x

ಗುಲಾಬಿ ಮಾರ್ಗದಲ್ಲಿ ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ

ಸಿಲಿಕಾನ್‌ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ‘ನಮ್ಮ ಮೆಟ್ರೋ’ ಸಜ್ಜಾಗಿ ನಿಂತಿದೆ. ಬಹುನಿರೀಕ್ಷಿತ ಗುಲಾಬಿ ಮಾರ್ಗದ ಆರಂಭಕ್ಕೆ ಇದೀಗ ದಿನಗಣನೆ ಆರಂಭವಾಗಿದೆ.


ಸಿಲಿಕಾನ್‌ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ‘ನಮ್ಮ ಮೆಟ್ರೋ’ ಸಜ್ಜಾಗಿ ನಿಂತಿದೆ. ಬಹುನಿರೀಕ್ಷಿತ ಗುಲಾಬಿ ಮಾರ್ಗದ ಆರಂಭಕ್ಕೆ ಇದೀಗ ದಿನಗಣನೆ ಆರಂಭವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಲಿರುವ ಹೊಸ ಮೆಟ್ರೋ ರೈಲುಗಳ ಕಾರ್ಯಾಚರಣೆಗೆ ರೈಲ್ವೆ ಮಂಡಳಿ ತಾತ್ಕಾಲಿಕ ಅನುಮೋದನೆ ನೀಡಿದೆ. ಹೀಗಾಗಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ನಿರ್ಮಿಸಿರುವ ಎತ್ತರಿಸಿದ ಮಾರ್ಗದಲ್ಲಿ ವ ಕೆಲವೇ ವಾರಗಳಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.

ರೈಲ್ವೆ ಮಂಡಳಿಯಿಂದ ದೊರೆತಿರುವ ಈ ಮಹತ್ವದ ತಾತ್ಕಾಲಿಕ ಅನುಮೋದನಾ ಪತ್ರವನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ ಸಲ್ಲಿಸಬೇಕಿರುವ ಅಧಿಕೃತ ದಾಖಲೆಗಳೊಂದಿಗೆ ಲಗತ್ತಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ. ಸೆಪ್ಟೆಂಬರ್‌ ಅಂತ್ಯದೊಳಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ ಈ ಮಾರ್ಗದಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆಯಿದ್ದು, ತಪಾಸಣೆ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಗುಲಾಬಿ ಮಾರ್ಗವನ್ನು ಪ್ರಯಾಣಿಕರ ವಾಣಿಜ್ಯ ಸೇವೆಗೆ ಮುಕ್ತಗೊಳಿಸುವ ನಿರೀಕ್ಷೆಯಿದೆ.

80 ಕಿ.ಮೀ ವೇಗದಲ್ಲಿ ರೈಲು ಸಂಚಾರ

ಇನ್ನು ಬಿಎಂಆರ್‌ಸಿಎಲ್‌ಗೆ ಕಳುಹಿಸಿರುವ ಅಧಿಕೃತ ಆದೇಶದಲ್ಲಿ ರೈಲ್ವೆ ಮಂಡಳಿ ರೈಲುಗಳ ವೇಗಕ್ಕೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಾದ ಮಿತಿಗಳು ಮತ್ತು ಮಾರ್ಗಸೂಚಿಗಳನ್ನು ವಿಧಿಸಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಒಟ್ಟು 7.5 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ರೈಲುಗಳು ಗರಿಷ್ಠ 80 ಕಿ.ಮೀ ವೇಗದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.

ರೈಲಿನ ಏರ್‌ ಸಸ್ಪೆನ್ಷನ್‌ ವ್ಯವಸ್ಥೆಯ ದ್ವಿತೀಯ ಹಂತವು ನಿಷ್ಕ್ರಿಯಗೊಂಡಿರುವ ತುರ್ತು ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿಯನ್ನು 49 ಕಿ.ಮೀಗೆ ಇಳಿಸಬೇಕು ಎಂದು ರೈಲ್ವೆ ಮಂಡಳಿ ಸೂಚಿಸಿದೆ. ಸದ್ಯ ಈ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಗ್ರೇಡ್‌ ಆಫ್‌ ಆಟೊಮೇಷನ್‌-2, ಅಂದರೆ ಗೋಎ-2 ಹಂತಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಗೋಎ-2 ಎಂದರೆ ಅರೆ ಸ್ವಯಂಚಾಲಿತ ರೈಲು ನಿಯಂತ್ರಣ ವ್ಯವಸ್ಥೆಯಾಗಿದ್ದು, ಈ ಹಂತದಲ್ಲಿ ಚಾಲಕನ ಪಾತ್ರ ಮುಂದುವರಿಯುತ್ತದೆ.

