
Panchayati Raj Day| ಅನಾಥವಾದ ಹಳ್ಳಿಗಳ ಆಡಳಿತ: ಪಂಚಾಯತ್ (ಅ)ರಾಜಕತೆ
ಚುನಾವಣೆ ನಡೆಯದಿರುವುದಕ್ಕೆ ಕೇವಲ ಒಂದು ಪಕ್ಷವನ್ನು ದೂಷಿಸುವಂತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ ಈ ವಿಳಂಬ ನೀತಿಯನ್ನು ಕಾಂಗ್ರೆಸ್ ಸರ್ಕಾರವೂ ಮುಂದುವರಿಸುತ್ತಿದೆ ಎಂಬ ಆರೋಪಗಳಿವೆ.
ದೇಶದಾದ್ಯಂತ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ( ಏಪ್ರಿಲ್ 24) ಆಚರಣೆ ಮಾಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಈ ಆಚರಣೆ ಕೇವಲ ಔಪಚಾರಿಕತೆಗೆ ಸೀಮಿತವಾದಂತಿದೆ. ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ಕಳೆದ ನಾಲ್ಕು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ 'ಅನಾಥ'ವಾಗಿದೆ. ಪಂಚಾಯತ್ ರಾಜ್ ದಿನದಂದು ಸಂಭ್ರಮಿಸುವುದಕ್ಕಿಂತ ಹೆಚ್ಚಾಗಿ, ಪ್ರಜಾಪ್ರಭುತ್ವದ ಈ ಹತ್ಯೆಯ ಬಗ್ಗೆ ವಿಷಾದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳ ಅವಧಿ ಮುಕ್ತಾಯಗೊಂಡು ಸುಮಾರು ನಾಲ್ಕು ವರ್ಷಗಳೇ ಕಳೆದಿವೆ. 2021ರಲ್ಲೇ ನಡೆಯಬೇಕಿದ್ದ ಈ ಚುನಾವಣೆಗಳು ಇನ್ನೂ ನಡೆದಿಲ್ಲ. ಸರ್ಕಾರಗಳು ಬದಲಾದರೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಇಚ್ಛಾಶಕ್ತಿಯನ್ನು ಯಾವ ಪಕ್ಷವೂ ತೋರಿಸುತ್ತಿಲ್ಲ. ಗ್ರಾಮ ಪಂಚಾಯಿತಿಗಳ ಅವಧಿಯೂ ಮುಕ್ತಾಯಗೊಂಡಿದ್ದು, ಅಲ್ಲೂ ಚುನಾವಣೆಯ ಲಕ್ಷಣಗಳು ಕಾಣಿಸುತ್ತಿಲ್ಲ. ಸಂವಿಧಾನದ ಪ್ರಕಾರ ಐದು ವರ್ಷಗಳ ಅವಧಿ ಮುಗಿಯುವ ಮೊದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಬೇಕು. ಆದರೆ, ಇಲ್ಲಿ ವರ್ಷಗಳೇ ಕಳೆದರೂ ನಡೆಸುತ್ತೇವೆ ಎಂಬ ಭರವಸೆಯ ಹೊರತಾಗಿ ಬೇರೇನೂ ನಡೆಯುತ್ತಿಲ್ಲ ಎಂಬುದು ವಿಷಾದನೀಯ.
