x

ಕಾಕ್ರೋಚ್‌ ಫೈಟ್:‌ ಬಿಜೆಪಿ-ಕಾಂಗ್ರೆಸ್‌ ಕಾದಾಟ, 150 ವರ್ಷಗಳ ದಾಖಲೆ ಮುರಿದ ಬರಗಾಲ!, ಸಾಗರ ರಕ್ಷಣೆಗೆ ಹೊಸ ಬಲ ಐಎನ್‌ಎಸ್ ಮಾಲ್ವನ್

ಬಿಜೆಪಿ ಶಾಸಕನ ಮೇಲೆ ಮೊಟ್ಟೆ ದಾಳಿ, ಪ್ರತಿಭಟನಾಕಾರರ ಬಂಧನ, ರಾಜ್ಯದಲ್ಲಿ ನೀರಿಗಾಗಿ ಪರದಾಟ, ಬೆಳೆ ನಷ್ಟದ ಆತಂಕ, ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೇರ್ಪಡೆಯಾದ ಯುದ್ಧನೌಕೆ.


Click the Play button to hear this message in audio format

ದೇಶಾದ್ಯಂತ ಸುದ್ದಿಯಾಗಿರುವ ನೀಟ್ ಪರೀಕ್ಷಾ ಅಕ್ರಮದ ವಿಚಾರ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪರೀಕ್ಷೆಯಲ್ಲಿ ನಡೆದಿರುವ ಅವ್ಯವಸ್ಥೆಗಳನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟಗಳು ಬೆಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಸಂಘರ್ಷ ಬೀದಿಗೆ ಬಂದಿದೆ. ಈ ನಡುವೆ, ವಿದ್ಯಾರ್ಥಿಗಳ ಸಂಘಟನೆಗಳು ಸಹ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಮುಂದುವರಿಸಿವೆ.

ದೆಹಲಿಯಲ್ಲಿ ನೀಟ್ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ಖಂಡಿಸಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದರ ಬಿಸಿ ಬೆಂಗಳೂರಿಗೂ ತಟ್ಟಿತು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ಬಿಜೆಪಿ ಕಚೇರಿಯ ಕಡೆಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಕಾಂಗ್ರೆಸ್ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ, ರಾಜ್ಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೆಪಿಸಿಸಿ ಕಚೇರಿಯತ್ತ ನುಗ್ಗಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ತೀವ್ರವಾಗಿ ತಡೆದರು. ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಆರ್. ಅಶೋಕ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಇನ್ನು, ಫ್ರೀಡಂಪಾರ್ಕ್‌ನಲ್ಲಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಮುಂದುವರಿದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ನಡೆಸಿರುವುದು ಖಂಡನೀಯ. ನೀಟ್‌ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯವು ಭೀಕರ ಬರಗಾಲದ ಸನ್ನಿವೇಶವನ್ನು ಎದುರಿಸುತ್ತಿದೆ. ಮಳೆ ಕೈಕೊಟ್ಟಿರುವುದು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದು ರಾಜ್ಯದ ರೈತಾಪಿ ವರ್ಗ ಹಾಗೂ ನಾಗರಿಕರ ಪಾಲಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಈ ಸಂಬಂಧ ರಾಜ್ಯ ಸರ್ಕಾರ ಸಭೆಗಳನ್ನು ನಡೆಸುತ್ತಿವೆ. ಚಿಕ್ಕಬಳ್ಳಾಪುರದಲ್ಲಿ ಬರ ನಿರ್ವಹಣೆ ಸಂಬಂಧ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಭೆ ನಡೆಸಿದರು. ಈ ಸಂದರ್ಭದಲ್ಲಿ 150 ವರ್ಷದ ಹಿಂದಿನ ಬರದ ಪರಿಸ್ಥಿತಿ ರಾಜ್ಯದಲ್ಲಿ ಎದುರಾಗಿದೆ. ಭಯಾನಕ ಚಿತ್ರಣ ನಮ್ಮ‌ಮುಂದೆ ಕಾಣಿಸುತ್ತಿದೆ‌. ಕುಡಿಯುವ ನೀರಿಗೆ ಸಂಚಕಾರ ಬರುವ ರೀತಿಯಲ್ಲಿ ಪ್ರಕೃತಿಯ ಬೆಳವಣಿಗೆ ಆಗಿದೆ‌. ಪ್ರತಿವರ್ಷ ಜೂನ್ ನಂತರ ಹೆಚ್ಚು ಮಳೆ ಬರುವುದು ವಾಡಿಕೆ. ವಾಡಿಕೆಯಷ್ಟು ಮಳೆಯಾಗದ ಕಾರಣ ಯಾವುದೇ ಬೆಳೆಗಳನ್ನು ಹಾಕಲು ಸಾಧ್ಯವಾಗಿಲ್ಲ.‌ರಾಜ್ಯದಾದ್ಯಂತ ಶೇ. 40ಕ್ಕಿಂತ ಕಡಿಮೆ ಬಿತ್ತನೆಯಾಗಿದೆ. ಅದು ಕೂಡ ಒಣಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ನಷ್ಟವಾಗಿದೆ‌ಎಂದು ಹೇಳಿದರು.

