
ಸರ್ಕಾರಿ ಶಾಲೆಗೆ ಖಾಸಗಿ ಹೆಸರು ಸೇರ್ಪಡೆ: ರಾಜ್ಯ ಸರ್ಕಾರದ ವಿನೂತನ ಕೊಡುಗೆ..!
ಸಿಎಸ್‌ಆರ್ ಅಡಿಯಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದರೆ, ಆ ಶಾಲೆಯ ಹೆಸರಿನ ಜೊತೆಗೆ ಸಂಸ್ಥೆಯ ಹೆಸರನ್ನೂ ಸೇರಿಸಿಕೊಳ್ಳಲು ಸರ್ಕಾರ ಮುಕ್ತ ಅವಕಾಶ ಕಲ್ಪಿಸಿದೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಹೊಸ ಮಾದರಿಯ ಉತ್ತೇಜನವನ್ನು ಘೋಷಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಅಥವಾ ಕಂಪನಿಗಳು ಸಿಎಸ್‌ಆರ್ ಅಡಿಯಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದರೆ, ಆ ಶಾಲೆಯ ಹೆಸರಿನ ಜೊತೆಗೆ ಸಂಸ್ಥೆಯ ಹೆಸರನ್ನೂ ಸೇರಿಸಿಕೊಳ್ಳಲು ಸರ್ಕಾರ ಮುಕ್ತ ಅವಕಾಶ ಕಲ್ಪಿಸಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಖಾಸಗಿ ಆಡಳಿತ ಮಂಡಳಿಗಳಿಗೆ ಈ ಆಹ್ವಾನ ನೀಡಿದರು. ಇದಕ್ಕೆ ನಿದರ್ಶನ ನೀಡಿದ ಅವರು, ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಟೊಯೊಟೊ ಕಂಪನಿ ನೆರವಾಗುತ್ತಿದ್ದು, ಅದಕ್ಕೆ ಹೆಗ್ಗನೂರು ಸರ್ಕಾರಿ ಟೊಯೊಟೊ ಶಾಲೆ ಎಂದು ಮರುನಾಮಕರಣ ಮಾಡಲು ಸರ್ಕಾರವೇ ಅನುಮತಿ ನೀಡಿದೆ ಎಂದು ವಿವರಿಸಿದರು. ಕಟ್ಟಡ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ನೀಡಲು ಸಾಧ್ಯವಾಗದಿದ್ದರೂ, ಖಾಸಗಿ ಶಾಲೆಗಳು ತಮ್ಮ ನುರಿತ ಶಿಕ್ಷಕರನ್ನು ಕಳುಹಿಸುವುದು, ಕಂಪ್ಯೂಟರ್, ಲ್ಯಾಬ್ ಹಾಗೂ ಹಳೆಯ ಶಾಲಾ ಬಸ್‌ಗಳನ್ನು ನೀಡುವ ಮೂಲಕ ಜ್ಞಾನ ವಿನಿಮಯ ಮಾಡಿಕೊಳ್ಳಬಹುದು. ಸರ್ಕಾರ ಈ ನಿಧಿಯನ್ನು ನೇರವಾಗಿ ಪಡೆಯುವುದಿಲ್ಲ, ಬದಲಿಗೆ ಶಾಲೆಗಳು ಸ್ವತಃ ಅಭಿವೃದ್ಧಿಪಡಿಸಿ ತಮ್ಮ ಹೆಸರನ್ನು ಇರಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಈ ನಿರ್ಧಾರವು ಸಿಎಸ್‌ಆರ್ ಹೂಡಿಕೆಗೆ ಬಲ ತುಂಬಲಿದೆಯಾದರೂ, ಸಾರ್ವಜನಿಕ ಸಂಸ್ಥೆಗಳ ಕಾರ್ಪೊರೇಟ್ ಬ್ರ್ಯಾಂಡಿಂಗ್ ಬಗ್ಗೆ ಶೈಕ್ಷಣಿಕ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಒಂದು ಸಾವಿರ ಶಾಲೆಗಳ ಜೋಡಣೆ
ಸರ್ಕಾರ ರೂಪಿಸಿರುವ ಈ ಹೊಸ ನೀತಿಯ ಪ್ರಕಾರ, ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೊದಲ ಹಂತವಾಗಿ 1 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 2 ಸಾವಿರ ಶಾಲೆಗಳಿಗೆ ವಿಸ್ತರಿಸುವ ಚಿಂತನೆ ಇದೆ. ಖಾಸಗಿ ಶಾಲೆಗಳು ತಮ್ಮ ಆರ್ಥಿಕ ಚೈತನ್ಯಕ್ಕೆ ಅನುಗುಣವಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಟ್ಟಡ ನಿರ್ಮಿಸಲು ಹಣವಿಲ್ಲದಿದ್ದರೆ, ಕನಿಷ್ಠ ತಮ್ಮ ನುರಿತ 10 ಜನ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಕಳುಹಿಸಿ, ಜ್ಞಾನ ವಿನಿಮಯ ಮಾಡಿಕೊಳ್ಳಬೇಕು. ಹಳೆಯ ಶಾಲಾ ಬಸ್ಸುಗಳನ್ನು ಗುಜರಿಗೆ ಹಾಕುವ ಬದಲು ಸರ್ಕಾರಿ ಶಾಲೆಗಳಿಗೆ ನೀಡುವುದು, ಕಂಪ್ಯೂಟರ್ ಮತ್ತು ಲ್ಯಾಬ್ ಉಪಕರಣಗಳನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ.
