ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ವಜ್ರಮುಷ್ಟಿ ಕಾಳಗ ರದ್ದು
x

ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ 'ವಜ್ರಮುಷ್ಟಿ ಕಾಳಗ' ರದ್ದು

ಮುಹೂರ್ತ ಮುಗಿದುಹೋದ ಪರಿಣಾಮ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅನಿವಾರ್ಯವಾಗಿ ಕಾಳಗವನ್ನು ರದ್ದುಗೊಳಿಸಿ ವಿಜಯಯಾತ್ರೆ ಕೈಗೊಂಡರು.


Click the Play button to hear this message in audio format

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಮತ್ತು ರಾಜವಂಶಸ್ಥರ ಖಾಸಗಿ ಶರನ್ನವರಾತ್ರಿಯ 11ನೇ ದಿನವಾದ ವಿಜಯದಶಮಿಯಂದು ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಸಾಂಪ್ರದಾಯಿಕ ವೈಭವದೊಂದಿಗೆ ನೆರವೇರಿದವು. ಆದರೆ, ಇದೇ ವೇಳೆ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಮೈಸೂರು ಒಡೆಯರ್ ವಂಶಸ್ಥರು ಶ್ರದ್ಧಾಭಕ್ತಿಯಿಂದ ಕಾಪಾಡಿಕೊಂಡು ಬಂದಿದ್ದ ನೂರಾರು ವರ್ಷಗಳ ಐತಿಹಾಸಿಕ ಮತ್ತು ರೋಚಕ ಸಂಪ್ರದಾಯವಾದ ‘ವಜ್ರಮುಷ್ಟಿ ಕಾಳಗ’ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರದ್ದಾಗುವ ಮೂಲಕ ಭಾರೀ ಆಘಾತ ಹಾಗೂ ಬೇಸರಕ್ಕೆ ಕಾರಣವಾಗಿದೆ.

ಪೊಲೀಸ್ ಇಲಾಖೆ ಹಾಗೂ ಅರಮನೆ ಆಡಳಿತ ವ್ಯವಸ್ಥೆಯ ನಡುವಿನ ಸಮನ್ವಯದ ಕೊರತೆ, ಪೊಲೀಸರ ಉದ್ಧಟತನ ಮತ್ತು ನಿರ್ಲಕ್ಷ್ಯದಿಂದಾಗಿ ಜಟ್ಟಿಗಳು ನಿಗದಿತ ಮುಹೂರ್ತಕ್ಕೆ ಕಲ್ಯಾಣ ತೊಟ್ಟಿಯನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದರಿಂದ ಮುಹೂರ್ತ ಮುಗಿದುಹೋದ ಪರಿಣಾಮ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅನಿವಾರ್ಯವಾಗಿ ಕಾಳಗವನ್ನು ರದ್ದುಗೊಳಿಸಿ ವಿಜಯಯಾತ್ರೆ ಕೈಗೊಂಡರು. ಈ ಘಟನೆಯು ನಾಡಿನ ಇತಿಹಾಸ ಪ್ರೇಮಿಗಳು, ದಸರಾ ಆಸಕ್ತರು ಹಾಗೂ ಜಟ್ಟಿ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪರಂಪರೆಯಂತೆ ಆರಂಭವಾಗಿದ್ದ ವಿಜಯದಶಮಿ ಪೂಜೆಗಳು

ಅಕ್ಟೋಬರ್ 24ರ ಮುಂಜಾನೆಯಿಂದಲೇ ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿಯ ಧಾರ್ಮಿಕ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ಆರಂಭಗೊಂಡಿದ್ದವು. ರಾಜವಂಶಸ್ಥ ಯದುವೀರ್ ಒಡೆಯರ್ ಅವರು ರಾಜಗುರುಗಳು ಹಾಗೂ ಅರಮನೆಯ ಪ್ರಧಾನ ಅರ್ಚಕರ ಮಾರ್ಗದರ್ಶನದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿದರು.