ಇನ್ನು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಮಳೆ ಇಲ್ಲದೆ ರೈತರು ಸಂಕಷ್ಟಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಬರ ಘೋಷಣೆ ಮಾಡಿ ಪ್ಯಾಕೇಜ್‌ಪ್ರಕಟಿಸಬೇಕೆಂಬ ಆಗ್ರಹವನ್ನು ಸಹ ಮಾಡಿದ್ದಾರೆ.

ನೌಕಪಡೆಗೆ ಐಎನ್‌ಎಸ್ ಮಾಲ್ವನ್ ಯುದ್ಧನೌಕೆ ಬಲ

ಭಾರತೀಯ ನೌಕಾಪಡೆಯು ತನ್ನ ಜಲಸೀಮೆಯ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್ ಮಾಲ್ವನ್ ಯುದ್ಧನೌಕೆಯು ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಭಾರತದ 'ಆತ್ಮನಿರ್ಭರ ಭಾರತ' ಅಭಿಯಾನದ ಯಶಸ್ಸಿನ ಪ್ರತೀಕವಾಗಿದೆ.

ಸಮುದ್ರದ ಆಳದಲ್ಲಿ ಅವಿತಿರುವ ಶತ್ರುಗಳ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ಮಾಹೆ ಶ್ರೇಣಿಯ ಎರಡನೇ ಯುದ್ಧನೌಕೆಯೇ ಐಎನ್‌ಎಸ್ ಮಾಲ್ವನ್. ಕರಾವಳಿ ತೀರದ ರಕ್ಷಣಾ ಕಾರ್ಯಾಚರಣೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ನೌಕೆಯು, ಭಾರತದ ನೌಕಾ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯುವತ್ತ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. ಐಎನ್‌ಎಸ್ ಮಾಲ್ವನ್ ನೌಕೆಯು ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡಿದೆ. ಈ ನೌಕೆಯ ಅತ್ಯಂತ ಮಹತ್ವದ ಅಂಶವೆಂದರೆ, ಇದರಲ್ಲಿ ಬಳಸಿರುವ ಶೇ. 80ಕ್ಕಿಂತ ಹೆಚ್ಚು ಉಪಕರಣಗಳು ಮತ್ತು ತಂತ್ರಜ್ಞಾನಗಳು ಸಂಪೂರ್ಣ ಸ್ವದೇಶಿ ನಿರ್ಮಿತವಾದವು. ಇದು ಭಾರತೀಯ ರಕ್ಷಣಾ ಸಂಸ್ಥೆಗಳು, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಸಾಮೂಹಿಕ ಪ್ರಯತ್ನದ ಫಲವಾಗಿದೆ. ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶೀಯ ಉತ್ಪಾದನೆಗೆ ಆದ್ಯತೆ ನೀಡಿರುವುದು ರಕ್ಷಣಾ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಎತ್ತಿ ತೋರಿಸುತ್ತದೆ.

Read More
Next Story