
ಪಿಂಕ್ ಲೈನ್ ಉದ್ಘಾಟನೆಯಲ್ಲಿ ಕೃಷ್ಣ ಬೈರೇಗೌಡ ಭಾಷಣಕ್ಕೆ ಕೊಕ್; ತೀವ್ರ ಆಕ್ರೋಶ
ಮೆಟ್ರೋ ನಿರ್ಮಾಣದಲ್ಲಿ ರಾಜ್ಯ ಸರ್ಕಾರದ ಬಹುಪಾಲು ತೆರಿಗೆ ಹಣವಿದ್ದರೂ, ನಗರ ಉಸ್ತುವಾರಿ ಸಚಿವರಿಗೆ ಮಾತನಾಡಲು ಅವಕಾಶ ನಿರಾಕರಣೆಗೆ ಸಚಿವ ಕೃಷ್ಣ ಬೇರೇಗೌಡ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಭೇಟಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಆದರೆ, ಈ ಐತಿಹಾಸಿಕ ಕಾರ್ಯಕ್ರಮ ಆರಂಭವಾಗುವ ಮುನ್ನವೇ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಶಿಷ್ಟಾಚಾರದ ಸಂಘರ್ಷ ಭುಗಿಲೆದ್ದಿದೆ. ಪ್ರಧಾನಿ ಭಾಗವಹಿಸುವ ವೇದಿಕೆ ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಖಾತೆಯ ಸಚಿವ ಕೃಷ್ಣ ಬೈರೇಗೌಡ ಅವರ ಭಾಷಣವನ್ನು ಏಕಾಏಕಿ ರದ್ದುಗೊಳಿಸಲಾಗಿದ್ದು, ಇದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಕಾರ್ಯಕ್ರಮದ ಆರಂಭಿಕ ಸಿದ್ಧತಾ ಪಟ್ಟಿಯಲ್ಲಿ ಸಚಿವ ಕೃಷ್ಣಬೈರೇಗೌಡ ಭಾಷಣ ನಿಗದಿಯಾಗಿತ್ತು. ಆದರೆ, ನಂತರ ಬಿಡುಗಡೆಯಾದ ಪರಿಷ್ಕೃತ ಅಂತಿಮ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಮೆಟ್ರೋ ನಿರ್ಮಾಣದಲ್ಲಿ ರಾಜ್ಯ ಸರ್ಕಾರದ ಬಹುಪಾಲು ತೆರಿಗೆ ಹಣವಿದ್ದರೂ, ನಗರದ ಉಸ್ತುವಾರಿ ವಹಿಸಿರುವ ಸಚಿವರಿಗೇ ವೇದಿಕೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿರುವುದಕ್ಕೆ ಸ್ವತಃ ಕೃಷ್ಣ ಬೈರೇಗೌಡ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಭಾಷಣವನ್ನು ಅಂತಿಮ ಕ್ಷಣದಲ್ಲಿ ರದ್ದುಗೊಳಿಸಿರುವುದನ್ನು ಖಂಡಿಸಿರುವ ಸಚಿವರು, ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. "ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್! ಆದರೆ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ." "ಮೆಟ್ರೋ ಯೋಜನೆಗೆ ಬಹುತೇಕ ಬಂಡವಾಳ ಖರ್ಚು ನಮ್ಮದು (ರಾಜ್ಯದ್ದು). ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ. ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು; ಆದರೆ, ಬೆಂಗಳೂರಿನ ಅಭಿವೃದ್ಧಿಗೆ ನಾವು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ನಾವು ಇನ್ನೂ ಹೆಚ್ಚಿನ ಪರಿಶ್ರಮದಿಂದ ನಗರದ ಜನರಿಗಾಗಿ ಕೆಲಸ ಮಾಡುತ್ತೇವೆ" ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಮೊದಲು ನಿಗದಿಯಾಗಿದ್ದೇನು? ಪರಿಷ್ಕೃತ ಪಟ್ಟಿಯಲ್ಲಿ ಬದಲಾಗಿದ್ದೇನು?