ಎದುರಾಗಲಿರುವ ಸವಾಲುಗಳು
ಈ ಯೋಜನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕ ವಲಯದಲ್ಲಿ ಹಲವು ಆತಂಕಗಳನ್ನು ಸೃಷ್ಟಿಸಿದೆ. ಸಂವಿಧಾನದ 21(ಎ) ವಿಧಿಯ ಪ್ರಕಾರ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಗುಣಮಟ್ಟದ ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಶಿಕ್ಷಣ ಬಜೆಟ್‌ಗೆ ಸಾವಿರಾರು ಕೋಟಿ ರೂ. ಮೀಸಲಿಡುವ ಸರ್ಕಾರ, ಮೂಲಸೌಕರ್ಯ, ಶಿಕ್ಷಕರ ನಿಯೋಜನೆ ಮತ್ತು ವಾಹನ ಸೌಲಭ್ಯಕ್ಕಾಗಿ ಖಾಸಗಿ ಶಾಲೆಗಳ ಮುಂದೆ ಜೋಳಿಗೆ ಹಿಡಿಯುವುದು ಕಲ್ಯಾಣ ರಾಜ್ಯದ ಆಶಯಕ್ಕೆ ಧಕ್ಕೆ ತರುವುದಿಲ್ಲವೇ? ಸರ್ಕಾರ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಹೊರಗುತ್ತಿಗೆ ನೀಡುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸರ್ಕಾರಿ ಶಾಲೆಗೆ ಟೊಯೊಟೊ ಅಥವಾ ಯಾವುದೇ ಖಾಸಗಿ ಶಾಲೆಯ ಹೆಸರನ್ನು ಸೇರಿಸಲು ಅವಕಾಶ ನೀಡುವುದು ಶಾಲೆಗಳ ಸಾರ್ವಜನಿಕ ಅಸ್ಮಿತೆಯನ್ನು ಕುಗ್ಗಿಸಬಹುದು. ಸರ್ಕಾರಿ ಶಾಲೆ ಎಂಬುದು ಪ್ರಜಾಪ್ರಭುತ್ವದ ಸಮಾನತೆಯ ಸಂಕೇತ. ಅಲ್ಲಿ ಕಾರ್ಪೊರೇಟ್ ಲಾಂಛನಗಳು ರಾರಾಜಿಸಿದರೆ, ಬಡ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಮೂಡುವ ಅಪಾಯವಿರುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಇದನ್ನು ಶಿಕ್ಷಣ ಸೇವೆಯ ಬದಲು ತಮ್ಮ ಜಾಹೀರಾತು ಫಲಕವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಖಾಸಗಿ ಶಾಲೆಯ ಶಿಕ್ಷಕರು ಸರ್ಕಾರಿ ಶಾಲೆಗೆ ಬಂದು ಪಾಠ ಮಾಡುವುದು ಪ್ರಾಯೋಗಿಕವಾಗಿ ಎಷ್ಟು ಸರಿ? ಸರ್ಕಾರಿ ಶಿಕ್ಷಕರ ವೇತನ, ಅರ್ಹತೆ ಹಾಗೂ ಖಾಸಗಿ ಶಿಕ್ಷಕರ ಕಾರ್ಯವೈಖರಿಯ ನಡುವೆ ಸಮನ್ವಯ ಸಾಧ್ಯವೇ? ಒಂದೇ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರು ಮತ್ತು ಖಾಸಗಿ ಶಿಕ್ಷಕರ ನಡುವೆ ಆಡಳಿತಾತ್ಮಕ ಮೇಲಾಟ ಅಥವಾ ಅಸಮಾಧಾನ ಸೃಷ್ಟಿಯಾಗುವುದಿಲ್ಲವೇ? ಖಾಸಗಿ ಶಾಲೆಯವರು ಕಳುಹಿಸುವ ಶಿಕ್ಷಕರ ಜವಾಬ್ದಾರಿ ಮತ್ತು ಪಠ್ಯಕ್ರಮದ ಬದ್ಧತೆಯನ್ನು ಯಾರು ಮೇಲ್ವಿಚಾರಣೆ ಮಾಡುತ್ತಾರೆ? ಖಾಸಗಿ ಶಾಲೆಗಳು 50 ಸಾವಿರದಿಂದ 2 ಲಕ್ಷ ರೂ.ವರೆಗೆ ಶುಲ್ಕ ವಸೂಲಿ ಮಾಡುತ್ತಿವೆ ಎಂಬುದನ್ನು ಸರ್ಕಾರವೇ ಉಲ್ಲೇಖಿಸಿದೆ. ಈಗ ಈ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ನಿರ್ವಹಣೆ ಮಾಡಬೇಕಾದರೆ, ಆ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಮ್ಮಲ್ಲಿ ಓದುತ್ತಿರುವ ಮಧ್ಯಮ ವರ್ಗದ ಪೋಷಕರ ಶಾಲಾ ಶುಲ್ಕದ ಮೇಲೆ ವರ್ಗಾಯಿಸುವುದಿಲ್ಲ ಎಂಬುದಕ್ಕೆ ಏನು ಖಾತರಿ?