ಚಾಲಕರಹಿತ ರೈಲುಗಳಿಗೆ ಪ್ರತ್ಯೇಕ ಅನುಮೋದನೆ

ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಹಂತದ ಸ್ವಯಂಚಾಲಿತ ವ್ಯವಸ್ಥೆಯಡಿ ಚಾಲಕರಹಿತ ಮೆಟ್ರೋ ರೈಲುಗಳನ್ನು ಓಡಿಸಲು ಪ್ರತ್ಯೇಕ ಅನುಮೋದನೆ ಪಡೆಯಬೇಕಾಗುತ್ತದೆ. ಇದಕ್ಕಾಗಿ ‘ಅನ್‌ಅಟೆಂಡೆಡ್‌ ಟ್ರೈನ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ನ ಸಂಪೂರ್ಣ ಸಾಮರ್ಥ್ಯವನ್ನು ಪರೀಕ್ಷಿಸಬೇಕು. ಇದರ ಜತೆಗೆ ಮೂರನೇ ವ್ಯಕ್ತಿ ಅಥವಾ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ ಸಂಸ್ಥೆ, ಅಂದರೆ ಐಎಸ್‌ಎ ಮೂಲಕ ಸುರಕ್ಷತಾ ಮೌಲ್ಯಮಾಪನ ನಡೆಸುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ಅನುಮೋದನೆ ದೊರೆತ ತಕ್ಷಣ, ರಾಜ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟು ಯಾವುದೇ ದಿನದಿಂದಲೂ ವಾಣಿಜ್ಯ ಸೇವೆ ಆರಂಭಿಸಲು ಬಿಎಂಆರ್‌ಸಿಎಲ್‌ ಸಂಪೂರ್ಣ ಸಿದ್ಧವಾಗಿದೆ ಎಂದು ನಿಗಮ ತಿಳಿಸಿದೆ. ಹೀಗಾಗಿ ಸುರಕ್ಷತಾ ಪರಿಶೀಲನೆ ಮತ್ತು ಅಗತ್ಯ ಅನುಮೋದನೆಗಳು ಪೂರ್ಣಗೊಂಡ ಬಳಿಕ ಗುಲಾಬಿ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.

ಹಲವು ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ

ಗುಲಾಬಿ ಮಾರ್ಗದ ಈ ಎತ್ತರಿಸಿದ ಭಾಗ ಆರಂಭವಾದ ಬಳಿಕ ಬೆಂಗಳೂರಿನ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆಯಾಗಲಿದೆ. ಕಾಳೇನ ಅಗ್ರಹಾರ, ಹುಳಿಮಾವು, ಭಾರತೀಯ ನಿರ್ವಹಣಾ ಸಂಸ್ಥೆ, ಅಂದರೆ ಐಐಎಂಬಿ, ಜೆ.ಪಿ. ನಗರ ನಾಲ್ಕನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಭಾಗದ ಪ್ರಯಾಣಿಕರಿಗೆ ಈ ಮಾರ್ಗದಿಂದ ಹೆಚ್ಚಿನ ಅನುಕೂಲವಾಗಲಿದೆ.

ವಿಶೇಷವಾಗಿ ದಕ್ಷಿಣ ಬೆಂಗಳೂರಿನ ಈ ಭಾಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆಯ ಮತ್ತೊಂದು ಪ್ರಮುಖ ಆಯ್ಕೆ ಲಭ್ಯವಾಗಲಿದ್ದು, ಮೆಟ್ರೋ ಸಂಪರ್ಕದಿಂದ ಪ್ರಯಾಣದ ಸಮಯ ಮತ್ತು ರಸ್ತೆ ಸಾರಿಗೆಯ ಮೇಲಿನ ಅವಲಂಬನೆ ಕಡಿಮೆಯಾಗುವ ನಿರೀಕ್ಷೆಯಿದೆ.

364.87 ಕೋಟಿ ರೂ.ವೆಚ್ಚದಲ್ಲಿ ಎತ್ತರಿಸಿದ ಮಾರ್ಗ

ಇನ್ನು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ನಿರ್ಮಿಸಲಾಗಿರುವ 7.5 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗದ ನಾಗರಿಕ ಕಾಮಗಾರಿಗಾಗಿ ಜಿ.ಆರ್. ಇನ್‌ಫ್ರಾ ಪ್ರಾಜೆಕ್ಟ್‌ ಸಂಸ್ಥೆಗೆ 364.87 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ನೀಡಲಾಗಿತ್ತು. ಈ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಮಾರ್ಗವನ್ನು ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುವ ಹಂತಕ್ಕೆ ಕಾಮಗಾರಿ ತಲುಪಿದೆ.

ಇದರ ಜತೆಗೆ ಏಷ್ಯಾದಲ್ಲೇ ಅತಿ ದೊಡ್ಡ ಅಂತರ್‌ಸಂಪರ್ಕ ಮೆಟ್ರೋ ನಿಲ್ದಾಣಗಳಲ್ಲಿ ಒಂದಾಗಿರುವ ಜಯದೇವ ಜಂಕ್ಷನ್‌ ನಿಲ್ದಾಣವನ್ನು ಸುಮಾರು 130 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ವಿವಿಧ ಮೆಟ್ರೋ ಮಾರ್ಗಗಳ ಸಂಪರ್ಕಕ್ಕೆ ಪ್ರಮುಖ ಕೊಂಡಿಯಾಗಿರುವ ಜಯದೇವ ಜಂಕ್ಷನ್‌ ನಿಲ್ದಾಣವು ಗುಲಾಬಿ ಮಾರ್ಗದ ಕಾರ್ಯಾಚರಣೆಯಲ್ಲೂ ಮಹತ್ವದ ಪಾತ್ರ ವಹಿಸಲಿದೆ.

Read More
Next Story