NEET ರದ್ದು, CET ಮರುಜಾರಿ ಬೇಡಿಕೆ ತೀವ್ರ: ರಾಜ್ಯದಲ್ಲಿ ಪ್ರತಿಭಟನೆ ಕಾವು ಮತ್ತಷ್ಟು ತೀವ್ರ
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಹಲವು ದಿನಗಳಿಂದ NEET ಬೇಡ, CET ಬೇಕು" ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET ಮತ್ತೊಮ್ಮೆ ತೀವ್ರ ವಿವಾದದ ಕೇಂದ್ರಬಿಂದುವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ಪರೀಕ್ಷಾ ಪ್ರಕ್ರಿಯೆಯಲ್ಲಿನ ಅಕ್ರಮಗಳು ಹಾಗೂ ಕೀ ಉತ್ತರಗಳ ಗೊಂದಲಗಳ ನಡುವೆ NEET ಪರೀಕ್ಷೆಯನ್ನು ರದ್ದುಗೊಳಿಸಿ ರಾಜ್ಯಮಟ್ಟದ CET ವ್ಯವಸ್ಥೆಯನ್ನು ಮರುಜಾರಿಗೆ ತರಬೇಕು ಎಂಬ ಆಗ್ರಹ ದಿನದಿಂದ ದಿನಕ್ಕೆ ಬಲ ಪಡೆಯುತ್ತಿದೆ.
ದೆಹಲಿ ಕೇಂದ್ರವಾಗಿಸಿಕೊಂಡು ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಈಗ ಹಲವು ರಾಜ್ಯಗಳಿಗೆ ವಿಸ್ತರಿಸಿದ್ದು, ಶಿಕ್ಷಣ ವ್ಯವಸ್ಥೆ, ವೈದ್ಯಕೀಯ ಪ್ರವೇಶ ನೀತಿ ಹಾಗೂ ಕೇಂದ್ರ-ರಾಜ್ಯ ಅಧಿಕಾರ ಹಂಚಿಕೆ ಕುರಿತ ರಾಷ್ಟ್ರಮಟ್ಟದ ಚರ್ಚೆಗೆ ಕಾರಣವಾಗಿದೆ.
ಒಂದೆಡೆ NEET ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಕೇವಲ ಅಕ್ರಮಗಳ ತನಿಖೆ ಸಾಕಾಗುವುದಿಲ್ಲ, ವೈದ್ಯಕೀಯ ಪ್ರವೇಶ ವ್ಯವಸ್ಥೆಯನ್ನೇ ಮರುಪರಿಶೀಲಿಸಬೇಕು ಎಂದು ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘಟನೆಗಳು ಆಗ್ರಹಿಸುತ್ತಿವೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಹಲವು ದಿನಗಳಿಂದ "NEET ಬೇಡ, CET ಬೇಕು" ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರು ಆನ್‌ಲೈನ್ ಸಹಿ ಸಂಗ್ರಹ (ಪಿಟಿಷನ್) ಅಭಿಯಾನವನ್ನೂ ಆರಂಭಿಸಿದ್ದು, NEET ವ್ಯವಸ್ಥೆಯಿಂದ ಅನ್ಯಾಯವಾಗಿದೆ ಎಂದು ಭಾವಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲ್ಲಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲೂ ವಿರೋಧ
ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವೂ NEET ವಿರುದ್ಧ ಬಹಿರಂಗ ಹೋರಾಟ ಆರಂಭಿಸಿದೆ. ಕರ್ನಾಟಕದಲ್ಲಿಯೂ ವೈದ್ಯಕೀಯ ಪ್ರವೇಶಕ್ಕೆ ಮತ್ತೆ CET ಮಾದರಿಯನ್ನೇ ಅಳವಡಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಬಲ ಪಡೆಯುತ್ತಿದೆ.
"ಒಂದೇ ಪರೀಕ್ಷೆ ದೇಶಕ್ಕೆ ಸೂಕ್ತವಲ್ಲ" ಎಂಬ ವಾದ
ಪ್ರತಿಭಟನೆಯಲ್ಲಿ ಮಾತನಾಡಿದ ಶಿಕ್ಷಣ ಹೋರಾಟಗಾರರು, 150 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಒಂದೇ ಕೇಂದ್ರಿಕೃತ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.ಪರೀಕ್ಷಾ ವ್ಯವಸ್ಥೆಯನ್ನು ವಿಕೇಂದ್ರೀಕರಿಸಬೇಕು. ವಿವಿಧ ರಾಜ್ಯಗಳ ಶಿಕ್ಷಣ ವ್ಯವಸ್ಥೆ, ಪಠ್ಯಕ್ರಮ ಮತ್ತು ಸಾಮಾಜಿಕ ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ರಾಜ್ಯಗಳಿಗೆ ಸ್ವಾಯತ್ತತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಕ್ರಮಗಳು ನಡೆದಾಗ ಕೇವಲ ಸಚಿವರ ರಾಜೀನಾಮೆ ಕೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮೂಲ ಸಮಸ್ಯೆಯೇ NEET ವ್ಯವಸ್ಥೆಯಲ್ಲಿದೆ ಎಂದು ಕೆಲ ಪ್ರತಿಭಟನಾಕಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದ CET ಮಾದರಿ ಮತ್ತೆ ಜಾರಿಗೆ ಬರಬೇಕೆ?