ಬೆಂಗಳೂರಿನ ಮೇಲಿನ ಒತ್ತಡ ಮತ್ತು ಗ್ರಾಮೀಣ ವಾಸ್ತವ
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಹಾಗೂ 1.20 ಲಕ್ಷ ವಾಹನಗಳ ದಟ್ಟಣೆಗೆ ಶಿಕ್ಷಣ ಮತ್ತು ಉದ್ಯೋಗವೇ ಮೂಲ ಕಾರಣ. ಗ್ರಾಮೀಣ ಮಟ್ಟದಲ್ಲೇ ಅತ್ಯುತ್ತಮ ಶಿಕ್ಷಣ ಸಿಕ್ಕರೆ ಬೆಂಗಳೂರಿನ ಮೇಲಿನ ವಲಸೆಯ ಒತ್ತಡ ತಗ್ಗುತ್ತದೆ ಎಂಬ ಸರ್ಕಾರದ ವಾದ ಅತ್ಯಂತ ತಾರ್ಕಿಕವಾಗಿದೆ. ಆದರೆ, ಶಾಲೆಗಳಿಗೆ ಕೇವಲ ಸುಣ್ಣ-ಬಣ್ಣ ಬಳಿದು, ಖಾಸಗಿ ಬಸ್ಸುಗಳನ್ನು ಕೊಟ್ಟುಬಿಟ್ಟರೆ ವಲಸೆ ನಿಲ್ಲುತ್ತದೆಯೇ? ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ, ಉದ್ಯೋಗ ಆಧಾರಿತ ತರಬೇತಿ ಮತ್ತು ಸ್ಥಿರ ಶೈಕ್ಷಣಿಕ ವಾತಾವರಣ ನಿರ್ಮಾಣವಾಗದ ಹೊರತು ವಲಸೆ ತಡೆಯುವುದು ಕಷ್ಟಸಾಧ್ಯ. ಖಾಸಗಿ ಸಹಭಾಗಿತ್ವ ಸಂಪೂರ್ಣ ತಪ್ಪು ಎಂದಲ್ಲ. ಆದರೆ ಅದು ಸರ್ಕಾರದ ನಿಯಂತ್ರಣದಲ್ಲಿರಬೇಕು. ಸಿಎಸ್‌ಆರ್ ನೀಡುವ ಕಂಪನಿಗಳು ಅಥವಾ ಶಾಲೆಗಳು ಸರ್ಕಾರಿ ಶಾಲೆಯ ಆಡಳಿತ ಅಥವಾ ಜಮೀನಿನ ಮೇಲೆ ಯಾವುದೇ ಹಕ್ಕು ಸಾಧಿಸದಂತೆ ಕಠಿಣ ನಿಯಮಾವಳಿ ರೂಪಿಸಬೇಕು. ಖಾಸಗಿ ಶಿಕ್ಷಕರ ಮೇಲೆ ಅವಲಂಬಿತವಾಗುವ ಬದಲು, ಸರ್ಕಾರವೇ ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಖಾಸಗಿ ಶಾಲೆಗಳು ಲ್ಯಾಬ್, ಕಂಪ್ಯೂಟರ್ ನೀಡಲಿ; ಆದರೆ ಪಠ್ಯಕ್ರಮ, ಬೋಧನೆ ಮತ್ತು ಆಡಳಿತ ಸರ್ಕಾರದ ಸುಪರ್ದಿಯಲ್ಲೇ ಇರಬೇಕು.

