
ದಸರಾದಲ್ಲಿ ಕರಾವಳಿಯ ಕಂಬಳ ವೈಭವ: ತುಳುನಾಡಿನ ವೀರ ಕ್ರೀಡೆಯ ಅಬ್ಬರಕ್ಕೆ ಸಜ್ಜು
ದಸರಾ ಮಹೋತ್ಸವದ ಇತಿಹಾಸದಲ್ಲಿ ಮೊದಲ ಬಾರಿಗೆ ತುಳುನಾಡಿನ ಶೌರ್ಯದ ಪ್ರತೀಕವಾದ ಕಂಬಳವು ರಂಗೇರಲು ಸಜ್ಜಾಗಿದೆ. ಅ.18, 19ರಂದು ಐತಿಹಾಸಿಕ ಕ್ರೀಡಾ ಹಬ್ಬಕ್ಕೆ ವೇದಿಕೆ ಸಂಪೂರ್ಣ ಸಿದ್ಧವಾಗಿದೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತುಳುನಾಡಿನ ಅಸ್ಮಿತೆ ಮತ್ತು ಶೌರ್ಯದ ಪ್ರತೀಕವಾದ ಕಂಬಳವು ಮೈಸೂರಿನಲ್ಲಿ ರಂಗೇರಲು ಸಜ್ಜಾಗಿದೆ. ಕರಾವಳಿಯ ಮಣ್ಣಿನ ಕ್ರೀಡೆಯಾದ ಕಂಬಳದ ಗತ್ತು-ಗಾಂಭೀರ್ಯವನ್ನು ಮೈಸೂರಿನ ಅಂಗಳಕ್ಕೆ ಕೊಂಡೊಯ್ಯುವ ಮೂಲಕ ತುಳುನಾಡು ಮತ್ತು ಕರುನಾಡನ್ನು ಸಾಂಸ್ಕೃತಿಕವಾಗಿ ಬೆಸೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಅ.18 ಮತ್ತು 19ರಂದು ಮೈಸೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಕ್ರೀಡಾ ಹಬ್ಬಕ್ಕೆ ವೇದಿಕೆ ಸಂಪೂರ್ಣ ಸಿದ್ಧವಾಗಿದೆ.
ಮೈಸೂರಿನ ರಿಂಗ್ ರೋಡ್ ವ್ಯಾಪ್ತಿಯಲ್ಲಿರುವ ಸುಮಾರು 20 ಎಕರೆ ವಿಶಾಲ ಪ್ರದೇಶವನ್ನು ಈ ಕಂಬಳಕ್ಕಾಗಿ ಮೀಸಲಿಡಲಾಗಿದೆ. ಜಿಲ್ಲಾಡಳಿತವು ಕಂಬಳ ನಡೆಯುವ ಕರೆಯನ್ನು ವಿಜಯ ದಶಮಿ ಎಂದು ನಾಮಕರಣ ಮಾಡಿದ್ದು, ಇದು ದಸರಾ ಹಬ್ಬದ ಗಾಂಭೀರ್ಯಕ್ಕೆ ಸಾಕ್ಷಿಯಾಗಿದೆ. ಸುಮಾರು 147 ಮೀಟರ್ ಉದ್ದದ ಈ ಕರೆಯಲ್ಲಿ, ಕೋಣಗಳು 140 ಮೀಟರ್ವರೆಗೆ ಓಟದ ಕೌಶಲ್ಯ ಪ್ರದರ್ಶಿಸಲಿವೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಿರ್ಮಾಣವಾಗಿರುವ ಈ ಕರೆ, ಕೇವಲ ವೇದಿಕೆಯಲ್ಲ, ತುಳುನಾಡಿನ ಸಾಂಸ್ಕೃತಿಕ ಕಲಾಕೃತಿಯಾಗಿ ರೂಪುಗೊಂಡಿದೆ. ಕೋಣಗಳ ಸುರಕ್ಷತೆ ಮತ್ತು ವೇಗವನ್ನು ಗಮನದಲ್ಲಿಟ್ಟುಕೊಂಡು ಅ.15ರಂದೇ ಪ್ರಾಯೋಗಿಕ ಓಟವನ್ನು ನಡೆಸಲಾಗುವುದು. ಇದು ಕಂಬಳದ ಕರೆಯ ಗುಣಮಟ್ಟವನ್ನು ಅಳೆಯಲು ನಿರ್ಣಾಯಕ ಹಂತವಾಗಿದೆ.
