮ್ಮ ಸರ್ಕಾರ ನಿಮ್ಮೊಂದಿಗೆ ಇದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ,” ಎಂದು ಮಲ್ಲಿನಾಥ್ ಅವರಿಗೆ ಸಿಎಂ ಭರವಸೆ ನೀಡಿದರು.

ವಿಪತ್ತಿನ ಬಳಿಕ ಸಂಪರ್ಕ ಕಡಿತಗೊಂಡಿರುವ ಅಥವಾ ಇರುವ ಸ್ಥಳದ ಮಾಹಿತಿ ಲಭ್ಯವಾಗದ ಕರ್ನಾಟಕದ ನಿವಾಸಿಗಳೊಂದಿಗೆ ಸಂಪರ್ಕ ಸಾಧಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದೂ ಶಿವಕುಮಾರ್ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ನೆರವು ನೀಡಲಿ: ಖರ್ಗೆ ಆಗ್ರಹ

ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೇಪಾಳದ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅಗತ್ಯ ನೆರವು ಮತ್ತು ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

“ಕರ್ನಾಟಕದವರಷ್ಟೇ ಅಲ್ಲ, ದೇಶದ ಯಾವುದೇ ಭಾಗದ ಸಂತ್ರಸ್ತರ ಕುಟುಂಬಗಳಿಗೂ ಅಗತ್ಯ ನೆರವು ಮತ್ತು ಪರಿಹಾರ ನೀಡಬೇಕು. ಜೊತೆಗೆ ಸಂಕಷ್ಟದಲ್ಲಿರುವ ನೇಪಾಳಕ್ಕೂ ಭಾರತ ನೆರವಿನ ಹಸ್ತ ಚಾಚಬೇಕು,” ಎಂದು ಖರ್ಗೆ ಆಗ್ರಹಿಸಿದ್ದಾರೆ.

Read More
Next Story