1993ರಲ್ಲಿ ಜಾರಿಗೆ ಬಂದ 73ನೇ ತಿದ್ದುಪಡಿಯು ಪಂಚಾಯತ್‌ಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಿತು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಎಂಬ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ಬಂದಿತು. ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯರೇ ಬಗೆಹರಿಸಿಕೊಳ್ಳಲು ಇದು ವೇದಿಕೆಯಾಯಿತು. ಪ್ರತಿ ಐದು ವರ್ಷಕ್ಕೊಮ್ಮೆ ತಪ್ಪದೇ ಚುನಾವಣೆ ನಡೆಸಬೇಕು ಎಂಬುದು ಕಾಯ್ದೆಯ ಪ್ರಮುಖ ನಿಯಮ. ಆದರೆ, ಕರ್ನಾಟಕದಲ್ಲಿ 2021 ರಿಂದ ಈ ನಿಯಮವು ಕೇವಲ ಕಾಗದದ ಮೇಲೆ ಉಳಿದಿದ್ದು, ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಇಂದು ಕೇವಲ ಅಧಿಕಾರಿಗಳ ಆಡಳಿತ ಕೇಂದ್ರವಾಗಿ ಮಾರ್ಪಟ್ಟಿದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಒಬ್ಬನೇ ಒಬ್ಬ ಚುನಾಯಿತ ಪ್ರತಿನಿಧಿ ಇಲ್ಲ. ಇದು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನು? ಬ್ಯಾನರ್‌ಗಳು, ಭಾಷಣಗಳು ಮತ್ತು ಜಾಹೀರಾತುಗಳಲ್ಲಿ ಪಂಚಾಯತ್ ಸಬಲೀಕರಣ ಎಂಬ ಘೋಷಣೆಗಳು ರಾರಾಜಿಸುತ್ತಿವೆ. ಆದರೆ ವಾಸ್ತವದಲ್ಲಿ ಪಂಚಾಯತ್‌ಗಳು ನಿರ್ಜೀವವಾಗಿವೆ.
ಕಾಯ್ದೆ ತಿದ್ದುಪಡಿ, ಅಧಿಕಾರ ಕಸಿದುಕೊಂಡ ಸರ್ಕಾರ
ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವಧಿಯಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಯಿತು. ಈ ಹಿಂದೆ ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಇತ್ತು. ಆದರೆ, ಸರ್ಕಾರವು ಈ ಅಧಿಕಾರವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಪ್ರತ್ಯೇಕ ಸೀಮಾ ನಿರ್ಣಯ ಆಯೋಗವನ್ನು ರಚಿಸಿತು. ಇದು ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆ ತಂದಿತು ಎಂಬ ಆರೋಪ ಕೇಳಿಬಂದಿತು. ರಾಜಕೀಯ ಲಾಭಕ್ಕಾಗಿ ತಮಗೆ ಬೇಕಾದಂತೆ ಕ್ಷೇತ್ರಗಳನ್ನು ವಿಂಗಡಿಸಲು ಮತ್ತು ಮೀಸಲಾತಿ ನಿಗದಿಪಡಿಸಲು ಸರ್ಕಾರ ಈ ಹಾದಿ ಹಿಡಿಯಿತು ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಚುನಾವಣೆ ನಡೆಯದಿರುವುದಕ್ಕೆ ಕೇವಲ ಒಂದು ಪಕ್ಷವನ್ನು ದೂಷಿಸುವಂತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ ಈ ವಿಳಂಬ ನೀತಿಯನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರವೂ ಮುಂದುವರಿಸುತ್ತಿದೆ ಎಂಬ ಅಸಮಾಧಾನ ಗ್ರಾಮ ಮಟ್ಟದ ಕಾರ್ಯಕರ್ತರಲ್ಲಿ ಮನೆಮಾಡಿದೆ. ಹೆಚ್ಚಿನ ಶಾಸಕರು ತಮ್ಮ ಕ್ಷೇತ್ರದಲ್ಲಿ ಜಿಲ್ಲಾ ಅಥವಾ ತಾಲೂಕು ಪಂಚಾಯತ್ ಸದಸ್ಯರು ಇರುವುದನ್ನು ಇಷ್ಟಪಡುವುದಿಲ್ಲ. ಯಾಕೆಂದರೆ, ಸ್ಥಳೀಯ ಮಟ್ಟದಲ್ಲಿ ಹೊಸ ನಾಯಕತ್ವ ಬೆಳೆಯುತ್ತದೆ ಮತ್ತು ಅನುದಾನದ ಹಂಚಿಕೆಯಲ್ಲಿ ಶಾಸಕರ ಏಕಸ್ವಾಮ್ಯ ಕಡಿಮೆಯಾಗುತ್ತದೆ ಎಂಬ ಭಯ ಅವರಲ್ಲಿದೆ. ಇದು ಎಲ್ಲಾ ಪಕ್ಷಗಳ ಶಾಸಕರ ಸಾಮಾನ್ಯ ಮನಸ್ಥಿತಿಯಾಗಿದೆ.
