ನಾಗಮಲೆ ಯಾತ್ರೆಗೆ ಬ್ರೇಕ್‌! ಚಿರತೆ ದಾಳಿ ಬೆನ್ನಲ್ಲೇ ಭಕ್ತರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ
x

ಚಾಮರಾಜನಗರದ ನಾಗಮಲೆ ಕ್ಷೇತ್ರಕ್ಕೆ ಅರಣ್ಯ ಇಲಾಖೆ ತಾತ್ಕಾಲಿಕ ನಿಷೇಧ ಹೇರಿದೆ.

ನಾಗಮಲೆ ಯಾತ್ರೆಗೆ ಬ್ರೇಕ್‌! ಚಿರತೆ ದಾಳಿ ಬೆನ್ನಲ್ಲೇ ಭಕ್ತರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ

ಚಾಮರಾಜನಗರದ ನಾಗಮಲೆ ಕ್ಷೇತ್ರಕ್ಕೆ ಅರಣ್ಯ ಇಲಾಖೆ ತಾತ್ಕಾಲಿಕ ನಿಷೇಧ ಹೇರಿದೆ. ಚಿರತೆ ದಾಳಿ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ಆನ್‌ಲೈನ್ ನೋಂದಣಿ ಹಾಗೂ ಕಠಿಣ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ನಾಗಮಲೆ ಕ್ಷೇತ್ರಕ್ಕೆ ಅರಣ್ಯ ಇಲಾಖೆ ಸದ್ಯಕ್ಕೆ ನಿರ್ಬಂಧ ಹೇರಿದ್ದು, ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ದಟ್ಟ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಚಿರತೆಯೊಂದು ಬಾಲಕನನ್ನು ಬಲಿಪಡೆದ ಭೀಕರ ಘಟನೆಯ ಬೆನ್ನಲ್ಲೇ ಈ ಕ್ರಮ ಅನಿವಾರ್ಯವಾಗಿದೆ. ಕಾಡುಪ್ರಾಣಿಗಳ ಸಂಚಾರ ಹೆಚ್ಚಿರುವ ಈ ಸಾಹಸಮಯ ಹಾದಿಯಲ್ಲಿ ಭಕ್ತರ ಪ್ರಾಣಕ್ಕೆ ಅಪಾಯವಿರುವ ಕಾರಣ, ಅರಣ್ಯ ಅಧಿಕಾರಿಗಳು ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಾಗಮಲೆ ಯಾತ್ರೆಯನ್ನು ಹೆಚ್ಚು ವ್ಯವಸ್ಥಿತಗೊಳಿಸಲು ಇಲಾಖೆಯು ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಹಿಂದೆ ಆನ್‌ಲೈನ್ ನೋಂದಣಿ ವ್ಯವಸ್ಥೆ ಅಸ್ತಿತ್ವದಲ್ಲಿದ್ದರೂ ಅದರ ಪಾಲನೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ, ಇನ್ನು ಮುಂದೆ ನೋಂದಣಿಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಇದರೊಂದಿಗೆ ಅರಣ್ಯ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಅಧಿಕೃತ ಗೈಡ್‌ಗಳ ಮಾರ್ಗದರ್ಶನದಲ್ಲಿ ಮಾತ್ರ ಯಾತ್ರೆಗೆ ಅವಕಾಶ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ.

ಸಂಪೂರ್ಣ ಭದ್ರತಾ ವ್ಯವಸ್ಥೆಗಳು ಪೂರ್ಣಗೊಂಡು ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ ಸಿಗುವವರೆಗೂ ಭಕ್ತರು ನಾಗಮಲೆ ಕಡೆಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತರು ಪ್ರಸ್ತುತ ಪರಿಸ್ಥಿತಿಯನ್ನು ಅರ್ಥೈಸಿ, ವಿನಾಕಾರಣ ಅಪಾಯಕಾರಿ ದಾರಿಯಲ್ಲಿ ಸಾಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬಾರದೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಸುರಕ್ಷತಾ ಕ್ರಮಗಳು ಪೂರ್ಣಗೊಂಡ ನಂತರವಷ್ಟೇ ಈ ಪವಿತ್ರ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಪುನಃ ಅವಕಾಶ ಕಲ್ಪಿಸಲಾಗುವುದು.

ಬಾಲಕನ ಬಲಿ ಪಡೆದಿದ್ದ ಚಿರತೆ

ಚಾಮರಾಜನಗರ ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಚಿರತೆಯೊಂದು ಅಪ್ಪ-ಅಮ್ಮನ ಕಣ್ಣೆದುರೇ ಎಂಟು ವರ್ಷದ ಬಾಲಕನನ್ನು ಬಲಿ ಪಡೆದಿತ್ತು. ಮಹದೇಶ್ವರ ಬೆಟ್ಟಕ್ಕೆ ಹರಕೆ ತೀರಿಸಲು ಬಂದಿದ್ದ ಭಕ್ತರ ಕುಟುಂಬವೊಂದು ನಾಗಮಲೆ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಕತ್ತಲೆಯ ಸಮಯದಲ್ಲಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಚಿರತೆಯು ಮಿಂಚಿನ ವೇಗದಲ್ಲಿ ದಾಳಿ ಮಾಡಿ, ಬಾಲಕನ ಕುತ್ತಿಗೆ ಹಿಡಿದು ದಟ್ಟ ಕಾಡಿನೊಳಗೆ ಎಳೆದೊಯ್ದಿತ್ತು. ಕೂಗಾಟ ಕೇಳಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿದರಾದರೂ, ಅಷ್ಟರಲ್ಲಾಗಲೇ ಚಿರತೆಯು ಬಾಲಕನನ್ನು ಬಲಿ ಪಡೆದಿತ್ತು. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಈ ಭಾಗದಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚಿದ್ದರೂ ಭದ್ರತಾ ವ್ಯವಸ್ಥೆಯ ಕೊರತೆಯಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.


Read More
Next Story