ಬೆಳಗ್ಗೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಿತು. ನಂತರ ಅರಮನೆಯ ಆನೆ ಬಾಗಿಲಿನಲ್ಲಿ ರಾಜಪರಂಪರೆಯ ಸಂಕೇತಗಳಾದ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬೆಳ್ಳಿ ಪಲ್ಲಕ್ಕಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಕಲ್ಯಾಣ ಮಂಟಪದಲ್ಲಿ ರಾಜವಂಶಸ್ಥರ ಐತಿಹಾಸಿಕ ಹಾಗೂ ಪುರಾತನ ಆಯುಧಗಳಿಗೆ ವಿಶೇಷ ಆಯುಧ ಪೂಜೆ ನೆರವೇರಿಸಲಾಯಿತು. ಧಾರ್ಮಿಕ ನಿಯಮಾವಳಿಗಳ ಪ್ರಕಾರ, ಈ ಆಯುಧ ಪೂಜೆ ಮುಗಿದ ತಕ್ಷಣ, ಯದುವೀರ್ ಒಡೆಯರ್ ಅವರು ವಿಜಯಯಾತ್ರೆ ಹೊರಡುವ ಮುನ್ನ ಅರಮನೆಯ ಕಲ್ಯಾಣ ತೊಟ್ಟಿಯಲ್ಲಿ ಜಟ್ಟಿಗಳ ನಡುವೆ ರಕ್ತತರ್ಪಣ ರೂಪದ ವಜ್ರಮುಷ್ಟಿ ಕಾಳಗ ನಡೆಯಬೇಕಿತ್ತು. ಆದರೆ, ಇಡೀ ಪ್ರಕ್ರಿಯೆಗೆ ಕಪ್ಪುಚುಕ್ಕೆ ಇಡುವಂತಹ ಘಟನೆ ಅರಮನೆಯ ಬಾಗಿಲಿನಲ್ಲಿ ನಡೆದುಹೋಯಿತು.

ಕಲ್ಯಾಣ ತೊಟ್ಟಿಯಲ್ಲಿ ಅಖಾಡ ಸಿದ್ಧ

ವಜ್ರಮುಷ್ಟಿ ಕಾಳಗಕ್ಕಾಗಿ ಹಲವು ತಿಂಗಳುಗಳಿಂದ ಕಠಿಣ ತಾಲೀಮು ನಡೆಸಿ, ಶರೀರ ದಂಡಿಸಿ ಬಂದಿದ್ದ ನಾಲ್ವರು ಪ್ರಸಿದ್ಧ ಜಟ್ಟಿಗಳ ನಡುವೆ ಈ ಬಾರಿ ಸೆಣಸಾಟ ನಿಗದಿಯಾಗಿತ್ತು. ಮೊದಲ ಜೋಡಿ ಬೆಂಗಳೂರಿನ ಚೇತನ್ ಜಟ್ಟಿ ಮತ್ತು ಮೈಸೂರಿನ ಮಹೇಶ್ ಜಟ್ಟಿ, ಎರಡನೇ ಜೋಡಿ ಚನ್ನಪಟ್ಟಣದ ತೇಜಸ್ ಜಟ್ಟಿ ಮತ್ತು ಚಾಮರಾಜನಗರದ ಸತೀಶ್ ಜಟ್ಟಿ. ಉಸ್ತಾದ್‌ಗಳ ಸಮ್ಮುಖದಲ್ಲಿ ಈ ನಾಲ್ವರು ಪೈಲ್ವಾನರು ತಮ್ಮ ಕೈಬೆರಳುಗಳಿಗೆ ವಜ್ರದಂತಹ ಗಟ್ಟಿಯಾದ ಪ್ರಾಣಿಯ ಕೊಂಬಿನಿಂದ ಮಾಡಿದ ಮುಷ್ಟಿ ಕವಚವನ್ನು ಧರಿಸಿ, ಪರಸ್ಪರ ತಲೆಯ ನೆತ್ತಿಗೆ ಹೊಡೆದು, ಮೊದಲ ರಕ್ತದ ಹನಿ ನೆಲಕ್ಕೆ ಬೀಳುವವರೆಗೆ ಕಾಳಗ ನಡೆಸುವುದು ಸಂಪ್ರದಾಯ. ರಾಜವಂಶಸ್ಥರು ಸ್ವತಃ ಸಿಂಹಾಸನದ ಸಮೀಪ ಕುಳಿತು ಈ ಕಾಳಗವನ್ನು ವೀಕ್ಷಿಸಿ, ರಕ್ತದ ಹನಿ ಬಿದ್ದ ತಕ್ಷಣ ಕಾಳಗ ನಿಲ್ಲಿಸಿ, ಗಾಯಗೊಂಡ ಜಟ್ಟಿಗಳಿಗೆ ಸನ್ಮಾನಿಸಿ ದಕ್ಷಿಣೆ ನೀಡುವುದು ನೂರಾರು ವರ್ಷಗಳ ಪದ್ಧತಿ.