ಗುಲಾಬಿ ಮಾರ್ಗದ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ನಂತರ, ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಭಾರತೀಯ ವ್ಯವಸ್ಥಾಪನಾ ಸಂಸ್ಥೆಯ ಸಭಾಂಗಣದಲ್ಲಿ ಪ್ರಧಾನಿಯವರ ಮುಖ್ಯ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದೆ. ರಾಷ್ಟ್ರಗೀತೆ ಮತ್ತು ನಾಡಗೀತೆಯ ಬಳಿಕ, ಸ್ಥಳೀಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಸ್ವಾಗತ ಭಾಷಣ ನಿಗದಿಯಾಗಿತ್ತು. ಪ್ರೋಟೋಕಾಲ್ ಪ್ರಕಾರ ಸ್ಥಳೀಯ ಅಭಿವೃದ್ಧಿ ಸಚಿವರಾಗಿರುವ ಕೃಷ್ಣ ಬೈರೇಗೌಡರು ತೇಜಸ್ವಿ ಸೂರ್ಯ ಅವರ ನಂತರ ಮಾತನಾಡಬೇಕಿತ್ತು. ಆದರೆ ಹೊಸ ಪಟ್ಟಿಯಲ್ಲಿ ಕೃಷ್ಣ ಬೈರೇಗೌಡರ ಭಾಷಣದ ಭಾಗಕ್ಕೆ ಕತ್ತರಿ ಹಾಕಲಾಗಿದೆ. ಹೊಸ ವೇಳಾಪಟ್ಟಿಯಂತೆ ತೇಜಸ್ವಿ ಸೂರ್ಯ ಅವರ ಸ್ವಾಗತ ಭಾಷಣ ಮುಗಿಯುತ್ತಿದ್ದಂತೆಯೇ ನೇರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಲಿದ್ದಾರೆ. ತದನಂತರ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಮಾತು ಮುಗಿದ ತಕ್ಷಣವೇ ಯಶವಂತಪುರ - ಮಂಗಳೂರು - ಮಡಗಾಂವ್ ನಡುವೆ ಸಂಚರಿಸಲಿರುವ ನೂತನ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಾಗುತ್ತದೆ. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭವನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ.
ಒಕ್ಕೂಟ ವ್ಯವಸ್ಥೆಯ ತಿಕ್ಕಾಟಕ್ಕೆ ವೇದಿಕೆಯಾಯಿತೇ ಮೆಟ್ರೋ?
ಬೆಂಗಳೂರು ಮೆಟ್ರೋ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಅನುಪಾತದ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದ್ದು, ಜಮೀನು ಸ್ವಾಧೀನ ಸೇರಿದಂತೆ ಯೋಜನೆಯ ಸಿಂಹಪಾಲು ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿದೆ. ಹೀಗಿರುವಾಗ, ನಗರದ ಉಸ್ತುವಾರಿ ಸಚಿವರನ್ನೇ ವೇದಿಕೆಯಲ್ಲಿ ಮಾತನಾಡದಂತೆ ನಿರ್ಬಂಧಿಸಿರುವುದು ರಾಜ್ಯದ ಹಕ್ಕಿನ ಮೇಲಿನ ಗದಾಪ್ರಹಾರ ಎಂದು ಆಡಳಿತಾರೂಢ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಯಾವ ಕಾರಣಕ್ಕಾಗಿ ಸಚಿವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಯಿತು ಎಂಬ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯವಾಗಲಿ ಅಥವಾ ಕಾರ್ಯಕ್ರಮ ಆಯೋಜಕರಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಉದ್ದೇಶಪೂರ್ವಕವಾಗಿಯೇ ರಾಜ್ಯದ ನಾಯಕರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಪ್ರಧಾನಿ ಮೋದಿಯವರ ಈ ಭೇಟಿಯು ಅಭಿವೃದ್ಧಿಯ ಸಂಭ್ರಮಕ್ಕಿಂತ ಹೆಚ್ಚಾಗಿ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.

