
Interview: ಎನ್ಸಿಇಆರ್ಟಿ ಕನ್ನಡ ಪಠ್ಯಪುಸ್ತಕ ವಿವಾದ: ಸಾಂಸ್ಕೃತಿಕ ದಬ್ಬಾಳಿಕೆ: ಡಾ. ನಿರಂಜನಾರಾಧ್ಯ
ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ರಾಜ್ಯದಲ್ಲಿ ಪಠ್ಯಪುಸ್ತಕಗಳನ್ನು ರಚಿಸುವ ಜವಾಬ್ದಾರಿ ಮತ್ತು ಅಧಿಕಾರ ಡಿಎಸ್‌ಇಆರ್‌ಟಿ ಸಂಸ್ಥೆಗಿದೆ. NCERT, ರಾಜ್ಯದ ಶೈಕ್ಷಣಿಕ ತಜ್ಞರನ್ನು ಸಂಪೂರ್ಣವಾಗಿ ಹೊರಗಿಟ್ಟಿದೆ ಎಂಬ ಅಭಿಪ್ರಾಯವನ್ನು ನಿರಂಜನಾರಾಧ್ಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್‌ಇ ಹಾಗೂ ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿರುವ ನೂತನ ಕನ್ನಡ ಪಠ್ಯಪುಸ್ತಕ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮೂರನೇ ಭಾಷೆಯಾಗಿ ಕನ್ನಡವನ್ನು ಕಲಿಯುವ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ 'ಕೃಷ್ಣ' ಹೆಸರಿನ ಈ ಪಠ್ಯಪುಸ್ತಕದಲ್ಲಿ ಕನ್ನಡದ ಅಸ್ಮಿತೆಯನ್ನು ಕಡೆಗಣಿಸಲಾಗಿದೆ ಮತ್ತು ಸಾಂಸ್ಕೃತಿಕ ದಬ್ಬಾಳಿಕೆ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ವಿಚಾರವಾಗಿ ಪ್ರಮುಖ ಶಿಕ್ಷಣ ತಜ್ಞ ಹಾಗೂ ಶಿಕ್ಷಣದ ಹಕ್ಕಿಗಾಗಿ ಜನಾಂದೋಲನ ಸಮನ್ವಯ ಸಂಸ್ಥೆಯ ಪ್ರಧಾನ ಸಂಚಾಲಕರಾದ ಡಾ. ನಿರಂಜನಾರಾಧ್ಯ ಪಿ.ವಿ. ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪಠ್ಯಪುಸ್ತಕದ ಮೂಲಕ ಹಿಂಬಾಗಿಲಿನಿಂದ ಕೇಸರೀಕರಣ ಮತ್ತು ಆಹಾರ ರಾಜಕೀಯವನ್ನು ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವಿವಾದಾತ್ಮಕ ಪಠ್ಯಪುಸ್ತಕದಲ್ಲಿರುವ ಪ್ರಮುಖ ಆಕ್ಷೇಪಾರ್ಹ ಅಂಶಗಳು ಹಾಗೂ ತಜ್ಞರು ಎತ್ತಿರುವ ಪ್ರಶ್ನೆಗಳ ಸಮಗ್ರ ವಿವರ ಇಲ್ಲಿದೆ:
ಹೆಸರಿನಲ್ಲೇ ಹಿಂದಿದೆ ಸಾಂಸ್ಕೃತಿಕ ದಬ್ಬಾಳಿಕೆ
ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪರಂಪರೆಯನ್ನು ಪ್ರತಿನಿಧಿಸುವ ಪಂಪ, ಕುವೆಂಪು, ಅಥವಾ ಬಸವಣ್ಣನಂತಹ ಮಹಾನ್ ಚೇತನಗಳ ಹೆಸರುಗಳನ್ನು ಬಳಸುವ ಬದಲು, ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಡಲಾಗಿದೆ. ಕರ್ನಾಟಕದ ಭಾಷಾ ಪಠ್ಯಕ್ಕೂ ಈ ಹೆಸರಿಗೂ ಯಾವುದೇ ನೇರ ಸಂಬಂಧವಿಲ್ಲ. ಇದು ಸ್ಪಷ್ಟವಾಗಿ ಸಾಂಸ್ಕೃತಿಕ ದಬ್ಬಾಳಿಕೆ ಮತ್ತು ವೈಚಾರಿಕತೆಯ ಮೇಲಿನ ಪ್ರಹಾರವಾಗಿದೆ ಎಂದು ನಿರಂಜನಾರಾಧ್ಯ ವಿ.ಪಿ ಅವರು ಹೇಳಿದ್ದಾರೆ.