ಬಾಗಿಲಲ್ಲೇ ಜಟ್ಟಿಗಳನ್ನು ತಡೆದ ಪೊಲೀಸರು

ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸಲು ಜಟ್ಟಿಗಳು, ಅವರ ಉಸ್ತಾದ್‌ಗಳು ಮತ್ತು ಸಹಾಯಕರು ಪಾರಂಪರಿಕ ಉಡುಪಿನೊಂದಿಗೆ ನಿಗದಿತ ಸಮಯಕ್ಕಿಂತ ಮುಂಚೆಯೇ ಅರಮನೆಯ ಪ್ರವೇಶ ದ್ವಾರಕ್ಕೆ ಆಗಮಿಸಿದ್ದರು. ಆದರೆ, ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು ಜಟ್ಟಿಗಳನ್ನು ಒಳಗೆ ಪ್ರವೇಶಿಸಲು ಬಿಡದೆ ಗೇಟ್ ಬಳಿಯೇ ತಡೆದು ನಿಲ್ಲಿಸಿದರು ಎಂದು ಆರೋಪಿಸಲಾಗಿದೆ. "ನಾವು ಪರಂಪರೆಯ ಜಟ್ಟಿಗಳು, ಅರಮನೆಯೊಳಗೆ ನಡೆಯುವ ವಜ್ರಮುಷ್ಟಿ ಕಾಳಗಕ್ಕೆ ಹೋಗುತ್ತಿದ್ದೇವೆ, ಒಳಗೆ ಬಿಡಿ" ಎಂದು ಜಟ್ಟಿಗಳು ಮತ್ತು ಉಸ್ತಾದ್‌ಗಳು ದುಂಬಾಲು ಬಿದ್ದರೂ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕ್ಯಾರೇ ಎನ್ನಲಿಲ್ಲ. ಪಾಸ್‌ಗಳು ಮತ್ತು ಗುರುತಿನ ವಿಚಾರವಾಗಿ ಜಟ್ಟಿಗಳು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ, ತಳ್ಳಾಟ ಮತ್ತು ವಾಗ್ವಾದ ನಡೆಯಿತು. ಈ ಅನಗತ್ಯ ಗೊಂದಲ ಮತ್ತು ಗಲಾಟೆಯ ನಡುವೆ, ಅರಮನೆಯೊಳಗೆ ವಜ್ರಮುಷ್ಟಿ ಕಾಳಗಕ್ಕೆ ನಿಗದಿಯಾಗಿದ್ದ ಅತ್ಯಂತ ಪವಿತ್ರವಾದ ಶುಭ ಮುಹೂರ್ತ ಕಳೆದುಹೋಯಿತು. ಅರಮನೆಯ ಒಳಭಾಗದಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಜಟ್ಟಿಗಳ ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದರು. ಆದರೆ ಜಟ್ಟಿಗಳು ಬಾರದ ಕಾರಣ ಮತ್ತು ವಿಜಯಯಾತ್ರೆಯ ಮುಹೂರ್ತವೂ ಮೀರುತ್ತಿದ್ದ ಹಿನ್ನೆಲೆಯಲ್ಲಿ, ರಾಜವಂಶಸ್ಥರು ಅನಿವಾರ್ಯವಾಗಿ ವಜ್ರಮುಷ್ಟಿ ಕಾಳಗವನ್ನು ರದ್ದುಗೊಳಿಸಲು ನಿರ್ಧರಿಸಿದರು.