ವೃತ್ತಿಪರ ಶಿಕ್ಷಣಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯಾದ CET ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕ. ಕ್ಯಾಪಿಟೇಶನ್ ಫೀಸ್, ಡೊನೇಷನ್ ಹಾಗೂ ಸೀಟು ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆರಂಭವಾದ ಈ ವ್ಯವಸ್ಥೆ ಹಲವು ವರ್ಷಗಳ ಕಾಲ ಮೆರಿಟ್ ಆಧಾರಿತ ಪ್ರವೇಶಕ್ಕೆ ಮಾದರಿಯಾಗಿ ಪರಿಗಣಿಸಲ್ಪಟ್ಟಿತ್ತು. ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶವೂ CET ವ್ಯವಸ್ಥೆಯಲ್ಲಿತ್ತು ಎಂದು ಅದರ ಬೆಂಬಲಿಗರು ವಾದಿಸುತ್ತಿದ್ದಾರೆ.
ಸ್ಥಳೀಯ ವಿದ್ಯಾರ್ಥಿಗಳ ಅವಕಾಶಗಳ ಬಗ್ಗೆ ಆತಂಕ
NEET ಜಾರಿಯಾದ ಬಳಿಕ ಆಲ್ ಇಂಡಿಯಾ ಕೋಟಾದಡಿ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೂ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತಿರುವುದರಿಂದ ಸ್ಥಳೀಯ ವಿದ್ಯಾರ್ಥಿಗಳ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹಲವು ಸಂಘಟನೆಗಳು ಆರೋಪಿಸಿವೆ. ಇದೇ ಕಾರಣಕ್ಕೆ ರಾಜ್ಯದ ವೈದ್ಯಕೀಯ ಪ್ರವೇಶವನ್ನು ಮತ್ತೆ CET ಮೂಲಕವೇ ನಡೆಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಶಿಕ್ಷಣ ಮತ್ತೆ ರಾಜ್ಯ ಪಟ್ಟಿಗೆ ಸೇರಬೇಕು ಎಂಬ ಬೇಡಿಕೆ
ಶಿಕ್ಷಣ ನೀತಿಯ ಕುರಿತ ಚರ್ಚೆಯೂ ಇದೀಗ ತೀವ್ರಗೊಂಡಿದೆ. ಸ್ವಾತಂತ್ರ್ಯ ನಂತರ ಶಿಕ್ಷಣವು ರಾಜ್ಯ ಪಟ್ಟಿಯಲ್ಲಿದ್ದರೂ, 1976ರ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಅದನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು. ಇದರ ಪರಿಣಾಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಾಯಿತು.
ಈಗ ಶಿಕ್ಷಣವನ್ನು ಮತ್ತೆ ರಾಜ್ಯ ಪಟ್ಟಿಗೆ ಸೇರಿಸಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂಬ ಬೇಡಿಕೆಯೂ ಪ್ರತಿಭಟನೆಗಳ ಪ್ರಮುಖ ಭಾಗವಾಗಿದೆ.
NEET ಪರ-ವಿರೋಧ ವಾದಗಳು
NEET ಪರವಾಗಿ ಮಾತನಾಡುವವರು ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸುವುದರಿಂದ ಸಮಾನ ಅವಕಾಶ ಹಾಗೂ ಏಕರೂಪದ ಮೆರಿಟ್ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ವಾದಿಸುತ್ತಾರೆ. ಆದರೆ ವಿರೋಧಿಗಳು ವಿವಿಧ ರಾಜ್ಯಗಳ ವಿಭಿನ್ನ ಪಠ್ಯಕ್ರಮ, ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು, ಕೋಚಿಂಗ್ ಕೇಂದ್ರಗಳ ಮೇಲಿನ ಹೆಚ್ಚುತ್ತಿರುವ ಅವಲಂಬನೆ ಹಾಗೂ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನ್ಯಾಯವನ್ನು ಉಲ್ಲೇಖಿಸಿ ಈ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ.
ರಾಷ್ಟ್ರಮಟ್ಟದ ಚರ್ಚೆಯಾಗಿ ರೂಪಾಂತರ
ಒಟ್ಟಾರೆ NEET ಕುರಿತ ಚರ್ಚೆ ಈಗ ಕೇವಲ ವೈದ್ಯಕೀಯ ಪ್ರವೇಶ ಪರೀಕ್ಷೆಯ ವಿಚಾರವಾಗಿ ಉಳಿದಿಲ್ಲ. ಶಿಕ್ಷಣದ ಸ್ವಾಯತ್ತತೆ, ರಾಜ್ಯಗಳ ಅಧಿಕಾರ, ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಹಾಗೂ ವೈದ್ಯಕೀಯ ಪ್ರವೇಶ ವ್ಯವಸ್ಥೆಯ ಭವಿಷ್ಯದ ಕುರಿತ ರಾಷ್ಟ್ರಮಟ್ಟದ ಚರ್ಚೆಯಾಗಿ ಇದು ರೂಪಾಂತರಗೊಂಡಿದೆ.
ಈ ಕುರಿತು ಅಂತಿಮ ನಿರ್ಧಾರ ಸರ್ಕಾರಗಳ ಕೈಯಲ್ಲಿದ್ದರೂ, ಅದರ ಪರಿಣಾಮವನ್ನು ನೇರವಾಗಿ ಅನುಭವಿಸುವವರು ದೇಶದ ಲಕ್ಷಾಂತರ ವಿದ್ಯಾರ್ಥಿಗಳೇ ಆಗಿದ್ದಾರೆ.

