
ಹಾಲಿನ ದರ ಏರಿಕೆ ಖಚಿತ: ಪ್ರತಿ ಲೀಟರ್ಗೆ 8 ರೂ. ಹೆಚ್ಚಳಕ್ಕೆ ಸರ್ಕಾರದ ಚಿಂತನೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳ ಕುರಿತು ಚರ್ಚಿಸಲಾಗಿದ್ದು, ಪರೋಕ್ಷವಾಗಿ ಹಸಿರು ನಿಶಾನೆ ತೋರಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಜನಸಾಮಾನ್ಯರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ರಾಜ್ಯ ಸರ್ಕಾರವು ನಂದಿನಿ ಹಾಲಿನ ಪ್ರತಿ ಲೀಟರ್ ದರವನ್ನು 8 ರೂಪಾಯಿಗಳಷ್ಟು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ಗಂಭೀರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆಗಳು ನಡೆದಿದ್ದು, ಸರ್ಕಾರವು ದರ ಹೆಚ್ಚಳಕ್ಕೆ ಪರೋಕ್ಷವಾಗಿ ಹಸಿರು ನಿಶಾನೆ ತೋರಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ತಕ್ಷಣವೇ ದರ ಹೆಚ್ಚಳವನ್ನು ಜಾರಿಗೊಳಿಸಲು ತಾಂತ್ರಿಕ ಅಡಚಣೆಗಳಿವೆ. ಈ ಹಿನ್ನೆಲೆಯಲ್ಲಿ, ನ.1 ರಂದು ಅಧಿಕೃತವಾಗಿ ದರ ಏರಿಕೆಯನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಈ ನಿರ್ಧಾರವು ಗ್ರಾಹಕರ ಜೇಬಿಗೆ ಹೊರೆಯಾಗಲಿದ್ದರೂ, ರೈತರ ಹಿತದೃಷ್ಟಿಯಿಂದ ಕೈಗೊಂಡ ಕ್ರಮವಾಗಿದೆ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಅಧಿಕಾರ ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆಯ ಪ್ರಸ್ತಾವನೆ ಪ್ರಮುಖವಾಗಿ ಚರ್ಚೆಯಾಯಿತು. ಮುಖ್ಯಮಂತ್ರಿ ಮತ್ತು ಸಂಪುಟದ ಬಹುತೇಕ ಸಚಿವರು ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಳ ಮಾಡಲು ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತುತು ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ಹೆಚ್ಚಳ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ದರ ಹೆಚ್ಚಳಕ್ಕೆ ಅನುಮತಿಗೆ ನೀಡದಿದ್ದರೆ ಚುನಾವಣೆ ಮುಕ್ತಾಯಗೊಂಡ ಬಳಿಕ ಹಾಲಿನ ದರ ಹೆಚ್ಚಳ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಸರ್ಕಾರಕ್ಕೆ ಒಕ್ಕೂಟಗಳ ಮನವಿ
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಮತ್ತು ರಾಜ್ಯದ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳು ಕಳೆದ ಹಲವು ತಿಂಗಳುಗಳಿಂದ ಹಾಲಿನ ದರವನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದವು. ಇದಕ್ಕೆ ಪ್ರಮುಖ ಕಾರಣವೆಂದರೆ ಹಾಲಿನ ಉತ್ಪಾದನಾ ವೆಚ್ಚದಲ್ಲಿ ಆಗಿರುವ ಭಾರಿ ಏರಿಕೆ. ಹಸು ಮತ್ತು ಎಮ್ಮೆಗಳಿಗೆ ನೀಡುವ ಹಿಂಡಿ, ಬೂಸಾ, ಕಾಳು ಮತ್ತು ಹಸಿರು ಮೇವಿನ ಬೆಲೆಗಳು ಗಗನಕ್ಕೇರಿವೆ. ಮಾರುಕಟ್ಟೆಯಲ್ಲಿ ಪಶು ಆಹಾರದ ಬೆಲೆ ಕಳೆದ ವರ್ಷಗಳಿಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಮೇವು ಮತ್ತು ಹಿಂಡಿಯ ದರ ಏರಿಕೆಯಿಂದಾಗಿ ರೈತರಿಗೆ ಹಾಲಿನ ಉತ್ಪಾದನೆ ಲಾಭದಾಯಕವಾಗಿ ಉಳಿದಿಲ್ಲ. ಪಶುಗಳ ನಿರ್ವಹಣೆ ದುಬಾರಿಯಾಗಿದ್ದರೂ, ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲೂ ರೈತರು ಪಶುಪಾಲನೆಯನ್ನು ಕೈಬಿಡುವಂತಿಲ್ಲ. ಹೀಗಾಗಿ, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಒಕ್ಕೂಟಗಳು ವಾದಿಸುತ್ತಿವೆ.