ಮುಗಿದುಹೋದ ಮುಹೂರ್ತ: ಬನ್ನಿಪೂಜೆ ಕೈಗೊಂಡ ಯದುವೀರ್

ಜಟ್ಟಿಕಾಳಗ ರದ್ದಾದ ಬೆನ್ನಲ್ಲೇ ಯದುವೀರ ಒಡೆಯರ್ ಅವರು ರಾಜ ಪರಂಪರೆಯ ಪುರಾತನ ಆಯುಧಗಳೊಂದಿಗೆ ಪಟ್ಟದ ಆನೆ, ನಿಶಾನೆ ಆನೆ, ಅರಮನೆ ಆನೆಗಳು ಹಾಗೂ ಮಂಗಳವಾದ್ಯಗಳ ಮುಂಚೂಣಿಯಲ್ಲಿ ವಿಜಯಯಾತ್ರೆ ಹೊರಟರು. ಅರಮನೆ ಆವರಣದಲ್ಲಿರುವ ಐತಿಹಾಸಿಕ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಿ, ಅಲ್ಲಿನ ಬನ್ನಿ ಮರಕ್ಕೆ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಸಲ್ಲಿಸಿದರು. ಬನ್ನಿ ಎಲೆಗಳನ್ನು ಮುಡಿದು, ವಿಜಯದ ಸಂಕೇತವಾಗಿ ಬನ್ನಿ ಮುರಿದು ಪುನಃ ಅಂಬಾವಿಲಾಸ ಅರಮನೆಗೆ ವಾಪಸ್ಸಾದರು. ಈ ಮೂಲಕ 11 ದಿನಗಳ ಕಾಲ ರಾಜವಂಶಸ್ಥರು ನಡೆಸಿಕೊಂಡು ಬಂದ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ತೆರೆಬಿದ್ದಿತು. ಇತ್ತ ಬಾಗಿಲಿನಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಹೇಗೋ ಒಳಗೆ ನುಗ್ಗಿದ ಜಟ್ಟಿಗಳು ಕಲ್ಯಾಣ ತೊಟ್ಟಿಗೆ ಬರುವಷ್ಟರಲ್ಲಿ ಮಹಾರಾಜರ ವಿಜಯಯಾತ್ರೆ ಆರಂಭವಾಗಿತ್ತು. "ನಾವು ಬಂದಿದ್ದೇವೆ, ಕಾಳಗ ನಡೆಸಲು ಅವಕಾಶ ಕೊಡಿ" ಎಂದು ಜಟ್ಟಿಗಳು ಮನವಿ ಮಾಡಿದರಾದರೂ, ಶಾಸ್ತ್ರದ ಪ್ರಕಾರ ರಾಜರ ಬನ್ನಿಪೂಜೆ ಮತ್ತು ವಿಜಯಯಾತ್ರೆ ಮುಗಿದ ಮೇಲೆ ಯಾವುದೇ ಕಾರಣಕ್ಕೂ ವಜ್ರಮುಷ್ಟಿ ಕಾಳಗ ಅಥವಾ ಯಾವುದೇ ರಕ್ತತರ್ಪಣ ಪೂಜೆಗಳನ್ನು ನಡೆಸುವಂತಿಲ್ಲ. ಹೀಗಾಗಿ ಪಾರಂಪರಿಕ ಕಾಳಗ ಸಂಪೂರ್ಣ ರದ್ದಾಯಿತು.

"ಜಟ್ಟಿಗಳ ಮೇಲೆ ಗೂಬೆ ಕೂರಿಸಬೇಡಿ": ಮಧು ಜಟ್ಟಿ ಆಕ್ರೋಶ

ಘಟನೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಟ್ಟಿ ಸಮಾಜದ ಮುಖಂಡ ಮಧು ಜಟ್ಟಿ ಅವರು ಅರಮನೆ ಆಡಳಿತ ಮತ್ತು ಪೊಲೀಸರ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. "ಜಟ್ಟಿಗಳು ತಡವಾಗಿ ಬಂದಿದ್ದರಿಂದ ಕಾಳಗ ರದ್ದಾಯಿತು ಎಂದು ಕೆಲವರು ನಮ್ಮ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು. ನಾವು ಬೆಳಗ್ಗೆ 7 ಗಂಟೆಗೇ ಅರಮನೆಯ ಗೇಟ್ ಬಳಿ ಹಾಜರಿದ್ದೆವು. ಆದರೆ ಪೊಲೀಸರು ನಮ್ಮನ್ನು ಅರಮನೆಯೊಳಗೆ ಬಿಡದೆ ಸತಾಯಿಸಿದರು. ನಮ್ಮ ಸಾಂಪ್ರದಾಯಿಕ ಉಡುಗೆಯನ್ನು ನೋಡಿಯೂ ಪೊಲೀಸರು ನಮ್ಮನ್ನು ಗುರುತಿಸಲಿಲ್ಲ, ಒಳಗೆ ಬಿಡದೆ ಅವಮಾನಿಸಿದರು. ಕೊನೆಗೆ ಮುಹೂರ್ತ ಮುಗಿದುಹೋಗಿದೆ ಎಂದು ನಮ್ಮನ್ನೇ ದೂಷಿಸಲಾಗುತ್ತಿದೆ. ಪೂಜೆ ಮುಗಿದ ಮೇಲೆ ಕಾಳಗ ಮಾಡಲು ಆಗುವುದಿಲ್ಲ ಎಂಬ ನಿಯಮ ನಮಗೂ ಗೊತ್ತು. ಇದಕ್ಕೆಲ್ಲ ಪೊಲೀಸ್ ಇಲಾಖೆಯ ಬೇಜವಾಬ್ದಾರಿತನ ಮತ್ತು ಆಡಳಿತ ವ್ಯವಸ್ಥೆಯ ಅಕ್ಷಮ್ಯ ನಿರ್ಲಕ್ಷ್ಯವೇ ನೇರ ಕಾರಣ," ಎಂದು ಕಣ್ಣೀರು ಮತ್ತು ಆಕ್ರೋಶದ ಧ್ವನಿಯಲ್ಲಿ ದೂರಿದರು.

Read More
Next Story