ಕಾನೂನು ಸಮರ - ಸಾಂವಿಧಾನಿಕ ಬಿಕ್ಕಟ್ಟು
ಸರ್ಕಾರದ ಈ ನಡೆಯನ್ನು ವಿರೋಧಿಸಿ ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮೆಟ್ಟಿಲೇರಿತು. ಕ್ಷೇತ್ರ ಮರುವಿಂಗಡಣೆ ಮತ್ತು ಒಬಿಸಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಸುದೀರ್ಘ ಕಾನೂನು ಸಮರ ನಡೆಯಿತು. ಸುಪ್ರೀಂ ಕೋರ್ಟ್ ಒಬಿಸಿ ಮೀಸಲಾತಿ ನೀಡುವಂತೆ ಸೂಚಿಸಿತು. ಇದಕ್ಕಾಗಿ ಸರ್ಕಾರವು ನ್ಯಾ. ಭಕ್ತವತ್ಸಲ ಸಮಿತಿಯನ್ನು ನೇಮಿಸಿತು. ವರದಿ ಸಲ್ಲಿಕೆಯಾದರೂ, ಯಾವುದೋ ಒಂದು ನೆಪದಲ್ಲಿ ಚುನಾವಣೆ ಮುಂದೂಡುತ್ತಾ ಬರುತ್ತಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ, ಈ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ.
ಅಧಿಕಾರಿಗಳ ರಾಜ್ಯಭಾರ
ಚುನಾಯಿತ ಜನಪ್ರತಿನಿಧಿಗಳಿಲ್ಲದ ಕಾರಣ, ಪಂಚಾಯತ್‌ಗಳಲ್ಲಿ ಈಗ 'ಅಧಿಕಾರಿಗಳ ರಾಜ್ಯಭಾರ' ನಡೆಯುತ್ತಿದೆ. ಜಿಲ್ಲಾ ಪಂಚಾಯತ್‌ಗಳಲ್ಲಿ ಸಿಇಒಗಳು ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಅಧಿಕಾರಿಗಳೇ ಸರ್ವಾಧಿಕಾರಿಗಳಂತಾಗಿದ್ದಾರೆ. ಒಬ್ಬ ಚುನಾಯಿತ ಪ್ರತಿನಿಧಿಗೆ ಇರುವ ಸಾಮಾಜಿಕ ಕಳಕಳಿ ಮತ್ತು ಜನರಿಗೆ ಉತ್ತರಿಸುವ ಹೊಣೆಗಾರಿಕೆ ಒಬ್ಬ ಅಧಿಕಾರಿಗೆ ಇರುವುದಿಲ್ಲ. ಅಧಿಕಾರಿಗಳು ಕೇವಲ ಮೇಲಧಿಕಾರಿಗಳ ಆದೇಶ ಪಾಲಿಸುತ್ತಾರೆ ಹೊರತು ಜನರ ನೋವಿಗೆ ಸ್ಪಂದಿಸುವುದಿಲ್ಲ. ಜನಪ್ರತಿನಿಧಿಗಳ ಕಣ್ಗಾವಲು ಇಲ್ಲದಿದ್ದಾಗ ಅನುದಾನಗಳ ದುರ್ಬಳಕೆ ಹೆಚ್ಚಾಗುತ್ತದೆ. ಕಾಮಗಾರಿಗಳ ಗುಣಮಟ್ಟದ ಮೇಲೆ ನಿಗಾ ಇಡುವವರು ಯಾರೂ ಇಲ್ಲದಂತಾಗಿದೆ.
