ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ; ಕರ್ನಾಟಕದ ಖಜಾನೆಯಂತೂ ಲೂಟಿಯಾಗ್ತಿದೆ- ಪ್ರಧಾನಿ ವಾಗ್ದಾಳಿ
x
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಜ್ಯ ಬಿಜೆಪಿ ಘಟಕದ ವತಿಯಿಂದ ಸ್ಮರಣಿಕೆ ನೀಡಲಾಯಿತು.

ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ; ಕರ್ನಾಟಕದ ಖಜಾನೆಯಂತೂ ಲೂಟಿಯಾಗ್ತಿದೆ- ಪ್ರಧಾನಿ ವಾಗ್ದಾಳಿ

ಕರ್ನಾಟಕದಲ್ಲಿ ನಾಯಕರ ನಡುವೆ ಕುರ್ಚಿ ಕಿತ್ತಾಟ ಮತ್ತು ಆಂತರಿಕ ಜಗಳ ನಡೆಯುತ್ತಿದೆ. ಇದರಿಂದಾಗಿ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದರು.


ಪಶ್ಚಿಮ ಬಂಗಾಳ, ಪುದುಚೇರಿ ಹಾಗೂ ಅಸ್ಸಾಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಆಯೋಜಿಸಿದ್ದ ವಿಜಯೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಮೊನಚಾದ ಮಾತುಗಳಲ್ಲಿ ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಬಿಕ್ಕಟ್ಟನ್ನು ಪ್ರಸ್ತಾಪಿಸಿ, "ಇಲ್ಲಿನ ಸಿಎಂ ಅವರು ಕುರ್ಚಿಯಲ್ಲಿ ಎಷ್ಟು ದಿನ ಇರುತ್ತಾರೋ ಯಾರಿಗೂ ಗೊತ್ತಿಲ್ಲ," ಎಂದು ವ್ಯಂಗ್ಯವಾಡಿದರು. ಅಲ್ಲದೇ, ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಹಿಮಾಚಲ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಸರಿಯಾಗಿ ವೇತನ ನೀಡಲಾಗುತ್ತಿಲ್ಲ. ತೆಲಂಗಾಣದಲ್ಲಿ ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಬಹುಮತ ಗಳಿಸಿದ್ದರೂ, ಇಂದಿಗೂ ಅಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. ಇನ್ನು ಕರ್ನಾಟಕದಲ್ಲಿ ನಾಯಕರ ನಡುವೆ ಕುರ್ಚಿ ಕಿತ್ತಾಟ ಮತ್ತು ಆಂತರಿಕ ಜಗಳ ನಡೆಯುತ್ತಿದೆ. ಇದರಿಂದಾಗಿ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಖಜಾನೆ ಲೂಟಿ

ಕರ್ನಾಟಕದಲ್ಲಿ ಲೂಟಿ ರಾಜಕಾರಣ ನಡೆಯುತ್ತಿದೆ. ಜನಸಾಮಾನ್ಯರು ಸಾಲು ಸಾಲು ಸಮಸ್ಯೆಗಳಿಂದ ಬೆಂದುಹೋಗುತ್ತಿದ್ದರೆ, ಸರ್ಕಾರದ ನಾಯಕರು ಮಾತ್ರ ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲಿದ್ದಾರೆ. ರಾಜಸ್ಥಾನದಲ್ಲಿ ಹಿಂದೆ ಏನಾಯಿತು ಎಂಬುದನ್ನು ನೀವು ನೋಡಿದ್ದೀರಿ. ಈಗ ಕರ್ನಾಟಕವೂ ಅದೇ ಹಾದಿಯಲ್ಲಿ ಸಾಗುತ್ತಿದೆ. ಖಜಾನೆಯನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಗಂಗೋತ್ರಿಯಿಂದ ಅರಬ್ಬಿ ಸಮುದ್ರದವರೆಗೆ ಕಮಲದ ಕಂಪು!

ಇತ್ತೀಚಿನ ಚುನಾವಣಾ ಯಶಸ್ಸನ್ನು ದೇಶದ ಒಟ್ಟಾರೆ ರಾಜಕೀಯ ಚಿತ್ರಣಕ್ಕೆ ಹೋಲಿಸಿದ ಪ್ರಧಾನಿ ಮೋದಿ, "ಇಂದು ಗಂಗೋತ್ರಿಯಿಂದ ಹಿಡಿದು ಅರಬ್ಬೀ ಸಮುದ್ರದವರೆಗೆ ಕಮಲ ಅರಳಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

"ಬಂಗಾಳದ ಜನರು ಈ ಬಾರಿ ಹೊಸ ಇತಿಹಾಸವನ್ನೇ ಬರೆದಿದ್ದಾರೆ. ದಶಕಗಳ ಕಾಲ ಆ ರಾಜ್ಯವನ್ನು ಕಾಡಿದ್ದ ಅರಾಜಕತೆ, ಹಿಂಸಾಚಾರ ಮತ್ತು ಅಭಿವೃದ್ಧಿ ಶೂನ್ಯ ರಾಜಕಾರಣಕ್ಕೆ ಬಂಗಾಳದ ಜನತೆ ಪೂರ್ಣವಿರಾಮ ಇಟ್ಟಿದ್ದಾರೆ. ಈ ಗೆಲುವು ಕೇವಲ ಬಿಜೆಪಿಯದ್ದಲ್ಲ, ಇದು ಭಾರತೀಯ ಪ್ರಜಾಪ್ರಭುತ್ವದ ಗೆಲುವು," ಎಂದು ಹೇಳಿದರು.

ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಒಂದು ಕಾಲದಲ್ಲಿ ಕೇವಲ 3 ಸ್ಥಾನ ಹೊಂದಿದ್ದ ಬಿಜೆಪಿ, ಇಂದು 200ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿರುವುದು ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕರ್ತರ ಕಠಿಣ ಪರಿಶ್ರಮಕ್ಕೆ ಸಂದ ಜಯ ಎಂದ ಅವರು, ಇದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಕೇರಳದಲ್ಲೂ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಭವಿಷ್ಯದ ಶಕ್ತಿ ಕೇಂದ್ರ 'ಬೆಂಗಳೂರು'

ಕರ್ನಾಟಕ ಹಾಗೂ ಬೆಂಗಳೂರಿನೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ, ಬೆಂಗಳೂರನ್ನು "ಭಾರತದ ಭವಿಷ್ಯದ ಇಂಜಿನ್" ಎಂದು ಬಣ್ಣಿಸಿದರು.

"ಇಂದು ಜಾಗತಿಕ ಮಟ್ಟದಲ್ಲಿ 'ಡಿಜಿಟಲ್ ಇಂಡಿಯಾ' ಬಗ್ಗೆ ಚರ್ಚೆಯಾಗುತ್ತಿದ್ದರೆ, ಅದಕ್ಕೆ ಬೆಂಗಳೂರಿನ ಯುವಶಕ್ತಿ ಮತ್ತು ಕನ್ನಡಿಗರ ತಾಂತ್ರಿಕ ನೈಪುಣ್ಯತೆಯೇ ಕಾರಣ. ಕೋವಿಡ್ ನಂತರದ ಆರ್ಥಿಕ ಬಿಕ್ಕಟ್ಟಿನಿಂದ ದೇಶವು ಬೇಗನೆ ಚೇತರಿಸಿಕೊಳ್ಳಲು ಕರ್ನಾಟಕದ ಉದ್ಯಮಿಗಳು ಹಾಗೂ ರೈತರ ಪರಿಶ್ರಮ ಅಪಾರವಾದದ್ದು," ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ವಿಜ್ಞಾನ- ಆಧ್ಯಾತ್ಮ ದೇಶದ ಎರಡು ಕಣ್ಣುಗಳು

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡುವ ಮುನ್ನ ಮಾತನಾಡಿದ ಮೋದಿ, ದೇಶದ ಸಮಗ್ರ ಪ್ರಗತಿಗೆ "ವಿಜ್ಞಾನ ಮತ್ತು ಆಧ್ಯಾತ್ಮ" ಎರಡು ಕಣ್ಣುಗಳಿದ್ದಂತೆ ಎಂದು ಪ್ರತಿಪಾದಿಸಿದರು.

"ಕೇವಲ ಆರ್ಥಿಕ ಸದೃಢತೆಯಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಿಲ್ಲ. ನಮಗೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಅಗತ್ಯವೂ ಇದೆ. ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಈ ದಿಸೆಯಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಕ್ರಾಂತಿ ಮಾಡುತ್ತಿದ್ದಾರೆ. ಅವರ 70ನೇ ಜನ್ಮೋತ್ಸವದ ಸಂದರ್ಭದಲ್ಲಿ ನಿರ್ಮಿಸಲಾದ ನೂತನ ಧ್ಯಾನ ಮಂದಿರವನ್ನು ಉದ್ಘಾಟಿಸುವ ಸೌಭಾಗ್ಯ ನನ್ನದಾಗಿರುವುದು ನನ್ನ ಪುಣ್ಯ," ಎಂದರು.

ಮಹಿಳಾ ವಿರೋಧಿ ಕಾಂಗ್ರೆಸ್ ಧೋರಣೆಗೆ ಕಿಡಿ

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಅಡ್ಡಗಾಲು ಹಾಕಿದ್ದನ್ನು ಪ್ರಸ್ತಾಪಿಸಿದ ಮೋದಿ, "ಕಾಂಗ್ರೆಸ್ ಸದಾ ಮಹಿಳಾ ಸಬಲೀಕರಣದ ವಿರೋಧಿಯಾಗಿದೆ. ಅಂದು ಅವರು ಮಸೂದೆಯನ್ನು ತಡೆಯದೇ ಹೋಗಿದ್ದರೆ, ಇಂದು ಸಾಮಾನ್ಯ ವರ್ಗದ ನೂರಾರು ಮಹಿಳೆಯರು ಸಂಸತ್ತು ಹಾಗೂ ವಿಧಾನಸಭೆಗಳನ್ನು ಅಲಂಕರಿಸುತ್ತಿದ್ದರು. ಕಾಂಗ್ರೆಸ್ ಮಾಡಿದ ಈ ಮಹಾದ್ರೋಹವನ್ನು ಕರ್ನಾಟಕದ ತಾಯಂದಿರು-ಸೋದರಿಯರು ಎಂದಿಗೂ ಕ್ಷಮಿಸಬಾರದು," ಎಂದು ಕರೆ ನೀಡಿದರು.

13 ಕೆಜಿಯ ಬೆಳ್ಳಿ ಪ್ರತಿಮೆ ನೀಡಿ ಮೋದಿಗೆ ಸನ್ಮಾನ

ಕಾರ್ಯಕ್ರಮದ ಆರಂಭದಲ್ಲಿ, ಇತ್ತೀಚಿನ ವಿಧಾನಸಭಾ ಚುನಾವಣೆಗಳ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಬಿಜೆಪಿ ನಾಯಕರು 13 ಕೆಜಿ ತೂಕದ ಬೆಳ್ಳಿಯ ಮೋದಿ ಪ್ರತಿಮೆಯನ್ನು ನೀಡಿ ಅತ್ಯಂತ ವಿಜೃಂಭಣೆಯಿಂದ ಸನ್ಮಾನಿಸಿದರು.

Read More
Next Story