ಶೈಕ್ಷಣಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆ
ರಾಜ್ಯದಲ್ಲಿ 2015ರಲ್ಲಿ ಜಾರಿಗೆ ತರಲಾದ 'ಕನ್ನಡ ಕಲಿಕಾ ಅಧಿನಿಯಮ'ದ ಪ್ರಕಾರ, ಆಂಗ್ಲ ಅಥವಾ ಇತರೆ ಯಾವುದೇ ಮಾಧ್ಯಮದ ಶಾಲೆಗಳಿದ್ದರೂ ಅಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸಲೇಬೇಕು. ಆದರೆ, NCERT ಈ ಕಾನೂನನ್ನು ಗಾಳಿಗೆ ತೂರಿ, ಕನ್ನಡವನ್ನು ಮೂರನೇ ಭಾಷೆಯಾಗಿ (3rd Language) ಬೋಧಿಸಲು ಹೊರಟಿದೆ ಎಂದು ನಿರಂಜನಾರಾಧ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಊಟದ ತಟ್ಟೆಯಲ್ಲೂ ರಾಜಕೀಯ: ಮಾಯವಾದ ಮೊಟ್ಟೆ-ಮಾಂಸ!
ಪುಸ್ತಕದಲ್ಲಿರುವ 'ಆರೋಗ್ಯವೇ ಭಾಗ್ಯ' ಎಂಬ ಪಾಠ ಅತಿ ಹೆಚ್ಚು ಟೀಕೆಗೆ ಗುರಿಯಾಗಿದೆ. ಈ ಪಾಠದಲ್ಲಿ ಕೇವಲ ಹಾಲು, ಹಣ್ಣು-ಹಂಪಲು ಮತ್ತು ಮುದ್ದೆಯನ್ನು ಮಾತ್ರ 'ಸಮತೋಲಿತ ಹಾಗೂ ಸಾತ್ವಿಕ ಆಹಾರ' ಎಂದು ಬಿಂಬಿಸಲಾಗಿದೆ. ಕರಾವಳಿ ಭಾಗದ ಮೀನಿನ ಊಟ, ಮಂಡ್ಯ-ಮೈಸೂರು ಭಾಗದ ಮಾಂಸಾಹಾರ ಸೇರಿದಂತೆ ಕರ್ನಾಟಕದ ಬಹುತ್ವದ ಆಹಾರ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ವಿಪರ್ಯಾಸವೆಂದರೆ, ರಾಜ್ಯ ಸರ್ಕಾರವೇ ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ನಿವಾರಿಸಲು ಅಗ್ಗದ ಪ್ರೋಟೀನ್‌ಯುಕ್ತ 'ಮೊಟ್ಟೆ'ಯನ್ನು ನೀಡುತ್ತಿದ್ದು, ಪಠ್ಯದಲ್ಲಿ ಇದರ ಉಲ್ಲೇಖವೇ ಇಲ್ಲ. ಇದು ಮಕ್ಕಳ ಊಟದ ತಟ್ಟೆಯಲ್ಲಿ ರಾಜಕೀಯ ಮಾಡುವ ಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಶೈಕ್ಷಣಿಕ ಪ್ರಾಧಿಕಾರದ (DSERT) ಕಡೆಗಣನೆ
ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ರಾಜ್ಯದಲ್ಲಿ ಪಠ್ಯಪುಸ್ತಕಗಳನ್ನು ರಚಿಸುವ ಜವಾಬ್ದಾರಿ ಮತ್ತು ಅಧಿಕಾರ ಡಿಎಸ್‌ಇಆರ್‌ಟಿ (DSERT) ಸಂಸ್ಥೆಗಿದೆ. ಆದರೆ NCERT, ದೆಹಲಿಯಲ್ಲಿ ಕುಳಿತುಕೊಂಡು ರಾಜ್ಯದ ಶೈಕ್ಷಣಿಕ ತಜ್ಞರನ್ನು ಸಂಪೂರ್ಣವಾಗಿ ಹೊರಗಿಟ್ಟಿದೆ. ಯಾವುದೇ ಸಮಾಲೋಚನೆ ನಡೆಸದೆ, ಕೆಲವು ಖಾಸಗಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕಳಪೆ ಗುಣಮಟ್ಟದ ಪುಸ್ತಕವನ್ನು ಸಿದ್ಧಪಡಿಸಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಹೆಸರುಗಳಲ್ಲಿ ತಾರತಮ್ಯ ಮತ್ತು ಮಕ್ಕಳಲ್ಲಿ ಗೊಂದಲ