ರೈತರಿಗೆ ಸಿಗುವ ಲಾಭವೆಷ್ಟು?
ಹಾಲು ಒಕ್ಕೂಟಗಳ ಪ್ರಸ್ತಾವನೆಯ ಪ್ರಕಾರ, ಹೆಚ್ಚುವರಿ 8 ರಿಂದ 10 ರೂಪಾಯಿಗಳ ಪೈಕಿ ದೊಡ್ಡ ಭಾಗವನ್ನು ನೇರವಾಗಿ ರೈತರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಒಕ್ಕೂಟಗಳು 10 ರೂಪಾಯಿ ಹೆಚ್ಚಳವನ್ನು ಒತ್ತಾಯಿಸಿದ್ದವು. ಪ್ರಸ್ತುತ ಸರ್ಕಾರವು 8 ರೂಪಾಯಿ ಹೆಚ್ಚಳಕ್ಕೆ ಸಮ್ಮತಿಸಿದ್ದು, ಇದರಲ್ಲಿ ಗರಿಷ್ಠ ಪಾಲನ್ನು ಹಾಲು ಉತ್ಪಾದಿಸುವ ರೈತರ ಖಾತೆಗೆ ವರ್ಗಾಯಿಸುವ ಬಗ್ಗೆ ಚರ್ಚೆ ನಡೆದಿದೆ. ರೈತರಿಗೆ ಪ್ರತಿ ಲೀಟರ್ಗೆ ಹೆಚ್ಚುವರಿಯಾಗಿ 7 ರೂಪಾಯಿ ಸಿಗುವಂತಾಗಬೇಕು ಎಂಬುದು ಒಕ್ಕೂಟಗಳ ಪ್ರಮುಖ ಬೇಡಿಕೆಯಾಗಿದೆ.
2025ರಲ್ಲಿ ರಾಜ್ಯ ಸರ್ಕಾರವು ಹಾಲಿನ ದರವನ್ನು ಪ್ರತಿ ಲೀಟರ್ಗೆ 4 ರೂಪಾಯಿಗಳಷ್ಟು ಏರಿಕೆ ಮಾಡಿತ್ತು. ಆ ಸಮಯದಲ್ಲಿಯೂ ಮೇವು ಮತ್ತು ಹಿಂಡಿಯ ಬೆಲೆ ಏರಿಕೆಯನ್ನು ನೆಪವಾಗಿಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಕಳೆದ ಒಂದು ವರ್ಷದಲ್ಲಿ ಹಣದುಬ್ಬರದಿಂದಾಗಿ ಪಶು ಆಹಾರದ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಬಾರಿ ಮಾಡಿದ 4 ರೂಪಾಯಿ ಏರಿಕೆ ಈಗಿನ ಪರಿಸ್ಥಿತಿಯಲ್ಲಿ ರೈತರ ನಷ್ಟವನ್ನು ಸರಿದೂಗಿಸಲು ಸಾಕಾಗುತ್ತಿಲ್ಲ ಎಂಬುದು ಒಕ್ಕೂಟಗಳ ಅಭಿಪ್ರಾಯವಾಗಿದೆ.
ಒಂದೆಡೆ ರೈತರ ಹಿತವನ್ನು ಕಾಪಾಡಬೇಕಾದ ಅನಿವಾರ್ಯತೆ ಇದ್ದರೆ, ಇನ್ನೊಂದೆಡೆ ದರ ಏರಿಕೆಯಿಂದ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸಬೇಕಾದ ಸವಾಲು ಸರ್ಕಾರದ ಮುಂದಿದೆ. ಹಾಲಿನ ದರ ಏರಿಕೆಯು ಚಹಾ, ಕಾಫಿ ಸೇರಿದಂತೆ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪದ ಬೆಲೆ ಏರಿಕೆಗೂ ಪರೋಕ್ಷವಾಗಿ ಕಾರಣವಾಗಲಿದೆ. ಇದು ಮಧ್ಯಮ ವರ್ಗದ ಜನರ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.