ಸಣ್ಣಪುಟ್ಟ ಕೆಲಸಗಳಿಗೂ ಸಾಮಾನ್ಯ ಜನರು ಅಧಿಕಾರಿಗಳ ಕಚೇರಿಗೆ ಅಲೆಯಬೇಕಾಗಿದೆ. ಹಿಂದೆ ಸದಸ್ಯರು ಅಥವಾ ಅಧ್ಯಕ್ಷರು ಜನರ ಪರವಾಗಿ ಧ್ವನಿ ಎತ್ತುತ್ತಿದ್ದರು, ಈಗ ಆ ಧ್ವನಿ ಅಡಗಿಹೋಗಿದೆ. ಚುನಾಯಿತ ಸದಸ್ಯರಿದ್ದಾಗ ಅಧಿಕಾರಿಗಳ ಮೇಲೆ ನಿಯಂತ್ರಣವಿರುತ್ತಿತ್ತು. ಈಗ ಅಧಿಕಾರಿಗಳದ್ದೇ ಪಾರುಪತ್ಯವಾಗಿದ್ದು, ಭ್ರಷ್ಟಾಚಾರಕ್ಕೆ ದಾರಿಯಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಪಂಚಾಯತ್‌ಗಳ ಅಭಿವೃದ್ಧಿ ಯೋಜನೆಗಳನ್ನು ಚರ್ಚಿಸುವ ಸಾಮಾನ್ಯ ಸಭೆಗಳು ನಡೆಯುತ್ತಿಲ್ಲ. ಇದರಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ.
ಆರ್ಥಿಕ ಹೊಡೆತ: ಕೇಂದ್ರದ ಅನುದಾನ ವಾಪಸ್ ಹೋಗುವ ಭೀತಿ
15ನೇ ಹಣಕಾಸು ಆಯೋಗದ ನಿಯಮಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಇದ್ದರೆ ಮಾತ್ರ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗುತ್ತದೆ. ಕರ್ನಾಟಕಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರದಿಂದ ಸುಮಾರು 2 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಅನುದಾನ ನೀಡಿದೆ. ಚುನಾವಣೆ ನಡೆಯದ ಕಾರಣ ಈ ಹಣವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು, ರಸ್ತೆ, ನೈರ್ಮಲ್ಯ ಮತ್ತು ಶಾಲೆಗಳ ದುರಸ್ತಿಗೆ ಈ ಹಣ ಅತ್ಯಗತ್ಯ. ಚುನಾವಣೆ ವಿಳಂಬವಾಗುತ್ತಿರುವುದರಿಂದ ರಾಜ್ಯವು ಈ ಬೃಹತ್ ಮೊತ್ತವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ನಾವು ಸಂಭ್ರಮಿಸುವ ಬದಲು ಚಿಂತನೆ ನಡೆಸಬೇಕಿದೆ. ಸಂವಿಧಾನದ 73ನೇ ತಿದ್ದುಪಡಿಯ ಮುಖ್ಯ ಉದ್ದೇಶವೇ ಅಧಿಕಾರವನ್ನು ಹಳ್ಳಿಗಳಿಗೆ ಹಂಚುವುದು. ಆದರೆ, ಕರ್ನಾಟಕದಲ್ಲಿ ಅಧಿಕಾರವು ವಿಧಾನಸೌಧ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಕೇಂದ್ರೀಕೃತವಾಗಿದೆ. "ನಮ್ಮ ಗ್ರಾಮ - ನಮ್ಮ ಅಭಿವೃದ್ಧಿ" ಎಂಬ ಘೋಷಣೆ ಅರ್ಥ ಕಳೆದುಕೊಂಡಿದೆ.