ಶಾಲಾ ತರಗತಿಗಳಲ್ಲಿ ಹಿಂದೂ, ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌದ್ಧ ಹೀಗೆ ಎಲ್ಲಾ ಸಮುದಾಯದ ಮಕ್ಕಳೂ ಇರುತ್ತಾರೆ. ಆದರೆ ಪಠ್ಯದಲ್ಲಿ ಕೇವಲ ಒಂದು ಧರ್ಮಕ್ಕೆ ಸೀಮಿತವಾದ 'ಕೃಷ್ಣ', 'ಮೃದುಲ' ಎಂಬ ಹೆಸರುಗಳನ್ನು ಮಾತ್ರ ಬಳಸಿರುವುದು ತಾರತಮ್ಯಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ, ಉಪದೇಶದ ಮಾದರಿಯಲ್ಲಿರುವ ಈ ಪಠ್ಯವು, ಒಂದು ನಿರ್ದಿಷ್ಟ ಆಹಾರ ಪದ್ಧತಿಯೇ ಶ್ರೇಷ್ಠ ಎಂದು ಬಿಂಬಿಸುತ್ತಾ ಮಕ್ಕಳ ಸ್ವತಂತ್ರ ಆಲೋಚನಾ ಶಕ್ತಿಯನ್ನು (Critical Thinking) ಮೊಟಕುಗೊಳಿಸುತ್ತಿದೆ ಎಂದು ನಿರಂಜನಾರಾಧ್ಯ ಅವರು ಹೇಳಿದ್ದಾರೆ.
ಕಳಪೆ ಗುಣಮಟ್ಟ ಮತ್ತು ಕಾಪಿ-ಪೇಸ್ಟ್ ಹಾವಳಿ
ಇನ್ನು ಪಠ್ಯಪುಸ್ತಕದ ಗುಣಮಟ್ಟವೂ ತೀರಾ ಕಳಪೆಯಾಗಿದ್ದು, ಇಂಟರ್ನೆಟ್‌ನಿಂದ ಹಲವು ಅಂಶಗಳನ್ನು ಯಥಾವತ್ತಾಗಿ ಕಾಪಿ-ಪೇಸ್ಟ್ ಮಾಡಲಾಗಿದೆ. ಅಕ್ಷರಮಾಲೆಯ ಬೋಧನಾ ಕ್ರಮವೂ ಅವೈಜ್ಞಾನಿಕವಾಗಿದೆ. ಕನ್ನಡ ಪದಗಳ ಬದಲು ಉದ್ದೇಶಪೂರ್ವಕವಾಗಿ ಸಂಸ್ಕೃತ ಪದಗಳನ್ನು ಹೆಚ್ಚಾಗಿ ತುರುಕಲಾಗಿದೆ. ಇದು ಕನ್ನಡ ಭಾಷೆಯ ಸಹಜ ಬೆಳವಣಿಗೆಗೆ ಮಾರಕ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ
ಶಿಕ್ಷಣ ವ್ಯವಸ್ಥೆಯು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ (Concurrent List) ಬರುತ್ತದೆ. ಸಿಬಿಎಸ್‌ಇ ಹಾಗೂ ಕೇಂದ್ರೀಯ ವಿದ್ಯಾಲಯಗಳಿಗೆ ನಿರಾಕ್ಷೇಪಣಾ ಪತ್ರ (NOC) ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಹೀಗಾಗಿ, ಕರ್ನಾಟಕ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ ಮಂಡಳಿಯನ್ನು ಪ್ರಶ್ನಿಸಬೇಕು. ರಾಜ್ಯದ DSERT ತಜ್ಞರನ್ನು ಕಡೆಗಣಿಸಿ, ಕನ್ನಡದ ಅಸ್ಮಿತೆಗೆ ಧಕ್ಕೆ ತರುತ್ತಿರುವ ಇಂತಹ ಪಠ್ಯಪುಸ್ತಕಗಳನ್ನು ಹಿಂಪಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರಂಜನಾರಾಧ್ಯ ವಿ.ಪಿ ಅವರು ಹೇಳಿದ್ದಾರೆ.