ಪುತ್ತೂರಿನಿಂದ ಮೈಸೂರಿಗೆ ಕೋಣಗಳ ಪಯಣ
ಕಂಬಳದಲ್ಲಿ ಭಾಗವಹಿಸುವ ಸುಮಾರು 160 ಜೊತೆ ಆಯ್ದ ಕೋಣಗಳಿಗಾಗಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅ.16ರ ಬೆಳಿಗ್ಗೆ 10:30ಕ್ಕೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೋಣಗಳು ಮೈಸೂರಿನತ್ತ ಹೊರಡಲಿವೆ. ಘಟ್ಟದ ಹಾದಿಯಲ್ಲಿ ಕೋಣಗಳಿಗೆ ಆಯಾಸವಾಗದಂತೆ ಮಡಿಕೇರಿಯಲ್ಲಿ ಸುಮಾರು 3 ಗಂಟೆಗಳ ಕಾಲ ಕಡ್ಡಾಯ ವಿಶ್ರಾಂತಿ ನೀಡಲಾಗುವುದು. ಈ ವೇಳೆ ಕೋಣಗಳಿಗೆ ಉತ್ತಮ ದರ್ಜೆಯ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಅ.16ರ ರಾತ್ರಿ ವೇಳೆಗೆ ಕೋಣಗಳು ಮೈಸೂರು ತಲುಪಲಿದ್ದು, ಅ.17ರ ಇಡೀ ದಿನ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಮೈಸೂರಿನ ತಂಪಾದ ಹವಾಗುಣ ಕೋಣಗಳಿಗೆ ಬಹಳ ಹಿತಕರವಾಗಿರಲಿದ್ದು, ಅವು ಮರುದಿನದ ಓಟಕ್ಕೆ ಸಂಪೂರ್ಣ ಸಜ್ಜಾಗಲಿವೆ.
ಕ್ರೀಡೆಯ ಸ್ವರೂಪ, ಬಹುಮಾನಗಳ ಭರಾಟೆ
ಕಂಬಳದಲ್ಲಿ ಭಾಗವಹಿಸುವ ಕೋಣಗಳನ್ನು ಕಠಿಣ ಪರಿಶೀಲನೆಗೆ ಒಳಪಡಿಸಲಾಗಿದೆ. ಕೇವಲ ಸೀನಿಯರ್ ಹಾಗೂ ಅತ್ಯುತ್ತಮ ವೇಗ ಹೊಂದಿರುವ ಅರ್ಹ ಕೋಣಗಳಿಗೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರವು ದೊಡ್ಡ ಜೊತೆ ಕೋಣಗಳಿಗೆ 65 ಸಾವಿರ ರೂ. ಹಾಗೂ ಸಣ್ಣ ಜೊತೆ ಕೋಣಗಳಿಗೆ 50 ಸಾವಿರ ರೂ. ಸಾರಿಗೆ ಭತ್ಯೆಯನ್ನು ಘೋಷಿಸಿದೆ. ಹಿರಿಯ ವಿಭಾಗದಲ್ಲಿ ವಿಜೇತರಿಗೆ 16 ಗ್ರಾಂ ಚಿನ್ನ ಮತ್ತು ದ್ವಿತೀಯ ಸ್ಥಾನಕ್ಕೆ 8 ಗ್ರಾಂ ಚಿನ್ನ ನೀಡಲಾಗುತ್ತದೆ. ಮಾಲೀಕರ ಬೇಡಿಕೆಯಂತೆ ಮೂರು ಮತ್ತು ನಾಲ್ಕನೇ ಸ್ಥಾನಕ್ಕೂ ಪದಕಗಳನ್ನು ನೀಡುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಲಾಗುತ್ತಿದೆ. ಭಾಗವಹಿಸುವ ಪ್ರತಿಯೊಬ್ಬ ಕೋಣದ ಮಾಲೀಕರಿಗೂ ಮೈಸೂರು ಪೇಟ ಮತ್ತು ಶಾಲು ಹೊದಿಸಿ ಗೌರವಿಸುವ ಮೂಲಕ ನಾಡಹಬ್ಬದ ಘನತೆಯನ್ನು ಹೆಚ್ಚಿಸಲಾಗುವುದು.
ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಈ ಕಂಬಳವನ್ನು ವೀಕ್ಷಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ಯಾವುದೇ ಶುಲ್ಕವಿಲ್ಲ. 15 ಸಾವಿರ ಜನರು ಕುಳಿತು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಉಳಿದವರಿಗೆ ಮೂರು ಬ್ಯಾಚ್ಗಳಲ್ಲಿ ಪಾಸ್ ನೀಡುವ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಕೋಣಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರತ್ಯೇಕ ಜಾಗ ನಿರ್ಮಿಸಲಾಗುತ್ತಿದೆ. ಕರಾವಳಿಯ ಮೀನಿನ ಕಬಾಬ್, ಕುಚ್ಚಲಕ್ಕಿ ಗಂಜಿ, ಬಗೆಬಗೆಯ ತುಳುನಾಡಿನ ತಿನಿಸುಗಳನ್ನು ಸವಿಯಲು 4-5 ಎಕರೆ ಪ್ರದೇಶದಲ್ಲಿ ಮಳಿಗೆಗಳನ್ನು ತೆರೆಯಲಾಗುತ್ತಿದೆ. ತುಳು ಮತ್ತು ಕನ್ನಡ ಭಾಷೆಗಳಲ್ಲಿನ ರನ್ನಿಂಗ್ ಕಮೆಂಟರಿಯು ಸ್ಥಳೀಯರಿಗೂ ಮತ್ತು ಮೈಸೂರಿನ ಜನರಿಗೂ ಆಟದ ರೋಚಕತೆಯನ್ನು ತಲುಪಿಸಲಿದೆ.
ಕಾನೂನು ಅಡೆತಡೆಗಳೇ ಇಲ್ಲ!
ಮೈಸೂರು ಕಂಬಳಕ್ಕೆ ವಿರೋಧ ವ್ಯಕ್ತಪಡಿಸುವವರಿಗೆ ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದ್ದು, “ರಾಜ್ಯ ಸರ್ಕಾರವೇ ಆಯೋಜಿಸುತ್ತಿರುವ ಈ ದಸರಾ ದಸರಾ ಕಂಬಳಕ್ಕೆ ಯಾವುದೇ ಕಾನೂನು ತೊಡಕಿಲ್ಲ. ಹೈಕೋರ್ಟ್ ಈಗಾಗಲೇ ಕಂಬಳ ನಡೆಸಲು ಹಸಿರು ನಿಶಾನೆ ತೋರಿಸಿದೆ. ರಾಜಮನೆತನದೊಂದಿಗೆ ಈ ಕ್ರೀಡೆಗೆ ಇರುವ ಐತಿಹಾಸಿಕ ನಂಟನ್ನು ಮತ್ತೆ ಜೀವಂತಗೊಳಿಸುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಕಾರ, ಕಂಬಳವು ಕೇವಲ ಒಂದು ಓಟದ ಸ್ಪರ್ಧೆಯಲ್ಲ; ಇದು ರೈತಾಪಿ ವರ್ಗದ ಶೌರ್ಯದ ಸಂಕೇತ. ಬೆಂಗಳೂರಿನಲ್ಲಿ ಯಶಸ್ವಿಯಾದ ನಂತರ, ಮೈಸೂರಿನಲ್ಲಿ ನಡೆಯಲಿರುವ ಈ ಕಂಬಳವು ತುಳುನಾಡು ಮತ್ತು ಮೈಸೂರು ಭಾಗದ ಜನರ ನಡುವೆ ಹೊಸ ಸಾಂಸ್ಕೃತಿಕ ಬಾಂಧವ್ಯವನ್ನು ಬೆಸೆಯಲಿದೆ ಎಂದಿದ್ದಾರೆ. ಅ. 18ರಂದು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿರುವ ಈ ಕಂಬಳ ಕೂಟ, ಅ.19ರ ತಡರಾತ್ರಿ ಬಹುಮಾನ ವಿತರಣೆಯೊಂದಿಗೆ ಸಮಾರೋಪಗೊಳ್ಳಲಿದೆ. ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಪುಟಗಳಲ್ಲಿ ಈ ಕಂಬಳವು ಒಂದು ಹೊಸ ಅಧ್ಯಾಯವಾಗಿ ದಾಖಲಾಗಲಿದೆ.

